-ರಾಜ್ಯ ಅಂಗನವಾಡಿ ನೌಕರರ ಸಂಘ ಜಿಲ್ಲಾ ಸಮಿತಿ ನೇತೃತ್ವ ಧರಣಿ । ಅಂಗನವಾಡಿ ಕಾರ್ಯಕರ್ತೆಯರನ್ನು ಕಾಯಂಗೊಳಿಸಲು ಒತ್ತಾಯ
ಕನ್ನಡಪ್ರಭ ವಾರ್ತೆ ರಾಯಚೂರು
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಕಾಯಂಗೊಳಿಸಬೇಕು, ಗೌರವಧನವನ್ನು ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ( ಸಿಐಟಿಯು) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಲಾಯಿತು. ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಸಮೀಪದ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಸೇರಿದ ಸಮಿತಿ ಪದಾಧಿಕಾರಿಗಳು, ಸದಸ್ಯರು, ಮುಖಂಡರು ಪ್ರತಿಭಟನೆ ನಡೆಸಿ ಸಿಐಟಿಯು ರಾಜ್ಯ ಘಟಕದ ವತಿಯಿಂದ ಬೆಳಗಾವಿಯ ಸುವರ್ಣಸೌಧದ ಬಳಿ ನಡೆಯುತ್ತಿರುವ ಹೋರಾಟದ ಭಾಗವಾಗಿ ಎರಡು ದಿನಗಳ ಹೋರಾಟಕ್ಕೆ ಬೆಂಬಲಿಸಿದರು.ಗುಜರಾತ್ ಹೈಕೊರ್ಟ್ ತೀರ್ಪಿನಂತೆ ಅಂಗನವಾಡಿ ಕಾರ್ಯಕರ್ತೆರು ಹಾಗೂ ಸಹಾಯಕಿಯರನ್ನು ವರ್ಗ 3 ಮತ್ತು 4 ಎಂದು ಪರಿಗಣಿಸಿ ಕಾಯಂ ಮಾಡಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 14 ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ (ಐಸಿಡಿಸಿ) 2023ರ ಆದೇಶದ ಪ್ರಕಾರ ಕೂಡಲೇ ಗ್ರಾಚ್ಯೂಟಿ ಹಣ ಬಿಡುಗಡೆ ಮಾಡಬೇಕು. ಎಲ್ಲರಿಗೂ ಅನ್ವಯಿಸಿ 2018ರಿಂದ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರ ಗೌರವಧನ ಹೆಚ್ಚಳ ಮಾಡದ ಕಾರಣ ಕುಟುಂಬ ನಿರ್ವಹಣೆಗೆ ಸಮಸ್ಯೆಯಾಗಿದೆ. ಕೂಡಲೇ 26,000 ರು. ಗೌರವಧನದ ಜೊತೆಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಘೋಷಿಸಿದಂತೆ 15 ಸಾವಿರ ಗೌರವಧನವನ್ನೂ ಸಹ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿ ಕೇಂದ್ರಗಳಿಗೆ ಮೂಲಸೌಕರ್ಯ ಒದಗಿಸಬೇಕು, ಕೇಂದ್ರಗಳಿಗೆ ಒದಗಿಸುವ ಪೂರಕ ಪೌಷ್ಟಿಕ ಆಹಾರಕ್ಕೆ ಜಿಎಸ್ಟಿಯಿಂದ ಹೊರಗಿಡಬೇಕು. ಘಟಕ ವೆಚ್ಚ ಹೆಚ್ಚಳ ಮಾಡಿ ಹಿಂದಿನಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮೆನು ಅಂತಿಮಗೊಳ್ಳವ ವ್ಯವಸ್ಥೆ ಜಾರಿಯಾಗಬೇಕು.
ಶಿಕ್ಷಣ ಇಲಾಖೆ ಮತ್ತು ಎಡಿಎಂಸಿ ಗಳಿಂದ ಪ್ರಾರಂಭ ಮಾಡಿರುವ ಎಲ್ಕೆಜಿ, ಯುಕೆಜಿ ನಿಲ್ಲಿಸಿ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್ಕೆಜಿ, ಯುಕೆಜಿ ಆರಂಭಿಸಬೇಕೆಂದು ಆಗ್ರಹಿಸಿದರು.
-------------------