ಆಹಾರ ಸುರಕ್ಷತೆ, ಗುಣಮಟ್ಟ ಪಾಲನೆ ಕಡ್ಡಾಯ

KannadaprabhaNewsNetwork | Published : Dec 18, 2024 12:45 AM

ಸಾರಾಂಶ

ದೊಡ್ಡಬಳ್ಳಾಪುರ: ಜಿಲ್ಲೆಯ ವ್ಯಾಪ್ತಿಯಲ್ಲಿರುವ ಹೋಟೆಲ್, ಬೇಕರಿ, ಬೀದಿಬದಿ ಆಹಾರ ಘಟಕಗಳು ಹಾಗೂ ಇತರೆ ಆಹಾರ ತಯಾರಿಕಾ ಉದ್ದಿಮೆಗಳು ಆಹಾರ ಸುರಕ್ಷತೆ ಮತ್ತು ಆಹಾರದ ಗುಣಮಟ್ಟ ಕಾಪಾಡಿಕೊಳ್ಳುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್ ಹೇಳಿದರು.

ದೊಡ್ಡಬಳ್ಳಾಪುರ: ಜಿಲ್ಲೆಯ ವ್ಯಾಪ್ತಿಯಲ್ಲಿರುವ ಹೋಟೆಲ್, ಬೇಕರಿ, ಬೀದಿಬದಿ ಆಹಾರ ಘಟಕಗಳು ಹಾಗೂ ಇತರೆ ಆಹಾರ ತಯಾರಿಕಾ ಉದ್ದಿಮೆಗಳು ಆಹಾರ ಸುರಕ್ಷತೆ ಮತ್ತು ಆಹಾರದ ಗುಣಮಟ್ಟ ಕಾಪಾಡಿಕೊಳ್ಳುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್ ಹೇಳಿದರು.

ಬೆಂ.ಗ್ರಾ ಜಿಲ್ಲಾಡಳಿತ ಭವನದಲ್ಲಿ ಏರ್ಪಡಿಸಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕಳಪೆ ಗುಣಮಟ್ಟದ ಆಹಾರದ ಬಗ್ಗೆ ಮಾಧ್ಯಮಗಳಲ್ಲಿ ಆಗಾಗ ಸುದ್ದಿಗಳು ಬರುತ್ತಿರುತ್ತವೆ. ಆಹಾರ ತಯಾರಿಕೆಗೆ ಕಳಪೆ ಪದಾರ್ಥಗಳ ಬಳಕೆ, ಒಮ್ಮೆ ಬಳಸಿದ ಎಣ್ಣೆ ಮರು ಬಳಕೆ ಇತ್ಯಾದಿ ಕಳಪೆ ಆಹಾರ ಪದಾರ್ಥ ತಯಾರಿಸುವ ಉದ್ದಿಮೆಗಳಿಗೆ ದಂಡದ ಜೊತೆಗೆ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಆಹಾರ ಸುರಕ್ಷತೆ ಅಧಿಕಾರಿಗಳು ಹೋಟೆಲ್, ಬೀದಿಬದಿ ಆಹಾರ ಘಟಕಗಳಿಗೆ ಕಾಲಕಾಲಕ್ಕೆ ಭೇಟಿ ನೀಡಿ, ಆಹಾರದ ಸುರಕ್ಷತೆ ಮತ್ತು ಗುಣಮಟ್ಟ ಪರಿಶೀಲಿಸಬೇಕು. ಆಹಾರ ಉದ್ದಿಮೆಗಳಿಗೆ ಜಾಗೃತಿ ಮೂಡಿಸಬೇಕು. ಜಿಲ್ಲಾ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲಾ, ಅಂಗನವಾಡಿ ಮತ್ತು ವಸತಿನಿಲಯ, ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಆಹಾರ ತಯಾರಿಕೆ, ಸ್ವಚ್ಛತೆ ಬಗ್ಗೆ ಪರಿಶೀಲಿಸಿ ಅರಿವು ಮೂಡಿಸಬೇಕು ಎಂದರು.

ಕೃತಕ ಬಣ್ಣ ನಿಷೇಧ:

ಈಗಾಗಲೇ ಸರ್ಕಾರ ಗೋಬಿ ಹಾಗೂ ಕಬಾಬ್ ತಯಾರಿಕೆಗೆ ಕೃತಕ ಬಣ್ಣ ಬಳಸುವುದನ್ನು ನಿಷೇಧಿಸಿದೆ. ಅದಾಗ್ಯೂ ಹೋಟೆಲ್‌ಗಳು, ರೆಸ್ಟೋರೆಂಟ್, ಬೀದಿಬದಿ ಘಟಕಗಳು ಕೃತಕ ಬಣ್ಣ ಬಳಸಿ ಆಹಾರ ತಯಾರಿಸುತ್ತಿರುವುದು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ವೆಜ್ ಆಹಾರ, ಚಿಕನ್, ಫಿಶ್ ಇತರೆ ಕಬಾಬ್ ಗಳ ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಬಳಸಿದರೆ ಏಳು ವರ್ಷಗಳಿಂದ ಜೀವಾವಧಿ ಜೈಲು ಶಿಕ್ಷೆ ಮತ್ತು ₹10 ಲಕ್ಷದವರೆಗೆ ದಂಡ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಯಮ 59ರಡಿ ವಿಧಿಸಲಾಗುವುದು. ಆಹಾರ ಘಟಕಗಳಿಗೆ ಕಡ್ಡಾಯ ಪರವಾನಗಿ ಪಡೆದಿರಬೇಕು ಎಂದರು.

41 ಘಟಕಗಳಿಗೆ ನೋಟಿಸ್:

ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಅಂಕಿತಾಧಿಕಾರಿ ಡಾ.ಧರ್ಮೇಂದ್ರ ಮಾತನಾಡಿ, ಜಿಲ್ಲೆಯಲ್ಲಿ 5326 ಆಹಾರ ಪರವಾನಗಿ ಪಡೆದ ಆಹಾರ ಉದ್ದಿಮೆಗಳಿದ್ದು ಏಪ್ರಿಲ್ ಮಾಹೆಯಿಂದ ನವೆಂಬರ್ ಅಂತ್ಯದವರೆಗೆ 209 ಆಹಾರ ಘಟಕಗಳಿಗೆ ಭೇಟಿ ನೀಡಿ 41 ಘಟಕಗಳಿಗೆ ನೋಟಿಸ್ ನೀಡಲಾಗಿದೆ. 22 ಘಟಕಗಳಿಗೆ ದಂಡ ವಿಧಿಸಿ 69,000 ರು. ದಂಡ ಸಂಗ್ರಹಿಸಲಾಗಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಮರೇಶ್, ಜಿಲ್ಲಾ ಕ್ಷಯರೋಗ ನಿಯಂತ್ರಣ ಆಧಿಕಾರಿ ಡಾ.ನಾಗೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪ್ರೇಮ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ತಾಲೂಕು ಆಹಾರ ಸುರಕ್ಷತೆ ಅಧಿಕಾರಿಗಳು ಉಪಸ್ಥಿತರಿದ್ದರು.

16ಕೆಡಿಬಿಪಿ5-

ಬೆಂ.ಗ್ರಾ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಡಾ. ಶಿವಶಂಕರ್‌ ಅಧ್ಯಕ್ಷತೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ ನಡೆಯಿತು.

Share this article