ಕನ್ನಡಪ್ರಭ ವಾರ್ತೆ ಶಹಾಪುರ
ಮುಂಬರುವ ಬಜೆಟ್ ನಲ್ಲಿ ಐಸಿಡಿಎಸ್‌ಗೆ ಬಜೆಟ್ ಹಂಚಿಕೆಯನ್ನು ಹೆಚ್ಚಿಸಬೇಕು. ಅಂಗನವಾಡಿ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ, ಸಾಮಾಜಿಕ ಭದ್ರತೆ, ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿ ಅಂಗನವಾಡಿ ನೌಕರರ ಸಂಘ ತಾಲೂಕು ಸಮಿತಿ ವತಿಯಿಂದ ನಗರದ ತಹಸೀಲ್ದಾರರ ಮುಖಾಂತರ ಭಾರತ ಸರ್ಕಾರದ ಹಣಕಾಸು ಸಚಿವರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಅಂಗನವಾಡಿ ನೌಕರರ ಸಂಘದ ತಾಲೂಕು ಕಾರ್ಯದರ್ಶಿ ಯಮನಮ್ಮ ದೋರನಹಳ್ಳಿ, ಕಳೆದ ಐದು ದಶಕಗಳಿಂದ ನಿಸ್ವಾರ್ಥವಾಗಿ ದುಡಿಯುತ್ತಿರುವ 26 ಲಕ್ಷ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರನ್ನು ಇನ್ನು ಕಾರ್ಮಿಕರನ್ನಾಗಿ ಗುರುತಿಸಲು ಕೇಂದ್ರ ಸರ್ಕಾರ ಸಿದ್ಧವಿಲ್ಲದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
ದೇಶದ ಜನರಲ್ಲಿ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಲ್ಲಿ ಅತಿ ಹೆಚ್ಚು ಅಪೌಷ್ಟಿಕತೆಯ ಸವಾಲನ್ನು ನಮ್ಮ ದೇಶ ಗಂಭೀರವಾಗಿ ಎದುರಿಸುತ್ತಿದೆ. ದೇಶದಲ್ಲಿ ಪ್ರತಿ ವರ್ಷ ಸರಾಸರಿ ಆರು ವರ್ಷದ ಒಳಗಿನ ಒಂಬತ್ತು ಲಕ್ಷ ಮಕ್ಕಳು ಸಾಯುತ್ತಿದ್ದಾರೆ. ಇದಕ್ಕೆ ಸರಕಾರವೇ ನೇರ ಹೊಣೆಯಾಗಿದೆ ಎಂದು ಅವರು ಆರೋಪಿಸಿದರು.ಅಂಗನವಾಡಿ ನೌಕರರ ಸಂಘದ ವಡಗೇರಾ ತಾಲೂಕಾಧ್ಯಕ್ಷೆ ಇಂದಿರಾದೇವಿ ಕೊಂಕಲ್ ಮಾತನಾಡಿ, ಅಂಗನವಾಡಿ ಕಾರ್ಯಕರ್ತರು ಗ್ರಾಜುಟಿಗೆ ಹಾರರ್ ಎಂದು ಎರಡು ವರ್ಷ ಹಿಂದೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅದನ್ನು ಜಾರಿ ಮಾಡಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ತಿಂಗಳಿಗೆ ಕನಿಷ್ಠ ವೇತನ 26 ಸಾವಿರ ರು.ಗಳು, ಮಾಸಿಕ ಪಿಂಚಣಿ 10 ಸಾವಿರ ರು.ಗಳು, ಪಿಎಫ್, ಈಎಸ್ಐ ಇತ್ಯಾದಿ ಕೂಡಲೇ ತೀರ್ಮಾನಿಸಿ ಜಾರಿ ಮಾಡಬೇಕು ಹಾಗೂ ಎಲ್ಲಾ ಯೋಜನಾ ಕಾರ್ಮಿಕರಿಗೆ ಅನ್ವಯವಾಗುವಂತೆ ಕೂಡಲೇ ವೇತನ ಆಯೋಗ ರಚನೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಸಿಐಟಿಯು ತಾಲೂಕು ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ, ತಾಲೂಕು ಉಪಾಧ್ಯಕ್ಷ ರೇಣುಕಾ ಗೋಗಿ, ಸಹ ಕಾರ್ಯದರ್ಶಿ ಅನ್ನಪೂರ್ಣ, ಕಾರ್ಯದರ್ಶಿ ಚಂದಮ್ಮ ನಾಯ್ಕಲ್, ಮಹಾದೇವಿ ಕಾಡಮಗೇರಾ, ಮಹಾನಂದಾ, ಕವಿತಾ, ಮಾನಮ್ಮ, ಯಲ್ಲಮ್ಮ, ಸರಸ್ವತಿ ಸೇರಿದಂತೆ ಇತರರಿದ್ದರು.-
ಕೋಟ್ -1: ಯಾವುದೇ ರೂಪದಲ್ಲಿ ಐಸಿಡಿಎಸ್ ಅನ್ನು ಖಾಸಗೀಕರಣಗೊಳಿಸಲು, ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಸೇವೆಗಳು ಕೂಡ ಖಾಸಗೀಕರಣಗೊಳಿಸಲು ಬಿಡುವುದಿಲ್ಲ. ಶ್ರಮಿಕರಿಗೆ ಮಾರಕವಾಗಿರುವ ಕಾರ್ಮಿಕ ಸoಹಿತೆಗಳನ್ನು ವಾಪಸ್ ಪಡೆಯುವವರಿಗೆ ಹೋರಾಟ ನಿಲ್ಲುವುದಿಲ್ಲ.- ಬಸಲಿಂಗಮ್ಮ ನಾಟೇಕಾರ, ಅಧ್ಯಕ್ಷೆ, ಅಂಗನವಾಡಿ ನೌಕರರ ಸಂಘ ಶಹಾಪುರ.