ಮುಂಡಗೋಡದಲ್ಲಿ ಹಾವು ಕಚ್ಚಿ ಅಂಗನವಾಡಿ ಬಾಲಕಿ ಸಾವು

KannadaprabhaNewsNetwork | Published : Jan 1, 2025 12:02 AM

ಸಾರಾಂಶ

ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್‌ನಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತಾದರೂ ಕಿಮ್ಸ್‌ ತಲುಪುವಷ್ಟರಲ್ಲಿ ಮಗು ಸಾವಿಗೀಡಾಗಿದೆ.

ಮುಂಡಗೋಡ: ವಿಷಪೂರಿತ ಹಾವು ಕಚ್ಚಿ ನಾಲ್ಕು ವರ್ಷದ ಬಾಲಕಿ ಮೃತಪಟ್ಟ ಘಟನೆ ಪಟ್ಟಣದ ಮಾರಿಕಾಂಬಾ ನಗರದ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ನಡೆದಿದೆ.

ಮಯೂರಿ ಸುರೇಶ ಕುಂಬ್ಳೆಪ್ಪನವರ ಮೃತಪಟ್ಟ ಬಾಲಕಿ. ಮಂಗಳವಾರ ಎಂದಿನಂತೆ ಅಂಗನವಾಡಿಗೆ ಹೋಗಿದ್ದ ಬಾಲಕಿ ಬೆಳಗ್ಗೆ ೧೦.೩೦ ಗಂಟೆ ಸುಮಾರಿಗೆ ಹೊರಗೆ ಇರುವ ಶೌಚಾಲಯಕ್ಕೆ ಮೂತ್ರ ವಿಸರ್ಜನೆಗೆ ತೆರಳುವ ಮಾರ್ಗದಲ್ಲಿಯೇ ವಿಷಪೂರಿತ ಹಾವು ಮಗುವಿನ ಕಾಲಿಗೆ ಕಚ್ಚಿದೆ.

ವಿಷಯ ತಿಳಿದ ಸ್ಥಳಿಯರು ಮಗುವನ್ನು ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್‌ನಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತಾದರೂ ಕಿಮ್ಸ್‌ ತಲುಪುವಷ್ಟರಲ್ಲಿ ಮಗು ಸಾವಿಗೀಡಾಗಿದ್ದು, ಕಿಮ್ಸ್ ಆಸ್ಪತ್ರೆ ವೈದ್ಯರು ಮಗು ಮೃತಪಟ್ಟಿರುವ ಬಗ್ಗೆ ದೃಢಪಡಿಸಿದ್ದಾರೆ. ಮಗುವಿನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರಾಮು ಬಯಲುಸೀಮೆ ಅವರು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ನಿರ್ಲಕ್ಷ್ಯ ಆರೋಪ: ಹಾವು ಕಚ್ಚಿದ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ ತಕ್ಷಣ ಅಗತ್ಯ ಚಿಕಿತ್ಸೆ ನೀಡುವ ಬದಲು ಮುಂಡಗೋಡ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಲು ಕೆಲಹೊತ್ತು ಕಾಲಹರಣ ಮಾಡಿ ಕೊನೆ ಕ್ಷಣದಲ್ಲಿ ಹುಬ್ಬಳ್ಳಿ ಕಿಮ್ಸ್‌ಗೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದ ಕಾರಣ ಮಗು ಮೃತಪಟ್ಟಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.ಹಾವು ಕಚ್ಚಿದ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ ತಕ್ಷಣ ಕರ್ತವ್ಯದಲ್ಲಿದ್ದ ವೈದ್ಯರು, ಮಕ್ಕಳ ತಜ್ಞ ವೈದ್ಯರ ಸಲಹೆ ಪಡೆದು ಹಾವಿನ ವಿಷಕ್ಕೆ ಪ್ರತಿರೋಧಕ ಚಿಕಿತ್ಸೆ ಪ್ರಾರಂಭಿಸಬೇಕಿತ್ತು. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಸ್ಪರೂಪರಾಣಿ ಪಾಟೀಲ ತಿಳಿಸಿದರು.

ಕಾಳಿಂಗ ಸರ್ಪ ಸೆರೆ

ಶಿರಸಿ: ತಾಲೂಕಿನ ಮತ್ತಿಘಟ್ಟಾದ ಮನೆಯ ಬಚ್ಚಲುಮನೆ ಒಲೆಯ ಒಳಗಡೆ ಅವಿತುಕೊಂಡಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಉರಗ ತಜ್ಞ ಮಾಝ್ ಸೈಯದ್ ಅವರು ಜಾನ್ಮನೆ ವಿಭಾಗದ ಅರಣ್ಯ ಸಿಬ್ಬಂದಿ ಸಹಾಯದಿಂದ ಹಿಡಿದು ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕಾಳಿಂಗ ಅಣ್ಣಪ್ಪ ಗೌಡ ಎಂಬವರ ಮನೆಯ ಗೋಡೆಗೆ ತಾಗಿದ್ದ ನೀರು ಕಾಯಿಸುವ ಒಲೆಯ ಒಳಗೆ ಬಂದಿತ್ತು. ಒಲೆಗೆ ಬೆಂಕಿ ಹಾಕುವ ಸಂದರ್ಭದಲ್ಲಿ ಕಟ್ಟಿಗೆ ಇಡುವಾಗ ಹಾವು ಬುಸುಗುಟ್ಟುವುದನ್ನು ನೋಡಿದ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ.

ಉರಗ ತಜ್ಞ ಮಾಝ್ ಸೈಯದ್ ಜತೆ ಆಗಮಿಸಿದ ಅರಣ್ಯ ಇಲಾಖೆಯವರು ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

Share this article