ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಜವರಿಕೊಪ್ಪಲಿನಲ್ಲಿ ಕುರುಬ ಸಮುದಾಯದ ೧೦೦ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದ್ದು, ಕೃಷಿ ಹಾಗೂ ಮೇಕೆ ಸಾಕಾಣಿಕೆ ಇವರುಗಳ ವೃತ್ತಿಯಾಗಿದೆ ಹಾಗೂ ೨೦ಕ್ಕೂ ಹೆಚ್ಚು ಪುಟ್ಟ ಮಕ್ಕಳು ಅಂಗನವಾಡಿಯಲ್ಲಿ ಕಲಿಯುತ್ತಿದ್ದಾರೆ. ಶಾಶ್ವತ ಕಟ್ಟಡವಿಲ್ಲದೇ ಲಭ್ಯವಿದ್ದ ಒಂದು ಕೊಟ್ಟಿಗೆಯಲ್ಲಿ ಅಂಗನವಾಡಿ ನಡೆಸಲಾಗುತ್ತಿದ್ದು, ಆ ಕೊಠಡಿ ಪುಟ್ಟಮಕ್ಕಳ ಕಲಿಕೆಗೆ ಪೂರಕ ವಾತಾವರಣ ಉಂಟು ಮಾಡದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಸತತ ಪ್ರಯತ್ನದ ಫಲವಾಗಿ ಏಳೆಂಟು ವರ್ಷಗಳ ಹಿಂದೆ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಗಿತ್ತು. ಇತ್ತೀಚೆಗೆ ಕಟ್ಟಡದ ನಿರ್ಮಾಣ ಕಾರ್ಯ ಪೂರ್ಣವಾಗಿದ್ದರೂ, ಮೂಲಭೂತ ಸೌಲಭ್ಯಗಳಲ್ಲಿ ಅಗತ್ಯವಾದ ಶೌಚಾಲಯವಿದ್ದರೂ ಶೌಚಗುಂಡಿ ವ್ಯವಸ್ಥೆ ಮಾಡಿಲ್ಲ ಹಾಗೂ ವಿದ್ಯುತ್ ವೈರಿಂಗ್ ಮಾಡದ ಹಿನ್ನೆಲೆಯಲ್ಲಿ ಉದ್ಘಾಟನೆ ಭಾಗ್ಯ ಕಾಣದೇ ಕಲಿಯುವ ತವಕದ ಪುಟ್ಟಮಕ್ಕಳ ಕೊಟ್ಟಿಗೆ ಭಾಗ್ಯಕ್ಕೆ ಮುಕ್ತಿ ಕಾಣಿಸಲು ಹಿರಿಯ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕಿದೆ.