ಮರಿಯಮ್ಮನಹಳ್ಳಿ: ಮಕ್ಕಳಲ್ಲಿ ಕ್ರಿಯಾತ್ಮಕ ಹಾಗೂ ವೈಜ್ಞಾನಿಕ ಮನೋಭಾವನೆ ವೃದ್ಧಿಸುವಲ್ಲಿ ಪೋಷಣ ಅಭಿಯಾನ ಮಹತ್ವದ ಪಾತ್ರ ವಹಿಸುತ್ತದೆ. ಮಕ್ಕಳ ಆರೋಗ್ಯ ರಕ್ಷಣೆಗೆ ಪೋಷಣಾ ಅಭಿಯಾನ ಅತ್ಯುತ್ತಮ ಕಾರ್ಯಕ್ರಮವಾಗಿದೆ ಎಂದು ಸ್ಥಳೀಯ ಪಪಂ ಅಧ್ಯಕ್ಷ ಆದಿಮನಿ ಹುಸೇನ್ ಬಾಷಾ ಹೇಳಿದರು.ಇಲ್ಲಿನ 9ನೇ ವಾರ್ಡಿನಲ್ಲಿರುವ 27ನೇ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ನಡೆದ ಪೋಷಣಾ ಅಭಿಯಾನ ಕಾಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಗನವಾಡಿ ಶಾಲೆಗೆ ಬರುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಕಲಿಕಾ ಶಿಕ್ಷಣವನ್ನು ನೀಡಿದರೆ, ಇಂಗ್ಲೀಷ್ ಮಾಧ್ಯಮಕ್ಕೆ ಕಳುಹಿಸುವ ಬದಲು ಅಂಗನವಾಡಿ ಶಾಲೆಗೆ ತಮ್ಮ ಮಕ್ಕಳನ್ನು ಕಳುವಿಸುವಂತೆ ಶಾಲಾ ವಾತಾವರಣ ಇರಬೇಕು. ಶಾಲೆಗೆ ಬಂದ ಮಕ್ಕಳಿಗೆ ಹಾಡುವುದು, ಆಟವಾಡುವುದು ಸೇರಿದಂತೆ ಅಂಗನವಾಡಿ ಶಾಲೆಗೆ ಹೋಗಬೇಕು ಎನ್ನುವಷ್ಚರ ಮಟ್ಟಿಗೆ ಶಾಲೆ ಆಕರ್ಷಿತವಾಗಿರಬೇಕು. ಆಗ ಅಂಗನವಾಡಿ ಶಾಲೆಗೆ ಮಕ್ಕಳನ್ನು ಖಂಡಿತವಾಗಿಯೂ ಎಲ್ಲರೂ ಕಳುಹಿಸುತ್ತಾರೆ. ಆಗ ಅಂಗನವಾಡಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ತಾನಾಗಿಯೇ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.
ಹೊಸಪೇಟೆಯ ಸಿಡಿಪಿಓ ಸಿಂದು ಎಲೆಗಾರ್ ಮಾತನಾಡಿ, ಸೆಪ್ಟಂಬರ್ ತಿಂಗಳಲ್ಲಿ ರಾಷ್ಟ್ರೀಯ ಪೋಷಣ ಅಭಿಯಾನ ನಡೆಯುತ್ತಿದ್ದು, ಅಪೌಷ್ಠಿಕತೆ ನಿವಾರಿಸುವಲ್ಲಿ ಸರ್ಕಾರ ಆಯೋಜಿಸಿರುವ ರಾಷ್ಟ್ರೀಯ ಪೋಷಣ್ ಅಭಿಯಾನ ಒಂದು ಮಹತ್ತರ ಕಾರ್ಯಕ್ರಮವಾಗಿದೆ. ಕಿಶೋರಿ ಬಾಲಕಿಯರಿಂದ ಹಿಡಿದು ಗರ್ಭಿಣಿಯರು ಸೇರಿದಂತೆ ಮಹಿಳೆಯರು ಮತ್ತು ಮಕ್ಕಳನ್ನು ಅಪೌಷ್ಠಿಕತೆಯಿಂದ ಮುಕ್ತಗೊಳಿಸುವ ಕಾರ್ಯಕ್ರಮವಾಗಿದೆ. ಮಕ್ಕಳಿಗೆ ತರಕಾರಿ, ಹಣ್ಣು, ಸಿರಿಧಾನ್ಯಗಳ ಬಳಿಕೆ ಹೆಚ್ಚಾಗಿ ಸೇವಿಸಬೇಕಾಗಿದೆ ಎಂದು ಅವರು ಹೇಳಿದರು.ಪಪಂ ಉಪಾಧ್ಯಕ್ಷೆ ಲಕ್ಷ್ಮೀ ರೋಗಾಣಿ ಮಂಜುನಾಥ, ಪಪಂ ಸದಸ್ಯೆ ಅಶ್ವಿನಿ ವಿ, ನಾಗರಾಜ ಸಭೆಯಲ್ಲಿ ಮಾತನಾಡಿದರು.
ಪಪಂ ಸದಸ್ಯರಾದ ಸಿ. ಸುಮಂಗಳಮ್ಮ ಮಂಜುನಾಥ, ಎಲ್. ಹುಲಿಗಿಬಾಯಿ ರುದ್ರನಾಯ್ಕ್, ಅಂಗನವಾಡಿ ಮೇಲ್ವಿಚಾರಕರಾದ ರೇಣುಕ ಯಲ್ಲಮ್ಮ, ಪ್ರಣಿಳಾ ಪಾಟೇಲ್, ಸ್ಥಳೀಯ ವಾಲ್ಮೀಕಿ ಸಂಘದ ಅಧ್ಯಕ್ಷ ರೋಗಾಣಿ ಮಂಜುನಾಥ, ಸ್ಥಳೀಯ ಮುಖಂಡ ರುದ್ರನಾಯ್ಕ ಸೇರಿದಂತೆ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರು ಸಭೆಯಲ್ಲಿ ಉಪಸ್ಥಿತರಿದ್ದರು.ಕೆ.ಶಾರದಮ್ಮ ಪ್ರಾರ್ಥಿಸಿದರು. ಶ್ಯಾಂಭವಿ ಸ್ವಾಗತಿಸಿದರು. ಅಶ್ವಿನಿ ವಂದಿಸಿದರು. ಹುಲಿಗೆಮ್ಮ ನಿರೂಪಿಸಿದರು.