ಶಾಲೆಗೆ ಒಂದು ದಿನ ರಜೆ ಮಾಡದೆ ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದ್ದೇನೆ
ಯಲಬುರ್ಗಾ: ತಾಲೂಕಿನ ಹೊಸಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಶುಭಪ್ರಿಯಾ ಲಮಾಣಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷಾ ಫಲಿತಾಂಶದಲ್ಲಿ ೬೨೦ಅಂಕ ಪಡೆಯುವ ಮೂಲಕ ಜಿಲ್ಲೆಗೆ ಮೂರನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ಪಟ್ಟಣದ ಅಂಗನವಾಡಿ ಮೇಲ್ವಿಚಾರಕಿ ಲಲಿತಾ ಯಲ್ಲಪ್ಪ ನಾಯ್ಕರ ಅವರ ಪುತ್ರಿ ಶುಭಪ್ರಿಯಾ ಲಮಾಣಿ ಹತ್ತನೇ ತರಗತಿಯ ಇಂಗ್ಲಿಷ್ ಮಾಧ್ಯಮದಲ್ಲಿ ೬೨೦ (೯೯.೨೦%) ಅಂಕ ಪಡೆಯುವ ಮೂಲಕ ಜಿಲ್ಲೆಗೆ ಮೂರನೇ ಸ್ಥಾನ, ಯಲಬುರ್ಗಾ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅತ್ಯುತ್ತಮ ಸಾಧನೆ ಮಾಡಿರುವ ಶುಭಪ್ರಿಯಾ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಿ, ಎಂಬಿಬಿಎಸ್ ಮಾಡುವ ಕನಸು ಹೊಂದಿದ್ದಾರೆ. ಮುಂದೆ ಐಎಎಸ್ ಅಧಿಕಾರಿಯಾಗುವ ಮಹದಾಸೆ ಹೊಂದಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ವಸತಿ ಶಾಲೆಯ ಶಿಕ್ಷಕರು ಮತ್ತು ಪಾಲಕರ ಪ್ರೋತ್ಸಾಹ ಸಾಕಷ್ಟಿದೆ. ಶಾಲೆಗೆ ಒಂದು ದಿನ ರಜೆ ಮಾಡದೆ ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದ್ದೇನೆ. ಹಾಗೇ ನಿತ್ಯ ವಸತಿ ಶಾಲೆಗೆ ಬರುತ್ತಿದ್ದ ಕನ್ನಡಪ್ರಭ ಯುವ ಆವೃತ್ತಿಯಲ್ಲಿ ಬರುತ್ತಿದ್ದ ಹತ್ತನೇ ತರಗತಿಯ ಎಲ್ಲ ವಿಷಯಗಳ ಸಿಲೆಬಸ್ ಸಹಾಯವಾಗಿದೆ ಎಂದು ಕನ್ನಡಪ್ರಭಕ್ಕೆ ಶುಭಪ್ರಿಯಾ ತಿಳಿಸಿದರು.
ನಮ್ಮ ಮಗಳು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಅತ್ಯುತ್ತಮ ಅಂಕ ಗಳಿಸಿರುವುದು ಖುಷಿಯಾಗಿದೆ. ಓದಿನಲ್ಲಿ ಆಸಕ್ತಿ ಹೊಂದಿರುವ ನಮ್ಮ ಮಗಳು ಮುಂದೆ ಐಎಎಸ್ ಅಧಿಕಾರಿಯಾಗುವ ಕನಸು ಹೊಂದಿದ್ದಾಳೆ. ಫಲಿತಾಂಶ ಪಡೆಯಲು ವಸತಿ ಶಾಲೆಯ ಶಿಕ್ಷಕರ ಶ್ರಮವೂ ಸಾಕಷ್ಟಿದೆ ಎಂದು ವಿದ್ಯಾರ್ಥಿನಿಯ ಪಾಲಕರಾದ ಲಲಿತಾ ಯಲ್ಲಪ್ಪ ನಾಯ್ಕರ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.