ಕನ್ನಡಪ್ರಭ ವಾರ್ತೆ ಸಕಲೇಶಪುರ
ಮನವಿಯನ್ನು ಸ್ವೀಕರಿಸಿ ಮಾತನಾಡಿದ ಸಿಮೆಂಟ್ ಮಂಜು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸಮಾಜದ ಭವಿಷ್ಯವಾದ ಮಕ್ಕಳ ಅಭಿವೃದ್ಧಿಗೆ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ. ಅಂಗನವಾಡಿ ನೌಕರರ ಸಮಸ್ಯೆಗಳ ಬಗ್ಗೆ ತಮಗೆ ಅರಿವು ಇದ್ದು, ಸಂಘದ ಮುಖಂಡರು ಮಂಡಿಸಿರುವ ಬೇಡಿಕೆಗಳ ಕುರಿತು ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಪಾಲನೆ, ಪೋಷಣೆ, ಪೌಷ್ಠಿಕ ಆಹಾರ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅವರ ಸೇವೆಯನ್ನು ಸರ್ಕಾರ ಸಮರ್ಪಕವಾಗಿ ಪರಿಗಣಿಸಬೇಕು. ನೌಕರರ ಹಿತದೃಷ್ಟಿಯಿಂದ ಬೇಡಿಕೆಗಳನ್ನು ಪರಿಶೀಲಿಸಿ, ಸಾಧ್ಯವಾದ ಮಟ್ಟಿಗೆ ಸರ್ಕಾರದ ಗಮನಕ್ಕೆ ತಂದು ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ನಾಗಲಕ್ಷ್ಮೀ ಮಾತನಾಡಿ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ, 6 ವರ್ಷದೊಳಗಿನ ಮಕ್ಕಳ ಪಾಲನೆ-ಪೋಷಣೆ, ಪೌಷ್ಟಿಕ ಆಹಾರ, ಆರೋಗ್ಯ ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಣ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು. ರಾಜ್ಯದ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಿ ಕೇಂದ್ರಗಳನ್ನು ಮತ್ತಷ್ಟು ಬಲಪಡಿಸುವಂತೆ ಆಗ್ರಹಿಸಿದರು.ಇದೇ ವೇಳೆ ಅಂಗನವಾಡಿ ನೌಕರರನ್ನು ಕನಿಷ್ಠ ವೇತನ ಕಾಯ್ದೆಯ ವ್ಯಾಪ್ತಿಗೆ ತಂದು ಇಎಸ್‌ಐ ಹಾಗೂ ಪಿಎಫ್ ಸೌಲಭ್ಯಗಳನ್ನು ನೀಡಬೇಕು, ಖಾಲಿ ಇರುವ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳನ್ನು ಭರ್ತಿ ಮಾಡಬೇಕು ಮತ್ತು ನಿವೃತ್ತ ಕಾರ್ಯಕರ್ತೆಯರಿಗೆ ಬಾಕಿ ಇರುವ ಗ್ರಾಚ್ಯುಟಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.ಈ ಬೇಡಿಕೆಗಳ ಹಿನ್ನೆಲೆಯಲ್ಲಿ ಮಾರ್ಚ್ 14 ಮತ್ತು 15ರಂದು ರಾಜ್ಯದ ಎಲ್ಲಾ ಶಾಸಕರು ಹಾಗೂ ಸಚಿವರಿಗೆ ಮನವಿ ಸಲ್ಲಿಸಲಾಗುತ್ತಿದ್ದು, ಬೇಡಿಕೆಗಳು ಈಡೇರದಿದ್ದರೆ ಮಾರ್ಚ್ 23ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಂಘದ ತಾಲೂಕು ಕಾರ್ಯದರ್ಶಿ ಸುಮಿತ್ರಾ, ಪದಾಧಿಕಾರಿಗಳಾದ ಪ್ರೀತು, ಧನಲಕ್ಷ್ಮೀ, ಯಶೋಧ, ಲಲಿತಾ ಹಾಗೂ ಅಂಗನವಾಡಿ ನೌಕರರು ಉಪಸ್ಥಿತರಿದ್ದರು.