ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಈ ಅರಣ್ಯ ಪ್ರದೇಶದ ಭದ್ರಾ ಅಭಯಾರಣ್ಯ ವ್ಯಾಪ್ತಿಗೆ ಸೇರಿದ ಮುತ್ತೋಡಿ ಅರಣ್ಯ ವಲಯದ ಎಮ್ರಹಳ್ಳಿ ಮತ್ತು ಹೊಸಖಾನ್ ಸುತ್ತಮುತ್ತಲಿನ ಕಾಡು ಪ್ರದೇಶಗಳಲ್ಲಿ ಬೆಂಕಿ ವೇಗವಾಗಿ ಹರಡಿದ್ದು, ಒಣಗಿದ ತರಗೆಲೆಗಳು ಮತ್ತು ಹುಲ್ಲಿನಿಂದಾಗಿ ಕ್ಷಣಾರ್ಧ ದಲ್ಲೇ ಕಿಲೋ ಮೀಟರ್‌ಗಳಷ್ಟು ದೂರ ಬೆಂಕಿ ವ್ಯಾಪಿಸಿದೆ.
ಇದರಿಂದ ಅಪಾರ ಪ್ರಮಾಣದಲ್ಲಿ ಅಪರೂಪದ ಸಸ್ಯ ಸಂಪತ್ತಿಗೆ ಹಾನಿಯಾಗಿದೆ. ಅರಣ್ಯದ ಜೀವ ವೈವಿಧ್ಯತೆಗೆ ಹೊಡೆತ ಬಿದ್ದಿದೆ. ಬೆಂಕಿಯ ತೀವ್ರತೆಯಿಂದ ಅಭಯಾರಣ್ಯದಲ್ಲಿ ಇರುವ ಪ್ರಾಣಿ-ಪಕ್ಷಿಗಳ ಜೀವಕ್ಕೂ ಅಪಾಯ ಎದುರಾಗಿದೆ.ಕಾಡಿನೊಳಗಿನ ಅನೇಕ ಪ್ರಾಣಿಗಳು ಬೆಂಕಿಯಿಂದ ತಪ್ಪಿಸಿಕೊಳ್ಳಲು ಅರಣ್ಯದ ಬೇರೆ ಭಾಗಗಳಿಗೆ ಸ್ಥಳಾಂತರವಾಗುತ್ತಿರುವ ಸಾಧ್ಯತೆಯಿದೆ ಎಂದು ಅರಣ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಬೆಂಕಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಬೆಂಕಿ ವ್ಯಾಪಿಸಿರುವ ಪ್ರದೇಶಗಳಲ್ಲಿ ಸಿಬ್ಬಂದಿ ಅಗ್ನಿ ನಿಯಂತ್ರಣ ಕಾರ್ಯಾಚರಣೆ ನಡೆಸುತ್ತಿದ್ದು, ಮತ್ತಷ್ಟು ಬೆಂಕಿ ಹರಡುವುದನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅರಣ್ಯದಲ್ಲಿ ವಾಚರ್‌ಗಳ ಕೊರತೆ ಇಂದ ಬೆಂಕಿ ನಿಯಂತ್ರಿಸಲು ತೊಂದರೆ ಆಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅರಣ್ಯ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.