ಚಿತ್ರದುರ್ಗ: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಖಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ವತಿಯಿಂದ ಜಿಲ್ಲಾ ಪಂಚಾಯಿತಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಭಾರತಿ ಆರ್.ಬಣಕಾರ್ ರವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಡಿ.ಎಂ.ಮಲಿಯಪ್ಪ, ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ವರ್ಗ-3 ಮತ್ತು 4 ಎಂದು ಪರಿಗಣಿಸಿ ಸೇವೆ ಖಾಯಂಗೊಳಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತೆಯರಿಗೆ 2018ರಿಂದ ಕೇಂದ್ರ ಸರ್ಕಾರ ಗೌರವ ಧನ ಹೆಚ್ಚಳ ಮಾಡಿಲ್ಲ. ಅವರು ಯಾವುದೇ ಜೀವನ ಭದ್ರತೆಯಿಲ್ಲದೆ ದುಡಿಯುತ್ತಿದ್ದಾರೆ. ಮಾಸಿಕ ಗೌರವ ಧನ 26 ಸಾವಿರ ರು.ಗಳಿಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯ ಸರ್ಕಾರ ಘೋಷಿಸಿದಂತೆ ಹದಿನೈದು ಸಾವಿರ ರೂಗಳಿಗೆ ಗೌರವ ಧನ ಹೆಚ್ಚಿಸಬೇಕು. ನಿವೃತ್ತಿಯಾದವರಿಗೆ ಇಡುಗಂಟು ಮಾಸಿಕ ಹತ್ತು ಸಾವಿರ ರು ಪಿಂಚಣಿ ನೀಡಬೇಕು. ಶಿಕ್ಷಣ ಇಲಾಖೆ ಎಸ್ಡಿಎಂಸಿಗಳಿಂದ ಪ್ರಾರಂಭಿಸಿರುವ ಎಲ್‌ಕೆಜಿ, ಯುಕೆಜಿ ನಿಲ್ಲಿಸಿ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ, ಯುಕೆಜಿ ತೆರೆಯಬೇಕು. ಐ.ಸಿ.ಡಿ.ಎಸ್.ಯೋಜನೆಗೆ ಪ್ರತ್ಯೇಕ ನಿರ್ದೇಶನಾಲಯ ಬೇಕು ಎಂದು ಆಗ್ರಹಿಸಿದರು.ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿರುವ ನರೇಂದ್ರಮೋದಿಗೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಬಿಸಿಯೂಟ, ಆಶಾ ಕಾರ್ಯಕರ್ತೆಯರ ಕಷ್ಟ ಗೊತ್ತಾಗುವುದಿಲ್ಲ. ಅವರೇನಿದ್ದರೂ ಅದಾನಿ, ಅಂಬಾನಿ ಪರವಾಗಿದ್ದಾರೆ. ಉದ್ಯಮಿಗಳಿಗೆ ಲಕ್ಷಾಂತರ ಕೋಟಿ ರುಗಳ ಸಾಲ ಮನ್ನಾ ಮಾಡಲು ಮಾತ್ರ ಅವರಿಂದ ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ಮೊಬೈಲ್‍ನಲ್ಲಿ ದಾಖಲೆ ನಿರ್ವಹಿಸುತ್ತಿರುವುದರಿಂದ ದಾಖಲಾತಿ ಬರೆಸುವ ಸಂಖ್ಯೆ ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಇಂದಿರಮ್ಮ, ಜೆ.ಎನ್.ಗಂಗಮ್ಮ, ಬಿ.ಬೋರಮ್ಮ, ನಿರ್ಮಲ, ಆಶಾರಾಣಿ, ಮಂಜುಳ, ಕಮಲ, ಎಸ್.ಕಲ್ಯಾಣಮ್ಮ ಮುಂತಾದವರು ಉಪಸ್ಥಿತರಿದ್ದರು.