ಹಾವೇರಿ: ಕನಿಷ್ಠ ವೇತನ, ಅಂಗನವಾಡಿಗಳಲ್ಲಿ ಎಲ್‌ಕೆಜಿ-ಯುಕೆಜಿ ವಿಸ್ತರಣೆ, ಬಿಎಲ್‌ಓ ಕೆಲಸದಿಂದ ಮುಕ್ತಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದ ಜಿಲ್ಲಾಡಳಿತ ಭವನದ ಎದುರು ಹಾನಗಲ್ಲ ತಾಲೂಕು ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ನೂರಾರು ಕಾರ್ಯಕತೆಯರು ಶುಕ್ರವಾರ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ರು., ಸಹಾಯಕಿಯರಿಗೆ 10 ಸಾವಿರ ರು. ಗೌರವಧನ ನೀಡಬೇಕು. ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಎಲ್‌ಕೆಜಿ-ಯುಕೆಜಿ ವಿಸ್ತರಣೆಯಾಗುವುದರ ಜತೆಗೆ ಅನುದಾನವನ್ನು ಬಿಡುಗಡೆಗೊಳಿಸಬೇಕು. 3-6 ವರ್ಷದ ಮಕ್ಕಳಿಗೆ ಆರಂಭಿಕ ಬಾಲ್ಯ ಆರೈಕೆ, ಶಿಕ್ಷಣ ಮತ್ತು ಅಭಿವೃದ್ಧಿ ಹಕ್ಕನ್ನು ಕಾನೂನಿನ ಮೂಲಕ ಖಾತರಿಪಡಿಸಬೇಕು. ಮಕ್ಕಳಿಗೆ ಸಮವಸ್ತ್ರ, ಪುಸ್ತಕಗಳು ಹಾಗೂ ಆಟಿಕೆಗಳನ್ನು ಒದಗಿಸಬೇಕು. 2011ರಿಂದ ನಿವೃತ್ತಿಯಾದವರಿಗೆ ಗ್ರಾಚ್ಯುಟಿ ಪಾವತಿಸಬೇಕೆಂದು ಆಗ್ರಹಿಸಿದರು.
ಅಂಗನವಾಡಿ ನೌಕರರನ್ನು ಬಿಎಲ್‌ಓ, ಎಸ್‌ಐಆರ್ ಹಾಗೂ ಇತರೆ ಸಮೀಕ್ಷಾ ಕೆಲಸಗಳಿಂದ ಮುಕ್ತಗೊಳಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಕಾಯಂಗೊಳಿಸಬೇಕು. ಕಾರ್ಯಕರ್ತೆಯರಿಗೆ ಮಾಸಿಕ 41 ಸಾವಿರ ಹಾಗೂ ಸಹಾಯಕಿಯರಿಗೆ 35 ಸಾವಿರ ರು. ಕನಿಷ್ಠ ವೇತನ ನೀಡಬೇಕು. ಪೋಷಣ್ಟ್ರ್ಯಾಂಕರ್ ಹೆಸರಿನಲ್ಲಿ ಕಿರುಕುಳವನ್ನು ನಿಲ್ಲಿಸಬೇಕು. ಮೊಬೈಲ್, ಡೇಟಾ ಹಾಗೂ ನಿರ್ವಹಣಾ ವೆಚ್ಚವನ್ನು ಮರುಪಾವತಿ ಮಾಡಬೇಕು. ಡಿಜಿಟಲ್ ಕೆಲಸಕ್ಕಾಗಿ ಉತ್ತಮ ಗುಣಮಟ್ಟದ ಟ್ಯಾಬ್‌ಗಳನ್ನು ಹಾಗೂ ಡೇಟಾ ಪ್ಯಾಕ್ ಒದಗಿಸಬೇಕು. ಎಫ್‌ಆರ್‌ಎಸ್ ಮತ್ತು ಇ-ಕೆವೈಸಿ ಕಡ್ಡಾಯಗೊಳಿಸಿರುವುದನ್ನು ಹಿಂಪಡೆಯಬೇಕೆಂದು ಸರ್ಕಾರಗಳಿಗೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಸುನಿತಾ ದೊಡ್ಡಮನಿ, ಸರಸ್ವತಿ ಪೂಜಾರ, ಶಿವಲೀಲಾ ಬೇಟಗೇರಿ, ರೇಣುಕಾ ವಿಭೂತಿ, ಆಯಿಷಾ ಹೊಂಬರಡಿ, ಗಿರಿಜಾ ದೊಡ್ಮನಿ, ಕಮಲಾಕ್ಷಿ ಹೋತನಹಳ್ಳಿ, ಗೀತಾ ಹಾವನೂರು ಸೇರಿದಂತೆ ಅನೇಕ ಕಾರ್ಯಕರ್ತೆಯರು ಭಾಗವಹಿಸಿದ್ದರು.