ಕೂಡ್ಲಿಗಿ: ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತವೆ ಎಂಬ ಮಾತಿದೆ. ಇತ್ತೀಚೆಗೆ ಮದುವೆಗಳು ಅಂತರಿಕ್ಷದಲ್ಲಿ ನಡೆಯುತ್ತಿವೆ. ಕವಿಗಳ ಕವಿತೆ ವಾಚನ ಮಾಡುವುದರ ಮೂಲಕವೂ ಮದುವೆಯಾಗುತ್ತವೆ. ಆದರೆ ಇಲ್ಲೊಬ್ಬ ಯುವಕ ತಾನು ರಚಿಸಿದ ಪುಸ್ತಕವನ್ನು ತನ್ನ ಮದುವೆಯ ಸಂದರ್ಭದಲ್ಲೇ ಕುಟುಂಬದ ಸದಸ್ಯರು, ಕವಿಗಳು, ಸಾಹಿತಿ, ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಿ ಹೊಸ ಬಾಳಿಗೆ ಅಡಿ ಇಟ್ಟಿದ್ದಾರೆ.
ತಾಲೂಕಿನ ಹುಲಿಕೆರೆ ಗ್ರಾಮದ ವಸಂತ ಸಜ್ಜನ ಅವರ ಪುತ್ರ ಎಚ್.ವಿ. ಆದರ್ಶ ಸಜ್ಜನ ಎನ್ನುವ ಯುವಕನೇ ಮದುವೆಗೆ ಮುಂಚೆ (ಜುಲೈ 7) ತನ್ನ ಮನೆಯ ಆವರಣದಲ್ಲೇ ತಾನು ರಚಿಸಿದ "ಸಮತ್ವ ಕಂಡ ಸಮಾಜ " ಕಥಾ ಸಂಕಲನವನ್ನು ತಮ್ಮ ಕುಟುಂಬದ ಸದಸ್ಯರು, ಮದುವೆಗೆ ಬಂದ ಅತಿಥಿಗಳು, ಬೀಗರ ಸಮ್ಮುಖದಲ್ಲಿ ಸರಳವಾಗಿ ಬಿಡುಗಡೆಗೊಳಿಸಿದರು.ಎಚ್.ವಿ. ಆದರ್ಶ ಸಜ್ಜನ ತಾನು ಕಂಡುಂಡ ಬದುಕಿನ ವೈರುಧ್ಯಗಳಿಗೆ ಕಥೆಗಳ ರೂಪ ಕೊಟ್ಟು ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾನೆ. ಮದುವೆಯ ದಿನವೇ ಈ ಪುಸ್ತಕ ಲೋಕಾರ್ಪಣೆ ಮಾಡಬೇಕೆಂಬ ಅವರ ಬಹು ದಿನದ ಸಂಕಲ್ಪ ಈಡೇರಿತು. ಮದುವೆಗೆ ಬಂದ ಸಂಬಂಧಿಕರಿಗೆ, ಕಾರ್ಯಕ್ರಮಕ್ಕೆ ಆಗಮಿಸಿದ ಸಾಹಿತ್ಯಾಸಕ್ತರಿಗೆ ಮದುವೆಯ ಸಾಂಪ್ರದಾಯಿಕ ಆಚರಣೆಗಳ ಜೊತೆಗೆ ಪುಸ್ತಕ ಬಿಡುಗಡೆಯೂ ಹೊಸ ಸ್ಪರ್ಶ ಪಡೆಯಿತು.
ಇಂತಹ ಅಪರೂಪದ ಕಾರ್ಯಕ್ರಮಕ್ಕೆ ಹಿರಿಯ ಬರಹಗಾರ ಎ.ಆರ್. ಮಣಿಕಾಂತ್ ಆಗಮಿಸಿ ಪುಸ್ತಕ ಬಿಡುಗಡೆಗೊಳಿಸಿದರು. ಕಾನಾಮಾಡಗು ದಾಸೋಹಮಠದ ಐಮಡಿ ಶರಣಾರ್ಯರು ಸಾನಿಧ್ಯ ವಹಿಸಿದ್ದರು. ಕೂಡ್ಲಿಗಿ ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ, ಕವಿಗಳಾದ ಎನ್.ಎಂ. ರವಿಕುಮಾರ್, ಪ್ರಗತಿಪರ ಕೖಷಿಕ ಎಚ್.ವಿ. ಸಜ್ಜನ, ಸಾರಂಗಮಠದ ಸಂಗಮೇಶ್ವರಯ್ಯ, ವಸಂತ್ ಸಜ್ಜನ, ಬಿ.ಬಿ. ಶಿವಾನಂದ, ನಿರಂಜನ, ಸ್ವರೂಪಾನಂದ ಸೇರಿದಂತೆ ನೂರಾರು ಕುಟುಂಬದ ಸದಸ್ಯರು ಸಾಕ್ಷಿಯಾದರು.ನಾನು ಕಂಡ ಸಮಾಜದ ಆಗು-ಹೋಗುಗಳನ್ನು ಬರಹ ರೂಪಕ್ಕಿಳಿಸಿರುವೆ. ನನ್ನ ಮದುವೆಯ ಸಂದರ್ಭದಲ್ಲಿಯೇ ಈ ಪುಸ್ತಕ ಬಿಡಿಗಡೆ ಮಾಡುವ ಕನಸಿತ್ತು. ಅದು ಯಶಸ್ವಿಯಾಗಿದೆ ಎನ್ನುತ್ತಾರೆ ಮದುಮಗ ಎಚ್.ವಿ.ಆದರ್ಶ.