ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು
ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿಗಳು ಸಮಾಜಕ್ಕೆ ಅಂಟಿದ ದೊಡ್ಡ ಶಾಪವಾಗಿದ್ದು ಇವುಗಳ ನಿರ್ಮೂಲನೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಪಿಎಸ್‌ಐ ಮಹೇಶ್ ಲಕ್ಷ್ಮಣ ಹೊಸಪೇಟೆ ಹೇಳಿದರು.ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ನಡೆದ ತೆರೆದ ಮನೆ ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ವಿಡಿಯೋ ಮೂಲಕ ಬಾಲ್ಯ ವಿವಾಹ, ಬಾಲ ಕಾರ್ಮಿಕತೆಯ ಕುರಿತು ಜಾಗೃತಿ ಮೂಡಿಸಿ ಮಾತನಾಡಿದರು.
ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಪಡೆಯುವ ಮೂಲಭೂತ ಹಕ್ಕಿದೆ. ಯಾರೂ ಕೂಡ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳಬಾರದು. ನಿಮ್ಮ ಸುತ್ತಮುತ್ತ ಇಂತಹ ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಯಾವುದೇ ಭಯವಿಲ್ಲದೆ ಪೊಲೀಸ್ ಇಲಾಖೆಗೆ ಅಥವಾ ಸಹಾಯವಾಣಿಗೆ ಮಾಹಿತಿ ನೀಡಬೇಕು ಎಂದರು.ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿಗಳು ಸಮಾಜಕ್ಕೆ ಅಂಟಿದ ಬಹುದೊಡ್ಡ ಶಾಪವಾಗಿದೆ.ಅಲ್ಲದೆ ಕಾನೂನುಬಾಹಿರ ಅಪರಾಧಗಳಾಗಿವೆ.ಈ ಪಿಡುಗು ನಿರ್ಮೂಲನೆಯಾಗಬೇಕಾದರೆ ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು.ಮಕ್ಕಳ ಹಕ್ಕುಗಳ ಕುರಿತು ಮಾಹಿತಿ ಪಡೆದುಕೊಂಡು ನಿಮ್ಮಗಳ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ಶಾಲಾ ಮಕ್ಕಳಿಗೆ ಆಕರ್ಷಕ ವಿಡಿಯೋ ತುಣುಕುಗಳು ಮತ್ತು ಸಾಕ್ಷ್ಯಚಿತ್ರಗಳ ಮೂಲಕ ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕ ಪದ್ಧತಿ,ಮಕ್ಕಳ ಹಕ್ಕುಗಳು, ರಸ್ತೆ ಸುರಕ್ಷತೆ, ಹೆಲ್ಮೆಟ್ ಜಾಗೃತಿ, ಸೈಬರ್ ಅಪರಾಧಗಳು, ಮೊಬೈಲ್ ಬಳಕೆಯ ಬಗ್ಗೆ ಶಾಲಾ ಮಕ್ಕಳಿಗೆ ಅದರಿಂದಾಗುವ ದುಷ್ಪರಿಣಾಮಗಳ ಕುರಿತು ಮನಮುಟ್ಟುವಂತೆ ಜಾಗೃತಿ ಮೂಡಿಸಲಾಯಿತು. ವಿಡಿಯೋ ವೀಕ್ಷಿಸಿದ ವಿದ್ಯಾರ್ಥಿಗಳು ಕಾನೂನು ಅಂಶಗಳ ಕುರಿತು ಕುತೂಹಲದಿಂದ ಮಾಹಿತಿ ಪಡೆದರು.