ಜನವರಿ 25ರಂದು ಸೌಲಭ್ಯಕ್ಕಾಗಿ ಅಂಗನವಾಡಿ ನೌಕರರ ಪ್ರತಿಭಟನೆ: ವಿಶಾಲಾಕ್ಷಿ ಮೃತ್ಯುಂಜಯ

KannadaprabhaNewsNetwork | Published : Jan 24, 2025 12:48 AM

ಸಾರಾಂಶ

ಅಂಗನವಾಡಿ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ಎಚ್‌ಕೆಆರ್‌ ಬಣದಿಂದ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ

ಕಾರ್ಯಕರ್ತೆಯರಿಗೆ ₹15 ಸಾವಿರ, ಸಹಾಯಕಿಯರಿಗೆ ₹10 ಸಾವಿರ ಗೌರವಧನಕ್ಕೆ ಒತ್ತಾಯ । ಸರ್ಕಾರಿ ನೌಕರರೆಂದು ಪರಿಗಣಿಸಲು ಆಗ್ರಹ

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಂಗನವಾಡಿ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ಎಚ್‌ಕೆಆರ್‌ ಬಣದಿಂದ ಜ.24ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆ ಮುಖಂಡರಾದ ವಿಶಾಲಾಕ್ಷಿ ಮೃತ್ಯುಂಜಯ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30ಕ್ಕೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸಂಘಟನೆ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಿ, ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಪತ್ರವನ್ನು ಅರ್ಪಿಸಲಿದ್ದೇವೆ ಎಂದರು.

ರಾಜ್ಯದ ಅಂಗನವಾಡಿ ನೌಕರರಿಗೆ ಕನಿಷ್ಠ ವೇತನ ನಿಗದಿಪಡಿಸಬೇಕು. ರಾಜ್ಯ ಸರ್ಕಾರದ 6ನೇ ಗ್ಯಾರಂಟಿಯಾಗಿ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ 15 ಸಾವಿರ ರು. ಸಹಾಯಕಿಯರಿಗೆ 10 ಸಾವಿರ ರು. ಗೌರವಧನ ನೀಡಬೇಕು. ನಿವೃತ್ತರಾದ ಎಲ್ಲಾ ಅಂಗನವಾಡಿ ನೌಕರರಿಗೂ ಗ್ರಾಚ್ಯುಟಿ ಸೌಲಭ್ಯ ಜಾರಿಗೊಳಿಸಬೇಕು ಎಂದರು.

ಗುಜರಾತ್‌ ಹೈಕೋರ್ಟ್ ತೀರ್ಪಿನಂತೆ ಗ್ರಾಚ್ಯುಟಿ ನೀಡುವ ಜತೆಗೆ ಅಂಗನವಾಡಿ ನೌಕರರ ಸೇವೆಯನ್ನು ನಾಗರಿಕ ಸೇವೆಯಾಗಿ ಪರಿಗಣಿಸಿ, ಕಾರ್ಯಕರ್ತೆಯರನ್ನು ಸಿ ಮತ್ತು ಸಹಾಯಕಿಯರನ್ನು ಡಿ ದರ್ಜೆ ನೌಕಕರೆಂದು ಸ್ಥಾನಮಾನ ನೀಡುವ ಮೂಲಕ ಕಾಯಂಗೊಳಿಸಬೇಕು. ನಿಸ್ವಾರ್ಥದಿಂದ ದಶಗಳಿಂದಲೂ ದುಡಿಯುತ್ತಿರುವ ಅಂಗನವಾಡಿ ನೌಕರರ ಬೇಡಿಕೆಗಳನ್ನು ಪ್ರಥಮಾದ್ಯತೆ ಮೇಲೆ ಈಡೇರಿಸಬೇಕು ಎಂದು ಆಗ್ರಹಿಸಿದರು.

ಅತ್ಯಂತ ಕನಿಷ್ಠ ಪ್ರಮಾಣದ ಗೌರವಧನ ನೀಡುವ ಮೂಲಕ ಸರ್ಕಾರಗಳು ಸೇವೆ ಮಾಡಿಸಿಕೊಳ್ಳುತ್ತಿವೆ. ಕೇವಲ ಗೌರವ ಸೇವೆ ಎಂಬುದಾಗಿ ಪರಿಗಣಿಸಿ, ಬೇಕಾದಷ್ಟು ಸಂಭಾವನೆಯನ್ನು ನೀಡದೆ, ಶೋಷಣೆ ಮಾಡುತ್ತಿರುವುದು ಸರಿಯಲ್ಲ. ರಾಜ್ಯದಲ್ಲಿ 1.40 ಲಕ್ಷ ಅಂಗನವಾಡಿ ನೌಕರರು ಸೇರಿದಂತೆ ದೇಶದಲ್ಲಿ 28 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಇದ್ದು, ಸಂಕಷ್ಟದಲ್ಲೇ ಜೀವನ ಸಾಗಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಸಮಾಜದ ಕಟ್ಟಕಡೆಯ ವರ್ಗದ ಮಕ್ಕಳಿಗೆ ಪೌಷ್ಟಿಕ ಆಹಾರ, ಲಾಲನೆ, ಪಾಲನೆ, ಆರೋಗ್ಯ, ಶಾಲಾ ಪೂರ್ವ ಶಿಕ್ಷಣ ನೀಡುವುದೂ ಸೇರಿದಂತೆ ಗರ್ಭಿಣಿ ಬಾಣಂತಿಯರಿಗೆ ಪೂರಕ ಪೌಷ್ಟಿಕ ಆಹಾರ ಮತ್ತು ಆರೋಗ್ಯದ ಬಗ್ಗೆ ಕಾಳಜಿ ತೋರುವ ಮೂಲಕ ಮಕ್ಕಳು ಮತ್ತು ಮಹಿಳೆಯರಲ್ಲಿ ಅಪೌಷ್ಟಿಕತೆ ಹಾಗೂ ರಕ್ತ ಹೀನತೆಯಂತಹ ಸಮಸ್ಯೆಗಳನ್ನು ನಿವಾರಿಸಲು ಸೈನಿಕರಂತೆ ಸೇವೆ ಸಲ್ಲಿಸುತಿದ್ದಾರೆ. ಇಂತಹ ಮಹಿಳೆಯರ ಬದುಕಿಗೆ ಸರ್ಕಾರ ಸ್ಪಂದಿಸಲಿ ಎಂದು ವಿಶಾಲಾಕ್ಷಿ ಒತ್ತಾಯಿಸಿದರು.

ಸಂಘದ ಮುಖಂಡರಾದ ಎಂ.ಸರ್ವಮ್ಮ, ಜೆ.ಎಂ.ಉಮಾ, ಸಿ.ಬಿ.ಕಾಳಮ್ಮ, ಎಂ.ಎಸ್.ಹೊನ್ನಮ್ಮ, ಸುಧಾ, ಇಂದಿರಾ, ಚೌಡಮ್ಮ, ಸಾವಿತ್ರಮ್ಮ, ಪುಷ್ಪಾ, ಗಾಯತ್ರಿ ಬಾಯಿ ಜಾಧವ್, ಅಯೀಷಾ ಇತರರು ಇದ್ದರು.

Share this article