ಜಿಲ್ಲೆಯಲ್ಲಿ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ
ಕೊಪ್ಪಳ: ಶೈಕ್ಷಣಿಕ ಕಲಿಕೆಗೆ ಅಂಗನವಾಡಿಗಳೇ ಭದ್ರ ಬುನಾದಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಅಮರೇಶ್ ಹಾವಿನ ಹೇಳಿದರು.
ತಾಲೂಕಿನ ಹೊಸಲಿಂಗಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮೂರು ವರ್ಷ ಶಾಲಾ ಪೂರ್ವ ಶಿಕ್ಷಣ ಚಟುವಟಿಕೆ ಕಲಿತು 2027-27ನೇ ಸಾಲಿನಲ್ಲಿ 1ನೇ ತರಗತಿಗೆ ದಾಖಲಾಗುತ್ತಿರುವ ಮಕ್ಕಳ ಶಾಲಾ ಪ್ರವೇಶೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಬುನಾದಿ ಹಂತದ ಶಿಕ್ಷಣ ಬಹಳ ಮುಖ್ಯ. ಆದ್ದರಿಂದ ಮೂರರಿಂದ ಆರು ವಯಸ್ಸಿನ ಮಕ್ಕಳ ದೈಹಿಕ, ಬೌದ್ಧಿಕ, ಮಾನಸಿಕ, ಬೆಳವಣಿಗೆಗೆ ಶಾಲಾ ಪೂರ್ವ ಶಿಕ್ಷಣ ಕಲಿಕೆ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರಗಿ, ಜಿಲ್ಲಾಡಳಿತ ಜಿಪಂ ಕೊಪ್ಪಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಲಿಕೆ ಟಾಟಾ ಟ್ರಸ್ಟ್ ಕೊಪ್ಪಳ ಸಹಭಾಗಿತ್ವದಲ್ಲಿ ಜಿಲ್ಲೆಯಲ್ಲಿ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ ಎಂದು ಹೇಳಿದರು.
ಅಂಗನವಾಡಿ ಕೇಂದ್ರಗಳಲ್ಲಿ ಮೂರು ವರ್ಷ ಶಾಲಾ ಪೂರ್ವ ಶಿಕ್ಷಣ ಚಟುವಟಿಕೆ ಕಲಿತು ಶಾಲಾ ಸನ್ನದ್ಧತೆಯೊಂದಿಗೆ 2027-27ನೇ ಸಾಲಿನಲ್ಲಿ ಪ್ರಾರ್ಥಮಿಕ ಶಾಲೆಗಳಿಗೆ 1ನೇ ತರಗತಿಗೆ ದಾಖಲಾಗುತ್ತಿರುವ ಮಕ್ಕಳ ಶಾಲಾ ಪ್ರವೇಶೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದರು.
ಶಿಶು ಅಭಿವೃದ್ಧಿ ಯೋಜನೆಯ ಹೊಸಲಿಂಗಪುರ ಗ್ರಾಮದ 5 ಅಂಗನವಾಡಿ ಕೇಂದ್ರಗಳಿಂದ ಒಟ್ಟು 20 ಮಕ್ಕಳು ಹೊಸಲಿಂಗಪುರದ ಸರ್ಕಾರಿ ಪ್ರಾಥಮಿಕ ಶಾಲೆಗೆ ದಾಖಲಾಗುವ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭದ ಮೂಲಕ ಶಾಲೆಗೆ ಪ್ರವೇಶೋತ್ಸವ ಮಾಡಲಾಯಿತು.
ಕೊಪ್ಪಳ ಸಿಡಿಪಿಓ ರೋಹಿಣಿ ಕೊಟಗಾರ, ಪ್ರಾಥಮಿಕ ಶಾಲೆಯ ಮುಖ್ಯ ಉಪಾಧ್ಯಾಯ ನಾಗರತ್ನ, ಕಲಿಕೆ ಟಾಟಾ ಟ್ರಸ್ಟ್ ಕೊಪ್ಪಳ ಜಿಲ್ಲಾ ವ್ಯವಸ್ಥಾಪಕ ಅಶೋಕ್, ವಲಯ ಮೇಲ್ವಿಚಾರಕ ಸುಮಂಗಲ ಸಜ್ಜನ್, ಹೊಸಲಿಂಗಪುರ ಗ್ರಾಮದ 5 ಅಂಗನವಾಡಿಗಳ ಕಾರ್ಯಕರ್ತೆಯರು, ಮಕ್ಕಳ ಪೋಷಕರು ಹಾಗೂ ಮಕ್ಕಳಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.