ಬಿತ್ತನೆ ಸಮಯದಲ್ಲಿ ಯೂರಿಯಾ ಸೇರಿದಂತೆ ವಿವಿಧ ರಸಗೊಬ್ಬರಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಪಟ್ಟಣದ ಗೊಬ್ಬರ ಮಾರಾಟ ಮಳಿಗೆಗಳ ಮುಂದೆ ಬೆಳಗ್ಗೆಯಿಂದಲೇ ರೈತರ ದಟ್ಟಣೆ ಕಂಡುಬಂತು
ಹನುಮಸಾಗರ: ಬಸ್‌ಗಳಲ್ಲಿ ಸೀಟು ಕಾಯ್ದಿರಿಸಲು ಕರ್ಚಿಪ್, ಬ್ಯಾಗ ಅಥವಾ ನೀರಿನ ಬಾಟಲಿ ಇಡುವುದು ಸಾಮಾನ್ಯ, ಆದರೆ ಹನುಮಸಾಗರ ಪಟ್ಟಣದ ಗೊಬ್ಬರ ಮಾರಾಟ ಕೇಂದ್ರಗಳ ಮುಂದೆ ರೈತರು ತಮ್ಮ ಜಮೀನಿನ ಪಹಣಿ, ಆಧಾರ್ ಕಾರ್ಡ್ ಹಾಗೂ ಇತರೆ ದಾಖಲೆಗಳನ್ನು ಸರತಿ ಸಾಲಿನಲ್ಲಿ ಇಟ್ಟು ಗೊಬ್ಬರಕ್ಕಾಗಿ ಕಾಯುತ್ತಿದ್ದ ಅಪರೂಪದ ದೃಶ್ಯ ಬುಧವಾರ ಕಂಡು ಬಂತು.
ಕಳೆದ ಎರಡು-ಮೂರು ದಿನಗಳಿಂದ ಹನುಮಸಾಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆ ರೈತರು ತಮ್ಮ ಕೃಷಿ ಚಟುವಟಿಕೆ ಚುರುಕುಗೊಳಿಸಿದ್ದಾರೆ. ಜಮೀನುಗಳನ್ನು ಸ್ವಚ್ಛಗೊಳಿಸಿ ಬಿತ್ತನೆ ಕಾರ್ಯ ಆರಂಭಿಸಿರುವ ರೈತರು ಅಗತ್ಯ ಪ್ರಮಾಣದ ರಸಗೊಬ್ಬರ ಖರೀದಿಸಲು ಗೊಬ್ಬರ ಅಂಗಡಿಗಳತ್ತ ಧಾವಿಸಿದ್ದಾರೆ.ಬಿತ್ತನೆ ಸಮಯದಲ್ಲಿ ಯೂರಿಯಾ ಸೇರಿದಂತೆ ವಿವಿಧ ರಸಗೊಬ್ಬರಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಪಟ್ಟಣದ ಗೊಬ್ಬರ ಮಾರಾಟ ಮಳಿಗೆಗಳ ಮುಂದೆ ಬೆಳಗ್ಗೆಯಿಂದಲೇ ರೈತರ ದಟ್ಟಣೆ ಕಂಡುಬಂತು.ಗೊಬ್ಬರ ಪಡೆಯಲು ರೈತರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ಎಫ್‌ಐಡಿ ಪ್ರಕ್ರಿಯೆಯಿಂದ ವಿಳಂಬ: ಸರ್ಕಾರದ ನಿಯಮಾನುಸಾರ ಎಫ್‌ಐಡಿ (Farmer ID) ಮೂಲಕ ಗೊಬ್ಬರ ವಿತರಣೆ ನಡೆಯುತ್ತಿರುವುದರಿಂದ ಪ್ರತಿಯೊಬ್ಬ ರೈತನ ದಾಖಲೆ ಪರಿಶೀಲಿಸಿ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರವೇ ಗೊಬ್ಬರ ನೀಡಲಾಗುತ್ತಿದೆ.ಈ ಪ್ರಕ್ರಿಯೆಗೆ ಒಬ್ಬ ರೈತನಿಗೆ ಸುಮಾರು ಅರ್ಧ ಗಂಟೆ ಸಮಯ ಬೇಕಾಗುತ್ತಿದೆ. ಇದರ ನಡುವೆ ಕೆಲವೊಮ್ಮೆ ಸರ್ವರ್ ಸಮಸ್ಯೆ ಉಂಟಾಗುತ್ತಿರುವುದರಿಂದ ಗೊಬ್ಬರ ವಿತರಣೆಯಲ್ಲಿ ಮತ್ತಷ್ಟು ವಿಳಂಬ ಉಂಟಾಗುತ್ತಿದೆ. ಪರಿಣಾಮ ರೈತರು ಒಂದು ಗಂಟೆಗೂ ಹೆಚ್ಚು ಕಾಲ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ.ದೀರ್ಘಕಾಲ ಸರತಿಯಲ್ಲಿ ನಿಂತು ಸುಸ್ತಾದ ರೈತರು ತಮ್ಮ ಸ್ಥಾನ ಕಳೆದುಕೊಳ್ಳದಂತೆ ಪಹಣಿ, ಆಧಾರ್ ಝೆರಾಕ್ಸ್ ಹಾಗೂ ಇತರೆ ಅಗತ್ಯ ದಾಖಲೆ ಸರತಿಯಲ್ಲಿ ಇಟ್ಟು ಸಮೀಪದ ಮರಗಳ ನೆರಳಿನಲ್ಲಿ ಅಥವಾ ಅಂಗಡಿಗಳ ಪಕ್ಕದಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ಕಂಡುಬಂತು. ಇದರಿಂದ ಗೊಬ್ಬರ ಅಂಗಡಿಗಳ ಮುಂದೆ ದಾಖಲೆಗಳೇ ಸರತಿ ಸಾಲಿನಲ್ಲಿ ನಿಂತಿರುವಂತ ದೃಶ್ಯ ಜನರ ಗಮನ ಸೆಳೆಯಿತು.
ಎಫ್‌ಐಡಿ ಇಲ್ಲದೇ ಗೊಬ್ಬರ ನೀಡಿ: ಎಫ್‌ಐಡಿ ವ್ಯವಸ್ಥೆಯಿಂದ ರೈತರಿಗೆ ಅನಗತ್ಯ ವಿಳಂಬ ಉಂಟಾಗುತ್ತಿದೆ. ಬಿತ್ತನೆ ಸಮಯದಲ್ಲಿ ಪ್ರತಿಯೊಂದು ಕ್ಷಣವೂ ಅಮೂಲ್ಯವಾಗಿರುವುದರಿಂದ ಗೊಬ್ಬರ ಖರೀದಿ ಪ್ರಕ್ರಿಯೆ ಸರಳಗೊಳಿಸಬೇಕು. ತುರ್ತು ಸಂದರ್ಭದಲ್ಲಿ ಎಫ್‌ಐಡಿ ಇಲ್ಲದೇ ಸಹ ಗೊಬ್ಬರ ನೀಡಲು ಅವಕಾಶ ಕಲ್ಪಿಸಬೇಕು ಎಂದು ರೈತರು ಆಗ್ರಹಿಸಿದರು.ಮಳೆಯ ಅನುಕೂಲಕರ ವಾತಾವರಣ ಇರುವ ಈ ಸಂದರ್ಭದಲ್ಲಿ ಗೊಬ್ಬರ ದೊರೆಯಲು ವಿಳಂಬವಾದರೆ ಬಿತ್ತನೆ ಕಾರ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.
ಯೂರಿಯಾ ಬಳಕೆಗೆ ಎಚ್ಚರಿಕೆ ಅಗತ್ಯ: ಈ ಕುರಿತು ಕೃಷಿ ಅಧಿಕಾರಿ ಆಕಾಶ ದಾನಿ ಮಾತನಾಡಿ, ಯೂರಿಯಾ ಅತಿಯಾಗಿ ಬಳಸುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ಸಸ್ಯಗಳಲ್ಲಿ ಸಾರಜನಕದ ಅತಿಯಾದ ಬಳಕೆಯಿಂದ ರೋಗ ಮತ್ತು ಕೀಟಗಳ ಬಾಧೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದರಿಂದ ಬೆಳೆ ಇಳುವರಿ ಕೂಡ ಗಣನೀಯವಾಗಿ ಕುಂಠಿತವಾಗಬಹುದು. ಆದ್ದರಿಂದ ರೈತರು ಮಣ್ಣಿನ ಪರೀಕ್ಷೆ ಮಾಡಿಸಿ ಕೃಷಿ ಇಲಾಖೆಯ ಶಿಫಾರಸಿನಂತೆ ಅಗತ್ಯ ಪ್ರಮಾಣದಲ್ಲಿ ಮಾತ್ರ ಯೂರಿಯಾ ಬಳಸಬೇಕು. ಒಮ್ಮೆಗೆ ಸಂಪೂರ್ಣ ಪ್ರಮಾಣ ಹಾಕುವ ಬದಲು ಹಂತ ಹಂತವಾಗಿ ಬಳಸಿದರೆ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.