ಕುಮಟಾ: ಅಂಗನವಾಡಿ ಕೇಂದ್ರಗಳು ಶಿಕ್ಷಣ ವ್ಯವಸ್ಥೆಯ ಅಡಿಗಲ್ಲು. ಇಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಪೂರಕ ಮತ್ತು ಪ್ರೇರಕವಾದ ಕಾರ್ಯಗಳನ್ನು ಮಾಡಲಾಗುತ್ತದೆ ಎಂದು ಕೆಡಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಜಿಪಂ ಮಾಜಿ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ತಿಳಿಸಿದರು.
ತಾಲೂಕಿನ ಸೊಪ್ಪಿನ ಹೊಸಳ್ಳಿ ಗ್ರಾಪಂ ವ್ಯಾಪ್ತಿಯ ಬಂಗಣೆಯಲ್ಲಿ ಸ್ಥಳೀಯ ಬಾಲವಿಕಾಸ ಸಮಿತಿ ಹಾಗೂ ಕುಮಟಾ ಕನ್ನಡ ಸಂಘದ ಆಶ್ರಯದಲ್ಲಿ ಬುಧವಾರ ನಡೆದ ಗುರುಮಾತೆಯರಿಗೆ ವಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತದ ಸಂಸ್ಕೃತಿ ಉಳಿಯಬೇಕಾದರೆ ನಿಸ್ವಾರ್ಥ ಮಹಿಳೆಯರಿಂದ ಮಾತ್ರ ಸಾಧ್ಯವಿದೆ. ಮಕ್ಕಳ ಸರ್ವತೋಮುಖ ಏಳ್ಗೆಯಲ್ಲಿ ಅಂಗನವಾಡಿ ಕೇಂದ್ರಗಳ ಪಾತ್ರ ಹಿರಿದಾದುದು. ಬಾಲ್ಯಾವಸ್ಥೆಯಲ್ಲಿರುವ ಮಗುವನ್ನು ಸಂಸ್ಕಾರಯುತವಾಗಿ ಬೆಳೆಸಿ ಅವರಲ್ಲಿ ಜ್ಞಾನ ದೀವಿಗೆಯನ್ನು ಹೊತ್ತಿಸಿ ಸತ್ಪ್ರಜೆಗಳನ್ನಾಗಿಸುವ ಕಾರ್ಯ ಶ್ರೇಷ್ಠ ಎಂದರು.ಸಿಡಿಪಿಒ ಶೀಲಾ ಪಟೇಲ್ ಮಾತನಾಡಿ, ಅಂಗನವಾಡಿ ಕೇಂದ್ರಗಳು ಶಿಕ್ಷಣ ವ್ಯವಸ್ಥೆಯ ತಳಪಾಯವಿದ್ದಂತೆ. ಅಂಗನವಾಡಿ ಸಿಬ್ಬಂದಿ ಸಮರ್ಪಕ ಕೆಲಸ ಮಾಡಿದಾಗ ಉತ್ತಮ ಸಮಾಜ ನಿಮಾರ್ಣಮಾಡಲು ಸಾಧ್ಯವಿದೆ ಎಂದರು.
ಕುಮಟಾ ಕನ್ನಡ ಸಂಘದ ಅಧ್ಯಕ್ಷ ಸದಾನಂದ ದೇಶಭಂಡಾರಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಅತ್ಯಲ್ಪ ಸಂಬಳ ಪಡೆದರೂ ಸಂತೋಷವಾಗಿ ನಿಸಾರ್ಥದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲರ ಸಂಕಷ್ಟಗಳಿಗೆ ಸರ್ಕಾರ ಹಾಗೂ ಸಮುದಾಯ ಸ್ಪಂದಿಸಬೇಕು ಎಂದರು.ಈ ಸಂದರ್ಭದಲ್ಲಿ ನಿವೃತ್ತಿ ಅಂಚಿನಲ್ಲಿರುವ ಹಾಗೂ ಉತ್ತಮ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಾದ ಉಷಾ ನಾಯ್ಕ, ಪದ್ಮಾವತಿ ನಾಯ್ಕ, ದಾಕ್ಷಾಯಣಿ ನಾಯ್ಕ, ಕುಸುಮಾ ರವೀಂದ್ರ ನಾಯ್ಕ ಕಡತೋಕಾ, ಚಂದ್ರಿಕಾ ಜಿ. ಶೆಟ್ಟಿ ಕೆಕ್ಕಾರ, ಕುಸುಮಾ ಉದಯ ನಾಯ್ಕ, ಅಶ್ವಿನಿ ಉದಯ ಭಟ್ಟ, ಶಶಿಕಲಾ ನಾಯ್ಕ, ವಿಜಯಾ ನಾಯ್ಕ, ಕಲಾವತಿ ಆರ್. ಮರಾಠಿ ಅವರನ್ನು ಗೌರವಿಸಲಾಯಿತು.ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಎಸ್.ಎನ್. ಭಟ್ಟ, ಗ್ರಾಪಂ ಸದಸ್ಯ ಈಶ್ವರ ಮರಾಠಿ, ಎಸ್‌ಡಿಎಂಸಿ ಅಧ್ಯಕ್ಷ ಗಣಪತಿ ಮರಾಠಿ, ಹಿರಿಯರಾದ ಶೇಷ ಜಾಯು ಮರಾಠಿ, ಕುಮಾರಿ ಮರಾಠಿ ತಲಗೋಡ, ವಿಮಲಾ ಮರಾಠಿ, ಸುರೇಶ ಮರಾಠಿ, ಷಣ್ಮುಖ ಮರಾಠಿ, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಯಶೋದಾ ಮರಾಠಿ ಇತರರು ಇದ್ದರು. ಕನ್ನಡ ಸಂಘದ ಉಪಾಧ್ಯಕ್ಷ ಉದಯ ಭಟ್ಟ ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ ನಾಯ್ಕ ವಂದಿಸಿದರು. ಅಶ್ವಿನಿ ಉದಯ ಭಟ್ಟ ಸ್ವಾಗತಿಸಿ ಪ್ರಾರ್ಥಿಸಿದರು.