ವಿಶೇಷ ವರದಿ
ಮೂರರಿಂದ ಆರು ವರ್ಷ ವಯಸ್ಸಿನ ಒಳಗಿರುವ ಮಕ್ಕಳ ಆರೋಗ್ಯ ಪೋಷಣಾ ಸೇವೆ, ಶಿಕ್ಷಣ ಸಾಮಾಜಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಮಗ್ರ ಬೆಂಬಲ ನೀಡುವಲ್ಲಿ ಅಂಗನವಾಡಿಗಳ ಪಾತ್ರ ಬಹಳ ಮಹತ್ವದ್ದು. ಅಖಂಡ ಜಮಖಂಡಿ ತಾಲೂಕಿನಲ್ಲಿ ಅಂಗನವಾಡಿಗಳಿಗೆ ಸರ್ಕಾರಿ ಶಾಲಾ ಅಂಗಳದಲ್ಲಿಯೇ ನಿವೇಶನ ಹಾಗೂ ಕೊಠಡಿ ವ್ಯವಸ್ಥೆ ಒದಗಿಸುವ ಮೂಲಕ ಸದ್ದಿಲ್ಲದೆ ಅಂಗನವಾಡಿಗಳ ಸಮಗ್ರ ಬೆಳವಣಿಗೆ ನಡೆಯುತ್ತಿದೆ.
ಶಾಲಾ ಅಂಗಳದಲ್ಲಿ ಅಂಗನವಾಡಿಗಳು: ಅಖಂಡ ಜಮಖಂಡಿ ತಾಲೂಕಿನಲ್ಲಿ ಒಟ್ಟು ೫೭೩ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ಬಸಣ್ಣವರ ವಿಶೇಷ ಮುತುವರ್ಜಿ ವಹಿಸಿ ನಿವೇಶನ ಹಾಗೂ ಕಟ್ಟಡ ಇಲ್ಲದೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ಸುಮಾರು ೧೦೦ಕ್ಕೂ ಅಧಿಕ ಅಂಗನವಾಡಿ ಕೇಂದ್ರಗಳನ್ನು ಹೆಚ್ಚುವರಿ ಕೊಠಡಿ ಹಾಗೂ ಸ್ಥಳಾವಕಾಶ ಲಭ್ಯವಿರುವ ಶಾಲಾವರಣದಲ್ಲಿ ನಡೆಯುವಂತೆ ಕ್ರಮ ವಹಿಸಿದ್ದಾರೆ.೬೮ ಅಂಗನವಾಡಿ ಕೇಂದ್ರಗಳು ಸರ್ಕಾರಿ ಶಾಲೆಗಳ ಆವರಣದಲ್ಲಿ ಸ್ವಂತ ಕಟ್ಟಡ ಹೊಂದಿ ಕಾರ್ಯನಿರ್ವಹಿಸುತ್ತಿವೆ. ೩೮ ಅಂಗನವಾಡಿ ಕೇಂದ್ರಗಳು ಸರ್ಕಾರಿ ಪ್ರಾಥಮಿಕ ಶಾಲೆಗಳ ಖಾಲಿ ಇರುವ ಕೊಠಡಿಗಳಲ್ಲಿ ನಡೆಯುತ್ತಿವೆ.
ಜಿಲ್ಲಾ ಪಂಚಾಯಿತಿ ಸಿಇಒ ಸೂಚನೆ : ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಕ ಅಧಿಕಾರಿಗಳು ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿರುವುದನ್ನು ಇಲ್ಲಿ ಗಮನಿಸಬಹುದು. ಅವರ ಸೂಚನೆಯ ಮೇರೆಗೆ ಜಮಖಂಡಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮಾಡಿದ ಮನವಿಗೆ ಸ್ಪಂದಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಂಗನವಾಡಿಗಳಿಗೆ ಶಾಲಾ ಆವರಣದಲ್ಲಿ ಸ್ಥಳಾವಕಾಶ ಮಾಡಿಕೊಡಲು ಕೈಗೊಂಡಿರುವ ಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.ಪ್ರಾಥಮಿಕ ಶಿಕ್ಷಣದ ಬುನಾದಿ :ಅಂಗನವಾಡಿಗಳನ್ನು ಮೂರರಿಂದ ಆರು ವರ್ಷದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದ ಬುನಾದಿ ಹಂತ ಎಂದೇ ಕರೆಯಲಾಗುತ್ತಿದೆ. ೨೦೨೦ರ ಹೊಸ ಶಿಕ್ಷಣ ನೀತಿಯಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ. ಆರೋಗ್ಯ ಪೋಷಣೆ, ಆಟಿಕೆಗಳು, ಹಾಡುಗಳು ಹಾಗೂ ಚಿತ್ರಕಥೆಗಳ ಮೂಲಕ ಆಟ ಮತ್ತು ಕಲಿಕೆ, ಅಕ್ಷರ ಪರಿಚಯ ಹಾಗೂ ಭಾಷಾ ಅಭಿವೃದ್ಧಿ ರೂಪಿಸಿ ಸಾಮಾಜಿಕ ಬೆಳವಣಿಗೆ ಮಾಡುವುದು ಪೂರ್ವ ಪ್ರಾಥಮಿಕದ ಪ್ರಮುಖ ಉದ್ದೇಶವಾಗಿದೆ. ಶಿಶುಪಾಲನೆ ಬಾಲ್ಯ ಪೂರ್ವ ಶಿಕ್ಷಣ ಯಶಸ್ವಿಯಾಗಲು ಪ್ರಾಥಮಿಕ ಶಾಲೆಗಳು ನೆರವಾಗುತ್ತಿವೆ.
ಸರ್ಕಾರಿ ಪ್ರಾಥಮಿಕ ಶಾಲೆಗಳ ದಾಖಲಾತಿ ಹೆಚ್ಚಳ : ಶಾಲೆಯ ಒಂದೇ ಆವರಣದಲ್ಲಿ ಅಂಗನವಾಡಿ ಕೇಂದ್ರಗಳು ಇರುವುದರಿಂದ ಮಗು ಮುಂದೆ ತನ್ನ ಶಿಕ್ಷಣವನ್ನು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ನಿರಂತರವಾಗಿ ಮುಂದುವರಿಸಲು ಸಹಾಯವಾಗುತ್ತದೆ. ಜೊತೆಗೆ ಇದು ಬಳ ಕೂಲಿಕಾರರ ರೈತರ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅನುಕೂಲಕರ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.ಪೂರ್ವ ಪ್ರಾಥಮಿಕ ಹಂತದ ಅಂಗನವಾಡಿಗಳಿಗೆ ದಾಖಲಾಗುವ ಮಕ್ಕಳು ಅದೇ ಆವರಣದಲ್ಲಿ ಇರುವ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ದಾಖಲಾಗುತ್ತಾರೆ ಇದರಿಂದಾಗಿ ಪ್ರಾಥಮಿಕ ಶಾಲೆಗಳ ದಾಖಲಾತಿಯನ್ನು ಹೆಚ್ಚಿಸಲು ಅನುಕೂಲವಾಗುತ್ತದೆ.
-ಅಶೋಕ ಬಸಣ್ಣವರ, ಕ್ಷೇತ್ರ ಶಿಕ್ಷಣಾಧಿಕಾರಿ, ಜಮಖಂಡಿ