ಕಬ್ಬಳಿ ದೇವಸ್ಥಾನದ ಅರ್ಚಕರಿಗೆ ಆದಿಚುಂಚನಗಿರಿ ಮಠದವರಿಂದ ತಡೆ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣತಾಲೂಕಿನ ಕಬ್ಬಳಿ ಕ್ಷೇತ್ರ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದ ಮೂಲ ಅರ್ಚಕರಿಗೆ ಪೂಜೆ ಮಾಡಲು ಅವಕಾಶ ನೀಡುವಂತೆ ನ್ಯಾಯಾಲಯ ಆದೇಶ ಮಾಡಿದ್ದರೂ ಶ್ರೀ ಆದಿಚುಂಚನಗಿರಿ ಸಂಸ್ಥಾನ ಮಠದವರು ಪೂಜೆಗೆ ಅವಕಾಶ ನೀಡುತ್ತಿಲ್ಲ ಎಂದು ಶ್ರೀ ಕಬ್ಬಳಿ ಬಸವೇಶ್ವರ ಸ್ವಾಮಿ ದೇವಸ್ಥಾನದ ಮೂಲ ಅರ್ಚಕ ರೇಣುಕಾ ಆರಾಧ್ಯ ಆರೋಪಿಸಿದರು.
ತಾಲೂಕಿನ ಹಿರಿಸಾವೆ ಹೋಬಳಿಯ ಶ್ರೀ ಕ್ಷೇತ್ರ ಕಬ್ಬಳಿ ಬಸವೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ತಾತ ಮುತ್ತಾತ ಕಾಲದಿಂದಲೂ ಕೂಡ ಈ ದೇವಸ್ಥಾನದ ಮುಖ್ಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದೇವೆ. ಆದರೆ ಕೆಲವು ದಿನಗಳ ಹಿಂದೆ ಶ್ರೀ ಕ್ಷೇತ್ರ ಕಬಳಿ ಬಸವೇಶ್ವರ ಸ್ವಾಮಿ ದೇವಸ್ಥಾನವನ್ನು ಶ್ರೀ ಆದಿಚುಂಚನಗಿರಿ ಮಠದವರು ವಹಿಸಿಕೊಂಡು ನಮ್ಮ ದಿನನಿತ್ಯದ ಪೂಜೆ ಕಾರ್ಯಕ್ಕೆ ಅಡ್ಡಿಪಡಿಸಿದರು.ಈ ಹಿನ್ನೆಲೆಯಲ್ಲಿ ನಮ್ಮ ಕುಟುಂಬಸ್ಥರು ನ್ಯಾಯಾಂಗದ ಮೆಟ್ಟಿಲನ್ನು ಏರಿದ್ದು, ಇದರ ಸತ್ಯಾಸತ್ಯತೆಯನ್ನು ತಿಳಿದ ನ್ಯಾಯಾಂಗ ಇಲಾಖೆಯಿಂದ ದೇವಾಲಯದಲ್ಲಿ ನಮಗೆ ಪೂಜೆ ಮಾಡಲು ಮತ್ತು ದೇವಸ್ಥಾನದ ಆಸ್ತಿಯನ್ನು ತಮ್ಮದು ಎಂದು ಆದೇಶವನ್ನು ಹೊರಡಿಸಿತ್ತು. ಆದರೆ ಪೊಲೀಸ್ ಇಲಾಖೆಯವರು ಮತ್ತು ಶ್ರೀ ಆದಿಚುಂಚನಗಿರಿ ಮಠದವರು ನಮ್ಮನ್ನು ದೇವಸ್ಥಾನದ ಪೂಜೆ ಮಾಡಲು ಮತ್ತು ನೈವೇದ್ಯ ಮಾಡಲು ಒಳ ಪ್ರವೇಶ ಮಾಡದಂತೆ ನಿಷೇಧ ಮಾಡಿ ದೇವಸ್ಥಾನಕ್ಕೆ ಬೀಗ ಹಾಕಿದ್ದಾರೆ.
ಕಳೆದ ಐದು ತಲೆಮಾರುಗಳಿಂದ ಈ ದೇವಸ್ಥಾನದ ಪೂಜೆಯನ್ನು ನಮ್ಮ ಕುಟುಂಬದವರೇ ಮಾಡುತ್ತಾ ಬಂದಿದ್ದು, ಅದರಲ್ಲೂ ಕೂಡ ಮಠದಿಂದ ಹೇಳಿದಂತಹ ಮಾರ್ಗದರ್ಶನಗಳನ್ನು ಕೂಡ ನಾವು ಅನುಸರಿಸುತ್ತಾ ಬಂದಿದ್ದೇವೆ. ಆದರೆ ಕೆಲವು ದಿನಗಳ ಹಿಂದೆ ದೇವಸ್ಥಾನದ ಮಂಗಳಾರತಿ ಹಣದ ವಿಚಾರದಲ್ಲಿ ಮತ್ತು ಪೂಜಾ ವಿಚಾರದಲ್ಲಿ ಕೆಲವು ಮಠದ ಸಿಬ್ಬಂದಿಯೊಂದಿಗೆ ಸಂಘರ್ಷ ನಡೆಯಿತು. ಇದನ್ನೇ ಮುಂದೆ ಇಟ್ಟುಕೊಂಡ ಮಠ ನಮ್ಮನ್ನು ಬೀದಿಗೆ ಬಿಟ್ಟಿತು. ಇದನ್ನು ಮನಗಂಡ ನಮ್ಮ ಕುಟುಂಬಸ್ಥರು ಮತ್ತು ನಾವುಗಳು ನ್ಯಾಯಾಲಯದ ಮೊರೆ ಹೋಗಿ ಸಂಬಂಧಪಟ್ಟ ಎಲ್ಲ ದಾಖಲಾತಿಗಳನ್ನು ನೀಡಿದ್ದೆವು. ಈ ದಾಖಲಾತಿಗಳನ್ನು ಪರಿಶೀಲಿಸಿದ ನ್ಯಾಯಾಲಯ ನಾವೇ ದೇವಾಲಯದ ಪೂಜೆ ಮಾಡುವಂತೆ ಆದೇಶ ನೀಡಿದೆ. ಆದರೆ ಈ ಜವಾಬ್ದಾರಿಯನ್ನು ಆದಿಚುಂಚನಗಿರಿ ಮಠದವರು ನಿರಾಕರಣೆ ಮಾಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.ಇದೇ ಸಂದರ್ಭದಲ್ಲಿ ಶ್ರೀ ಕಬ್ಬಳಿ ಬಸವೇಶ್ವರ ಸ್ವಾಮಿ ದೇವಸ್ಥಾನದ ಮಾಜಿ ಗುಡಿ ಗೌಡ ಕೆ.ಬಿ. ನಟರಾಜು ಮಾತನಾಡಿ, ನಮ್ಮ ತಾತ ಮುತ್ತಾತ ಕಾಲದಿಂದಲೂ ಈ ದೇವಸ್ಥಾನದ ಪೂಜೆ ಮತ್ತು ಸಂಪೂರ್ಣ ಜವಾಬ್ದಾರಿಯನ್ನು ರೇಣುಕಾ ಆರಾಧ್ಯ ಅರ್ಚಕರಾಗಿ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದ ಪೂಜೆಯನ್ನು ಮಾಡುತ್ತ ಬಂದಿದ್ದಾರೆ. ಆದರೆ ಕೆಲವು ದಿನಗಳ ಹಿಂದೆ ಶ್ರೀ ಆದಿಚುಂಚನಗಿರಿ ಮಠದ ವತಿಯಿಂದ ದೇವಸ್ಥಾನವನ್ನು ವಹಿಸಿಕೊಂಡ ಮೇಲೆ ಮೂಲ ಅರ್ಚಕರನ್ನು ನಿರಾಕರಣೆ ಮಾಡಿದ್ದಾರೆ. ದೇವಾಲಯದ ಅರ್ಚಕರ ಹೆಸರಲ್ಲಿ ಇದ್ದಂತಹ ಜಾಗವನ್ನು ಶ್ರೀ ಆದಿಚುಂಚನಗಿರ ಮಠದ ಹೆಸರಿಗೆ ಬದಲಾವಣೆ ಮಾಡಲಾಗಿದೆ.
ಜೊತೆಗೆ ಮಠಾಧೀಶರು ಎಂದು ಹೇಳಿಕೊಳ್ಳುವುದು ನೆಪಮಾತ್ರಕ್ಕೆ. ಶಿವಪುತ್ರ ಸ್ವಾಮೀಜಿ ಇವರ ಹೆಸರಿಗೆ ನಾಲ್ಕು ಎಕರೆ 20 ಕುಂಟೆ ಜಾಗವನ್ನು ಹೊಸದಾಗಿ ಮಂಜೂರಾತಿ ಮಾಡಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ. ಜೊತೆಯಲ್ಲಿ ರಾಜಕೀಯ ಬಲ ಮತ್ತು ಹಣದ ಬಲ ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿರುವುದು ದುರಾದೃಷ್ಟಕರ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.ಗುಡಿಗೌಡ ನಟರಾಜ್, ಪಟೇಲ್ ಬಸವೇಗೌಡ, ಕೆಂಪೇಗೌಡ, ನಾರಾಯಣಗೌಡ ಇದ್ದರು.