ಚರ್ಚ್‌ಗಳಲ್ಲಿ ವಿಶೇಷ ಬಲಿ ಪೂಜೆ । ಇಂದು ಕ್ರಿಸ್ತ ಜಯಂತಿ
ಕನ್ನಡಪ್ರಭ ವಾರ್ತೆ ಉಡುಪಿವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಯೇಸುವಿನ ಜನ್ಮದಿನ ಕ್ರಿಸ್ಮಸ್ ಈವ್ ಹಬ್ಬವನ್ನು ಮಂಗಳವಾರ ರಾತ್ರಿ ಕ್ರೈಸ್ತ ಬಾಂಧವರು ಉಡುಪಿ ಜಿಲ್ಲಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಿದರು.ಹಬ್ಬದ ಅಂಗವಾಗಿ ಕ್ರೈಸ್ತರು ಮಂಗಳವಾರ ರಾತ್ರಿ ಸಮೀಪದ ಚರ್ಚ್‌ಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಸ್ನೇಹಿತರು, ಬಂಧು ಬಾಂಧವರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು.ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಸಂಜೆಯ ಬಲಿಪೂಜೆಯನ್ನು ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಅರ್ಪಿಸಿ ಹಬ್ಬದ ಸಂದೇಶ ನೀಡಿದರು.ಈ ವೇಳೆ ಮಾತನಾಡಿದ ಅವರು, ಕ್ರಿಸ್ತ ಜಯಂತಿ ಶಾಂತಿ ಮತ್ತು ಭರವಸೆಯ ಸಮಯವಾಗಿದ್ದು, ಬೆತ್ಲೆಹೇಮಿನ ದನದ ಕೊಟ್ಟಿಗೆಯಲ್ಲಿ ದೀನನಾಗಿ ಜನಿಸಿದ ಪ್ರಭು ಯೇಸುವಿನ ಜನನ, ದೇವರು ನಮ್ಮ ಮೇಲಿರಿಸಿದ ಪ್ರೀತಿ ಸ್ಮರಣೆಯಾಗಿದೆ. ಕ್ರಿಸ್ತನ ಬೆಳಕು ನಮ್ಮ ದೈನಂದಿನ ಬದುಕಿನಲ್ಲಿ ಮಾರ್ಗದರ್ಶಿಯಾಗಿರಲಿ. ನಮ್ಮ ಮನೆ ಮನಗಳನ್ನು ಶಾಂತಿಯಿಂದ ನಮ್ಮ ಸಮುದಾಯಗಳನ್ನು ಸಾಮರಸ್ಯದಿಂದ ತುಂಬಲಿ ಎಂದರು.ಧರ್ಮಪ್ರಾಂತ್ಯದ ಶ್ರೇಷ್ಠಗುರು ಹಾಗೂ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಪ್ರಧಾನ ಧರ್ಮಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಸಹಾಯಕ ಧರ್ಮಗುರು ಪ್ರದೀಪ್ ಕಾರ್ಡೋಜಾ, ಡಾ. ಜೆನ್ಸಿಲ್ ಆಳ್ವಾ, ಪಿಲಾರ್ ಸಭೆಯ ಮನೋಜ್ ಫುರ್ಟಾಡೊ, ಪರೇಲ್ ಫರ್ನಾಂಡಿಸ್, ಹೋಲಿ ಕ್ರಾಸ್ ಹೋಮ್ ಕಟಪಾಡಿ ಮುಖಸ್ಥರಾದ ರೋನ್ಸನ್ ಉಪಸ್ಥಿತರಿದ್ದರು.ಹಬ್ಬದ ಅಂಗವಾಗಿ ಚರ್ಚ್‌ಗಳಲ್ಲಿ ಯುವ ಸಂಘಟನೆಯ ಸದಸ್ಯರಿಂದ ವಿಶೇಷ ಸಾಂಸ್ಕೃತಿಕ ಕಾರ‍್ಯಕ್ರಮ, ಮಕ್ಕಳ ಪ್ರೀತಿಗೆ ಪಾತ್ರನಾದ ಸಾಂತಾಕ್ಲಾಸ್ ವೇಷ, ಭಕ್ತರಗೆ ಕ್ರಿಸ್ಮಸ್ ಕೇಕ್ ವಿತರಣೆ ಕೂಡ ನಡೆಯಿತು.ಜಿಲ್ಲೆಯ ಪ್ರಮುಖ ಚರ್ಚ್‌ಗಳಾದ ಅತ್ತೂರು ಸಂತ ಲಾರೆನ್ಸ್ ಬೆಸಿಲಿಕಾದಲ್ಲಿ ಆಲ್ಬನ್ ಡಿಸೋಜಾ, ತೊಟ್ಟಂ ಸಂತ ಅನ್ನಮ್ಮ ಚರ್ಚ್‌ನಲ್ಲಿ ಧರ್ಮಗುರು ಡೆನಿಸ್ ಡೆಸಾ, ಸಾಸ್ತಾನ ಸಂತ ಅಂತೋನಿ ಚರ್ಚ್‌ನಲ್ಲಿ ಸುನೀಲ್ ಡಿಸಿಲ್ವಾ, ಉಡುಪಿ ಶೋಕಮಾತಾ ಚರ್ಚ್‌ನಲ್ಲಿ ಚಾರ್ಲ್ಸ್ ಮಿನೇಜಸ್ ನೇತೃತ್ವದಲ್ಲಿ ಹಬ್ಬದ ವಿಶೇಷ ಬಲಿಪೂಜೆಗಳು ಜರುಗಿದವು.