ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಜಾಗದ ಸಮಸ್ಯೆ, ಆರ್ಥಿಕ ಮುಗ್ಗಟ್ಟು, ಗುತ್ತಿಗೆದಾರರು ಹಾಕಿರುವ ವಾಜ್ಯ ಸೇರಿದಂತೆ ಹಲವು ಕಾರಣಗಳಿಂದ ನಗರದ ಹೃದಯ ಭಾಗದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಖಾಸಗಿ ಬಸ್ ನಿಲ್ದಾಣ ಮತ್ತು ವಾಣಿಜ್ಯ ಸಮುಚ್ಛಯದ ಕಾಮಗಾರಿ ನೆನೆಗುದಿಗೆ ಬಿದಿದ್ದು, ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಭರವಸೆ ನೀಡಿದರು.ನೆನೆಗುದಿಗೆ ಬಿದ್ದಿರುವ ನಗರದ ಖಾಸಗಿ ಬಸ್ ನಿಲ್ದಾಣ ಜಾಗವನ್ನು ಪರಿಶೀಲಿಸಿ ನಗರದ ಪ್ರವಾಸಿ ಮಂದಿರದಲ್ಲಿ ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ ಏಳೆಂಟು ವರ್ಷಗಳಿಂದ ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ಆರಂಭಗೊಳ್ಳದೇ ನೆನಗುದಿಗೆ ಬಿದ್ದಿದೆ. ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಒಂದಿಬ್ಬರು ಖಾಸಗಿ ವ್ಯಕ್ತಿಗಳು ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಚನ್ನಪಟ್ಟಣ, ರಾಮನಗರ ಪ್ರಾಧಿಕಾರ ಈ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಆದರೆ, ಈಗ ಚನ್ನಪಟ್ಟಣ ಹಾಗೂ ರಾಮನಗರ ಪ್ರಾಧಿಕಾರಗಳು ಪ್ರತ್ಯೇಕಗೊಂಡಿವೆ. ಈ ಹಿಂದೆ ನಡೆದಿದ್ದ ಕಾಮಗಾರಿಗೆ ಸಂಬಂಧಿಸಿ ಗುತ್ತಿದಾರರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ಇದರ ಜತೆಗೆ ಕಾಮಗಾರಿ ನಡೆಸಲು ಆರ್ಥಿಕ ಮುಗ್ಗಟ್ಟು ಸಹ ಇದ್ದು, ಇವುಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಗುತ್ತಿದಾರರಿಗೆ ೪.೭೦ ಕೋಟಿ ರು. ಪಾವತಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. ಆದರೆ, ಗುತ್ತಿಗೆದಾರು ಯೋಜನೆಯ ಕಾರಣಕ್ಕೆ ಸುಮಾರು ೪೦ರಿಂದ ೫೦ ಕೋಟಿ ನಷ್ಟವಾಗಿದೆ ಎಂದು ಮೇಲ್ಮನವಿ ಸಲ್ಲಿಸಿದ್ದಾರೆ. ಉಪಮುಖ್ಯಮಂತ್ರಿಗಳು ಹಾಗೂ ನಾನು ಸೇರಿ ಅವರೊಂದಿಗೆ ಹಾಗೂ ಜಾಗದ ವಿಚಾರಕ್ಕೆ ತಕರಾರು ಸಲ್ಲಿಸಿರುವ ಖಾಸಗಿ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸಿ, ಪ್ರಕರಣವನ್ನು ಹಿಂದಕ್ಕೆ ತೆಗೆಸಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.
ಈ ಜಾಗದಲ್ಲಿ ಖಾಸಗಿ ಬಸ್ ನಿಲ್ದಾಣ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಬೇಕು ಎಂಬುದು ಜನರ ಒತ್ತಾಸೆಯಾಗದೆ. ಸಾರ್ವಜನಿಕ ಹಿತದೃಷ್ಟಿಯಿಂದ ಜಾಗದ ವಿಚಾರ ಹಾಗೂ ಗುತ್ತಿಗೆದಾರರು ಹಾಕಿರುವ ಪ್ರಕರಣಗಳನ್ನು ಹಿಂತೆಗೆಸಬೇಕು. ಎಲ್ಲ ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಹೊಸ ವರ್ಷದಲ್ಲಿ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಈ ಜಾಗ ಪ್ರಾಧಿಕಾರದಿಂದ ನಗರಸಭೆಗೆ ಹಸ್ತಾಂತರವಾಗಬೇಕಿದೆ. ಆ ನಂತರ ನಗರಸಭೆಯ ಕೌನ್ಸಿಲ್ ಬಾಡಿಯಲ್ಲಿ ತೀರ್ಮಾನ ಕೈಗೊಳ್ಳಬೇಕಿದೆ. ಇದು ವಾಣಿಜ್ಯ ಉದ್ದೇಶವಾಗಿರುವುದರಿಂದ ಬ್ಯಾಂಕ್ ಸಾಲ, ಸಾರ್ವಜನಿಕ ಸಹಭಾಗಿತ್ವದೊಂದಿಗೆ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವ ಯೋಚನೆ ಇದೆ ಎಂದರು.
ನಗರಕ್ಕೆ ಹೊಸ ರೂಪ:ನಗರದಲ್ಲಿ ಗಾಂಧಿ ಭವನ ನಿರ್ಮಾಣವಾಗಬೇಕಿದೆ. ಪಾಲಿಟೆಕ್ನಿಕ್ ಕಟ್ಟಡ ನಿರ್ಮಾಣವಾಗಬೇಕು. ಇದರೊಂದಿಗೆ ಕಸದ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ೯.೨೫ ಎಕರೆ ಜಾಗ ಗುರುತಿಸಲಾಗಿದ್ದು, ಅಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಘಟಕ ಸ್ಥಾಪಿಸಬೇಕಿದೆ. ನಗರದ ಯುಜಿಡಿ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದೆ. ಇದಲ್ಲದೇ ೩೧ ಕೋಟಿ ರು. ವಿಶೇಷ ಅನುದಾನ ಸಹ ಬಿಡುಗಡೆಯಾಗಿದೆ. ೧೭ ಕೋಟಿ ರು. ಅಲ್ಪಸಂಖ್ಯಾತ ವಾರ್ಡ್‌ಗಳಿಗೆ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ನಾನು ಇದೀಗ ಪುನರಾಯ್ಕೆಯಾಗಿದ್ದೇನೆ. ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಹಳಷ್ಟು ಸವಾಲುಗಳು ಇವೆ. ನಗರಸಭಾ ಕಟ್ಟಡ ಆಗಬೇಕಿದೆ. ಜ.೪ಕ್ಕೆ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಆಡಳಿತ ಮಂಡಳಿ ಆಯ್ಕೆಯಾದ ನಂತರ ನಗರಸಭೆಗೆ ಕಾಯಕಲ್ಪ ನೀಡಲು ಶ್ರಮಿಸುತ್ತೇನೆ. ಚನ್ನಪಟ್ಟಣಕ್ಕೆ ಹೊಸ ರೂಪ ನೀಡುವ ಕೆಲಸ ಮಾಡುತ್ತೇನೆ ಎಂದರು.ಉಪಚುನಾವಣೆ ವೇಳೆ ಚನ್ನಪಟ್ಟಣಕ್ಕೆ ಕೈಗಾರಿಕೆ ತರುವ ಕುರಿತು ಎಚ್.ಡಿ.ಕುಮಾರಸ್ವಾಮಿ ನೀಡಿದ್ದ ಹೇಳಿಕೆ ಪ್ರತಿಕ್ರಿಯಿಸಿದ ಯೋಗೇಶ್ವರ್, ಅದನ್ನು ಕುಮಾರಸ್ವಾಮಿ ಅವರನ್ನೇ ಕೇಳಿ. ಕೇಂದ್ರ ಸರ್ಕಾರದ ಬಗ್ಗೆ ನನಗೆ ಗೊತ್ತಿಲ್ಲ. ರಾಜ್ಯ ಸರ್ಕಾರದಿಂದ ಯಾವ ಕೆಲಸ ಆಗಬೇಕೋ ಅದನ್ನು ಮಾಡಲು ಶ್ರಮಿಸುತ್ತೇನೆ ಎಂದು ಹೇಳಿದರು.
ನಗರಸಭಾ ಆಯುಕ್ತ ಮಹೇಂದ್ರ. ಎಕ್ಸಿಕ್ಯೂಟಿವ್ ಇಂಜಿನಿಯರ್ ಶಿವಲಿಂಗೇಗೌಡ, ಇಂಜಿನಿಯರ್ ಜಯಣ್ಣ, ವಾಟರ್ ಬೋರ್ಡ್‌ನ ಕುಸುಮಾ, ಪಿಡಬ್ಲ್ಯೂಡಿ ಇಂಜಿನಿಯರ್ ಪ್ರಕಾಶ್, ನಗರಸಭೆ ಸದಸ್ಯರಾದ ವಾಸೀಲ್ ಅಲಿಖಾನ್, ಸತೀಶ್ ಬಾಬು, ರೇವಣ್ಣ, ನಾಗೇಶ್ ಇತರರು ಇದ್ದರು.