ಪಶು ಆರೋಗ್ಯ ಚಿಕಿತ್ಸಾ ಶಿಬಿರದಲ್ಲಿ ಹಿರಿಯ ವಿಜ್ಞಾನಿ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರುರೈತರು ತಮ್ಮ ಜಾನುವಾರುಗಳಿಗೆ ಸರಿಯಾದ ಸಮಯದಲ್ಲಿ ಲಸಿಕೆ ಹಾಕಿಸುವುದರಿಂದ ರೋಗ ಬರುವುದನ್ನು ತಪ್ಪಿಸಬಹುದು ಎಂದು ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಗುರುಪ್ರಸಾದ ಹೇಳಿದರು.
ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರ, ಬ್ಯಾಡಗಿ ಪಶುಸೇವಾ ಇಲಾಖೆ ಇವುಗಳ ಸಹಯೋಗದಲ್ಲಿ ಬ್ಯಾಡಗಿ ತಾಲೂಕಿನ ಆಣೂರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಪಶು ಆರೋಗ್ಯ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು. ಏಕದಳ ಮತ್ತು ದ್ವಿದಳ ಮೇವುಗಳನ್ನು ಜಾನುವಾರುಗಳಿಗೆ ಶೇ. 75 ಮತ್ತು ಶೇ.25 ರಷ್ಟು ನೀಡುವುದರಿಂದ ಅವುಗಳ ಆರೋಗ್ಯ ಸುಧಾರಿಸುವುದರೊಂದಿಗೆ ಹಾಲಿನ ಉತ್ಪಾದನೆ, ಗುಣಮಟ್ಟ ಹೆಚ್ಚಾಗುತ್ತದೆ ಎಂದರು.ಕೇಂದ್ರದ ಪಶು ವಿಜ್ಞಾನಿ ಡಾ. ಮಹೇಶ ಕಡಗಿ ಮಾತನಾಡಿ, ಬಹು ಕಟಾವಿನ ಮೇವಿನ ಜೋಳ (ಸಿ.ಒಎಫ್.ಎಸ್-31) ಇದು ಒಂದು ಮಳೆಯಾಶ್ರಿತ ಮೇವಿನ ಬೆಳೆಯಾಗಿದ್ದು ಸುಮಾರು 4 ರಿಂದ 6 ವರ್ಷದ ವರೆಗೆ ಹಸಿರು ಮೇವಿನ ಇಳುವರಿ ಸುಮಾರು 110 ರಿಂದ 120 ಟನ್ ಪ್ರತಿ ಎಕರೆಗೆ ಪ್ರತಿ ವರ್ಷಕ್ಕೆ ನೀಡಬಲ್ಲದು. ಬೇಸಿಗೆ ಸಮಯದಲ್ಲಿ ಮತ್ತು ಬರಗಾಲದಲ್ಲಿ ಒಣ ಮೇವಿನ ಪೌಷ್ಟೀಕರಣವನ್ನು ಬೆಲ್ಲ ಅಥವಾ ಉಪ್ಪು ಅಥವಾ ಯೂರಿಯಾ ಬಳಸಿ ಮಾಡಬೇಕಾಗುತ್ತದೆ. ಪ್ರತಿ 100 ಕೆಜಿ ಒಣ ಮೇವಿಗೆ ಒಂದು ಕೆಜಿ ಉಪ್ಪು ನೀರಿನಲ್ಲಿ ಕರಗಿಸಿ ಒಣ ಮೇವಿಗೆ ಸಿಂಪಡಿಸಬೇಕು. ಅದೇ ರೀತಿ ಒಂದು ಕೆಜಿ ಬೆಲ್ಲವನ್ನು ಸಹಿತ ನೀರಿನಲ್ಲಿ ಕರಗಿಸಿ 100 ಕೆಜಿ ಒಣ ಮೇವಿಗೆ ಸಿಂಪಡಿಸಬಹುದು. ಯೂರಿಯಾ ಒಣ ಮೇವಿನ ಪೌಷ್ಟೀಕರಣದಲ್ಲಿ 1-2 ಕೆಜಿ ಯೂರಿಯಾವನ್ನು 8 ರಿಂದ 10 ಲೀಟರ್ ನೀರಿನಲ್ಲಿ ಕರಗಿಸಿ 100 ಕೆಜಿ ಒಣ ಮೇವಿಗೆ ಸಿಂಪಡಿಸಿ 2 ತಾಸಿನ ನಂತರ ಜಾನುವಾರುಗಳಿಗೆ (6 ತಿಂಗಳ ಮೇಲ್ಪಟ್ಟ ಜಾನುವಾರುಗಳಿಗೆ ಮಾತ್ರ) ನೀಡಬಹುದು. ಇವುಗಳಲ್ಲಿ ಯಾವುದಾದರೂ ಒಂದನ್ನು ರೈತರು ಅಳವಡಿಸಿಕೊಳ್ಳುವುದರಿಂದ ಜಾನುವಾರುಗಳು ಹೆಚ್ಚಿನ ಒಣ ಮೇವನ್ನು ಸೇವಿಸುತ್ತವೆ ಮತ್ತು ಹೆಚ್ಚಿನ ಮೇವು ಜೀರ್ಣವಾಗುತ್ತದೆ ಎಂದರು.
ಬನ್ನಿಹಟ್ಟಿ ಆಸ್ಪತ್ರೆಯ ಹಿರಿಯ ಪಶುವ್ಶೆದ್ಯಾಧಿಕಾರಿ ಡಾ. ಉಮೇಶ ಹೊನ್ನತ್ತಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಎಲ್ಲಾ ರಂಗಗಳಲ್ಲಿಯೂ ವೈಜ್ಞಾನಿಕವಾಗಿ ಪ್ರಗತಿಯನ್ನು ಸಾಧಿಸಲಾಗುತ್ತಿದೆ. ರೈತರ ಜೀವ ನಾಡಿಯಾಗಿರುವ ಪಶು ಸಂಗೋಪನಾ ಚಟುವಟಿಕೆಗಳನ್ನು ಕೂಡಾ ವೈಜ್ಞಾನಿಕವಾಗಿ ತಿಳಿದುಕೊಂಡು ಸುಸ್ಥಿರ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವುದು ಹಾಗೂ ಪಶುಸಂಗೋಪನಾ ಚಟುವಟಿಕೆಗಳಲ್ಲಿ ರೈತರನ್ನು ಉದ್ಯಮಿಗಳನ್ನಾಗಿಸಲು ಸರ್ಕಾರವು ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ. ರೈತರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಶಿಬಿರದಲ್ಲಿ ಸುಮಾರು 85 ಆಕಳುಗಳು, 18 ಮಣಕಗಳು, 21 ಕರುಗಳು, 18 ಎಮ್ಮೆಗಳು, 22 ಎತ್ತುಗಳು, 25 ಕುರಿ, ಆಡುಗಳಲ್ಲಿ ರೋಗದ ವಿವರಗಳನ್ನು ಗಮನಿಸಿ ಚಿಕಿತ್ಸೆ, ಖನಿಜ ಮಿಶ್ರಣ ವಿತರಣೆ, ಜಂತು ನಾಶಕ ಔಷಧಿ ಮತ್ತು ಲಸಿಕೆ ನೀಡಲಾಯಿತು. ಸುಮಾರು 85 ಜನ ರೈತರು ಶಿಬಿರದ ಪ್ರಯೋಜನ ಪಡೆದುಕೊಂಡರು.