ಸಾಲ ವಾಪಸಿಗೆ ಗ್ರಾಮೀಣ ಬ್ಯಾಂಕುಗಳ ನೋಟಿಸ್: ಖಂಡನೆ

KannadaprabhaNewsNetwork | Published : Feb 20, 2024 1:50 AM

ಸಾರಾಂಶ

ಸಾಲ ಕಟ್ಟದ ರೈತರಿಗೆ ನೋಟಿಸ್ ನೀಡುತ್ತಿರುವ ಗ್ರಾಮೀಣ ಬ್ಯಾಂಕುಗಳ ಸಾಲ ವಸೂಲಾತಿ ಪದ್ಧತಿ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ರೈತರ ಸಂಕಲ್ಪ ಜಾಥಾವು ಜಿಲ್ಲಾ ಕೇಂದ್ರ ಚಾಮರಾಜನಗರಕ್ಕೆ ಸೋಮವಾರ ಆಗಮಿಸಿತು

ಕನ್ನಡಪ್ರಭ ವಾರ್ತೆ ಚಾಮರಾಜನಗರಸಾಲ ಕಟ್ಟದ ರೈತರಿಗೆ ನೋಟಿಸ್ ನೀಡುತ್ತಿರುವ ಗ್ರಾಮೀಣ ಬ್ಯಾಂಕುಗಳ ಸಾಲ ವಸೂಲಾತಿ ಪದ್ಧತಿ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ರೈತರ ಸಂಕಲ್ಪ ಜಾಥಾವು ಜಿಲ್ಲಾ ಕೇಂದ್ರ ಚಾಮರಾಜನಗರಕ್ಕೆ ಸೋಮವಾರ ಆಗಮಿಸಿತು.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಸಮಾವೇಶಗೊಂಡ ರೈತರು ಕೆಲಕಾಲ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗಳು ಸಾಲದ ಮೊತ್ತಕ್ಕಿಂತ ೪ ಪಟ್ಟು ಹೆಚ್ಚು ಹಣವನ್ನು ಪಾವತಿಸುವಂತೆ ರೈತರಿಗೆ ನೋಟಿಸ್ ನೀಡಲಾಗುತ್ತಿದ್ದು ಇದನ್ನು ಖಂಡಿಸಿ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ರಾಜ್ಯಾದ್ಯಂತ ಈ ಸಂಕಲ್ಪ ಜಾಥಾವನ್ನು ಹಮ್ಮಿಕೊಂಡಿದ್ದೇವೆ ಎಂದರು.ಅನ್ನ ನೀಡುವ ರೈತರ ಮೇಲೆ ದಾವೆ ಹೂಡುವ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿ, ಉದ್ದಿಮಿದಾರರಿಗೆ ಸಾಲ ಮನ್ನಾ ಮಾಡಿದಂತೆ ರೈತರ ಸಾಲ ಮನ್ನಾ ಮಾಡಲು ನೀತಿ ರೂಪಿಸುವಂತೆ ಆಗ್ರಹಿಸಿದರು. ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗಳು ಅವೈಜ್ಞಾನಿಕ ರೀತಿಯ ಸಾಲ ವಸೂಲಾತಿ ನೀತಿಯನ್ನು ಅನುಸರಿಸಿದೆ, ರೈತರ ಮನೆಯ ಬಾಗಿಲಿಗೆ ನೋಟಿಸ್‌ಗಳು ಬರುತ್ತಿವೆ, ಇದೇ ಬ್ಯಾಂಕಿನಲ್ಲಿ ಲಕ್ಷ ಲಕ್ಷ ಕೋಟಿ ಸಾಲ ಪಡೆದ ಉದ್ಯಮದಾರರ ಸಾಲವನ್ನ ವಸೂಲಿ ಮಾಡಲು ಸಾಲ ವಸೂಲಾತಿ ಮಂಡಳಿಯಲ್ಲಿ ವಾವೆಗಳನ್ನು ಹಾಕದೆ ಮನ್ನಾ ಮಾಡಿದ್ದಾರೆ. ಇತ್ತ ದೇಶಕ್ಕೆ ಅನ್ನ ನೀಡುವ ರೈತರ ಮೇಲೆ ಕಾನೂನು ಪ್ರಯೋಗ ಮಾಡುತ್ತಿರುವುದು ಖಂಡನೀಯ ಎಂದರು. ಉದ್ದಿಮೆದಾರರಿಗೆ ಸಾಲಮನ್ನಾ ಮಾಡಿದಂತೆ ರೈತರಿಗೂ ಸಾಲಮನ್ನಾ ಮಾಡಲು ಬ್ಯಾಂಕುಗಳು ಮತ್ತು ಸರ್ಕಾರಗಳು ನೀತಿಯನ್ನು ರೂಪಿಸಬೇಕಾಗಿದೆ ಇಂತಹ ಹಲವು ವಿಷಯಗಳನ್ನು ನಾಡಿನ ಎಲ್ಲಾ ಸಾಲಗಾರ ರೈತರಿಗೆ ತಿಳಿ ಹೇಳುವ ಉದ್ದೇಶದಿಂದ ಈ ಸಂಕಲ್ಪ ಜಾಥಾವು ನಡೆಯುತ್ತಿದೆ ಎಂದರು.

ರೈತನು ದೇಶದ ಬೆನ್ನೆಲುಬು ಎಂದು ಬೆನ್ನನ್ನೇ ಮುರಿಯಲು ಹೊರಟಿರುವ ಸರ್ಕಾರಗಳ ಆರ್ಥಿಕ ನೀತಿಗಳ ವಿರುದ್ಧ ನಾವು ಒಂದಾಗದೆ ಇದ್ದಲ್ಲಿ ಕೆಲವೇ ವರ್ಷಗಳಲ್ಲಿ ಜಮೀನನ್ನೇ ನಂಬಿಕೊಂಡು ಜೀವನ ಮಾಡುತ್ತಿರುವ ರೈತರು ತಮ್ಮ ಜಮೀನುಗಳನ್ನು ಕಾರ್ಪೊರೇಟ್‌ಗಳಿಗೆ ಒಪ್ಪಿಸಿ ಅವರ ಬಳಿ ದಿನಗೂಲಿಯಾಗಿ ದುಡಿಯುವ ಪರಿಸ್ಥಿತಿ ಬರುತ್ತದೆ.

ಕರ್ನಾಟಕ ಗ್ರಾಮೀಣ ಬ್ಯಾಂಕಿನವರು ಸಾಲದ ಅಸಲಿನ ಶೇ. ೫೦ರಷ್ಟು ಹಣವನ್ನು ಪಾವತಿಸಿಕೊಂಡು ಹೊಸ ಸಾಲವನ್ನು ನೀಡುವಂತೆ ಒತ್ತಡ ಹೇರಲು, ಸಂಘಟಿತರಾಗಲು ರಾಜ್ಯಾದ್ಯಂತ ಮತ್ತೊಂದು ಸುತ್ತಿನ ಜಾಗೃತಾ ಜಾಥಾವನ್ನು ಹಮ್ಮಿಕೊಂಡಿದೆ ಎಂದರು.

ರೈತರ ಸಂಕಲ್ಪ ಜಾಥಾ ಮಾ.೨೮ರಂದು ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಧಾನ ಕಚೇರಿ ಎದುರು ಬಹಿರಂಗ ಸಭೆ ನಡೆಸುವ ಮೂಲಕ ಸಮಾರೋಪ ಮಾಡಲಾಗುತ್ತದೆ. ಜಾಥಾದಲ್ಲಿ ಆರ್. ಮಾಧವರೆಡ್ಡಿ, ಲೇಪಾಕ್ಷಿ, ಸಿ. ಬಸವರಾಜ, ಕೆ.ಬಸವರೆಡ್ಡಿ, ಸಲೀಂ, ಓಂಕಾರಗೌಡ, ರೆಹಮಾನ್, ನಿವಾಸರೆಡ್ಡಿ, ಬಸವೇಗೌಡ, ರಾಘವೇಂದ್ರ, ಮಂಗೇಶ್ ಇತರರು ಇದ್ದರು.

Share this article