ದ.ಕ.: ಪಶುಪಾಲನಾ ಇಲಾಖೆಗೆ ತೀವ್ರ ಸಿಬ್ಬಂದಿ ಕೊರತೆ!

KannadaprabhaNewsNetwork |  
Published : Aug 10, 2026, 03:00 AM IST
ಕಲ್ಮಡ್ಕದ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ (ಶೂನ್ಯ ಸಿಬ್ಬಂದಿ ಕೇಂದ್ರವೆಂದು ಗುರುತಿಸಿಕೊಂಡಿದೆ) | Kannada Prabha

ಸಾರಾಂಶ

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಕಚೇರಿ ಮತ್ತು ಪಶುವೈದ್ಯಕೀಯ ಆಸ್ಪತ್ರೆ, ಪ್ರಾಥಮಿಕ ಚಿಕಿತ್ಸಾಲಯಗಳಲ್ಲಿ ವೈದ್ಯರು, ಸಿಬ್ಬಂದಿ ಕೊರತೆಯಿಂದ ಜಿಲ್ಲೆಯಾದ್ಯಂತ ಹೈನುಗಾರರು, ನಾಗರಿಕರು ವಿಪರೀತ ಸಂಕಷ್ಟ ಎದುರಿಸುತ್ತಿದ್ದಾರೆ.

ದಯಾನಂದ ಕಲ್ನಾರ್‌

ಮಂಗಳೂರು: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಕಚೇರಿ ಮತ್ತು ಪಶುವೈದ್ಯಕೀಯ ಆಸ್ಪತ್ರೆ, ಪ್ರಾಥಮಿಕ ಚಿಕಿತ್ಸಾಲಯಗಳಲ್ಲಿ ವೈದ್ಯರು, ಸಿಬ್ಬಂದಿ ಕೊರತೆಯಿಂದ ಜಿಲ್ಲೆಯಾದ್ಯಂತ ಹೈನುಗಾರರು, ನಾಗರಿಕರು ವಿಪರೀತ ಸಂಕಷ್ಟ ಎದುರಿಸುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗದ ಜನರು ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಜೀವನ ನಿರ್ವಹಿಸುತ್ತಿದ್ದು, ಅದಕ್ಕೆ ಪೂರಕ ಎಂಬಂತೆ ಇಲಾಖಾ ಮಟ್ಟದಲ್ಲಿ ನೆರವಾಗಲು ಬೇಕಾಗುವ ಸೌಲಭ್ಯ, ಸಹಕಾರ ಪಡೆಯಲು ಸ್ಥಳೀಯ ಚಿಕಿತ್ಸಾ ಕೇಂದ್ರ, ಇಲಾಖೆ ಕಚೇರಿಗೆ ತೆರಳಿದರೆ ಪಶು ವೈದ್ಯರು, ಸಿಬ್ಬಂದಿ ಲಭ್ಯವಿಲ್ಲದೇ ಹೈನುಗಾರಿಕಾ ವಲಯವೇ ಕಂಗಾಲಾಗಿದೆ.

ಶೇ.83 ಹುದ್ದೆಗಳು ಖಾಲಿ:

ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ವ್ಯಾಪ್ತಿಗೆ ಒಟ್ಟು 449 ಮಂಜೂರಾದ ಹುದ್ದೆಗಳಿದ್ದು, ಇದರಲ್ಲಿ ಕೇವಲ 73 ಹುದ್ದೆಗಳು ಮಾತ್ರವೇ ಭರ್ತಿಯಾಗಿದ್ದು. 377 ಹುದ್ದೆಗಳು ಖಾಲಿ ಇರುವ ಮೂಲಕ ಶೇ.83ರಷ್ಟು ಹುದ್ದೆ ಖಾಲಿಯಾಗಿದೆ. ಈ ಖಾಲಿ ಇರುವ ಹುದ್ದೆಗಳಿಗೆ ಪ್ರಸ್ತುತ ಕರ್ತವ್ಯ ನಿರ್ವಹಿಸುವ ಅಧಿಕಾರಿ, ಸಿಬ್ಬಂದಿಗಳೇ ಹೆಚ್ಚುವರಿ ಕೆಲಸ ನಿರ್ವಹಿಸುವ ಒತ್ತಡದ ಸ್ಥಿತಿ ಇದೆ.

ಜಿಲ್ಲೆಯ 2 ಉಪನಿರ್ದೇಶಕರ ಹುದ್ದೆಗಳು ಭರ್ತಿಯಾಗಿದೆ. ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಮಂಜೂರಾದ 6ರಲ್ಲಿ 3 ಹುದ್ದೆ ಭರ್ತಿಯಾಗಿದ್ದು 3 ಖಾಲಿ ಇದೆ. ಮುಖ್ಯ ಪಶುವೈದ್ಯಾಧಿಕಾರಿ 33ರಲ್ಲಿ 11 ಭರ್ತಿಯಾಗಿ, 22 ಖಾಲಿ ಇವೆ. ಹಿರಿಯ ಪಶುವೈದ್ಯಾಧಿಕಾರಿ 14ರಲ್ಲಿ 14 ಭರ್ತಿಯಾಗಿದೆ. ಪಶುವೈದ್ಯಾಧಿಕಾರಿ 19ರಲ್ಲಿ 19 ಖಾಲಿಯಾಗಿದೆ. ಜಾನುವಾರು ಅಭಿವೃದ್ಧಿ ಅಧಿಕಾರಿ 6ರಲ್ಲಿ 1 ಭರ್ತಿಯಾಗಿ, 5 ಖಾಲಿ. ಜಾನುವಾರು ಅಧಿಕಾರಿ 17ರಲ್ಲಿ 9 ಭರ್ತಿಯಾಗಿ, 8 ಖಾಲಿ. ಹಿರಿಯ ಪಶುವೈದ್ಯಕೀಯ ಪರೀಕ್ಷಕರು 61ರಲ್ಲಿ 8 ಭರ್ತಿಯಾಗಿ, 53 ಖಾಲಿ. ಪಶುವೈದ್ಯಕೀಯ ಪರೀಕ್ಷಕರು 30ರಲ್ಲಿ 7 ಭರ್ತಿಯಾಗಿ, 23ಖಾಲಿ. ಕಿರಿಯ ಪಶುವೈದ್ಯಕೀಯ ಪರೀಕ್ಷಕರು 70ರಲ್ಲಿ 6 ಭರ್ತಿಯಾಗಿ, 64 ಖಾಲಿ. ಎಕ್ಸ್‌ರೇ/ಲ್ಯಾಬ್‌ 1ರಲ್ಲಿ 1 ಖಾಲಿ. ಸಹಾಯಕ ಆಡಳಿತಾಧಿಕಾರಿ 1ರಲ್ಲಿ 1 ಖಾಲಿ. ದ್ವಿತೀಯ ದರ್ಜೆ ಸಹಾಯಕರು 6ರಲ್ಲಿ 3 ಭರ್ತಿಯಾಗಿ, 3 ಖಾಲಿ. ಬೆರಳಚ್ಚುಗಾರರು 1ರಲ್ಲಿ 1 ಖಾಲಿ. ಹಿರಿಯ ವಾಹನ ಚಾಲಕರು 7ರಲ್ಲಿ 2 ಭರ್ತಿಯಾಗಿ, 5 ಖಾಲಿಯಾಗಿದೆ. ಡಿ ದರ್ಜೆ ನೌಕರರು 170ರಲ್ಲಿ 2 ಭರ್ತಿಯಾಗಿ, 168 ಖಾಲಿ. ಇದರಲ್ಲಿ 95 ಸಿಬ್ಬಂದಿಯನ್ನು ಹೊರ ಗುತ್ತಿಗೆಯಲ್ಲಿ ಪಡೆದುಕೊಳ್ಳಲಾಗಿದೆ.

ಹಲವೆಡೆ ಶೂನ್ಯ ಸಿಬ್ಬಂದಿ:

ಜಿಲ್ಲೆಯ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಾದ ಸೂರಿಂಜೆ, ಎಕ್ಕಾರು, ಹೊಸಬೆಟ್ಟು, ನೀರುಡೆ, ಕಲ್ಮಡ್ಕ, ಮುಂಡಾಜೆ, ಕಾರ್ಯತಡ್ಕ ಮತ್ತು ಕೆಮ್ರಾಲ್‌ ಪಶು ವೈದ್ಯಕೀಯ ಸಂಸ್ಥೆಗಳಲ್ಲಿ ಎಲ್ಲ ಹುದ್ದೆಗಳು ಖಾಲಿ ಇದ್ದು, ಶೂನ್ಯ ಸಿಬ್ಬಂದಿ ಕೇಂದ್ರಗಳೆಂದು ಗುರುತಿಸಿಕೊಂಡಿದೆ. 2024-25ರಲ್ಲಿ ದ.ಕ. ಜಿಲ್ಲೆಯಲ್ಲಿ ಗುತ್ತಿಗೆ ಪಶುವೈದ್ಯಾಧಿಕಾರಿಗಳ ಹಂಚಿಕೆಯಲ್ಲಿ 13ರಲ್ಲಿ ಸುಬ್ರಹ್ಮಣ್ಯ, ಸಿದ್ದಕಟ್ಟೆ, ಜಿಲ್ಲಾ ಪಾಲಿಕ್ಲಿನಿಕ್‌ ಮಂಗಳೂರು, ನರಿಮೊಗರು ಮುಂತಾದಲ್ಲಿ 4 ಪಶುವೈದ್ಯಾಧಿಕಾರಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಕೊರತೆ ನೀಗಿಸಲು ಗ್ರಾಮಸ್ಥರ ಆಗ್ರಹ

ಕಳೆದ ಹಲವು ವರ್ಷಗಳಿಂದ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಹಾಗೂ ತಾಲೂಕು, ಜಿಲ್ಲಾ ಮಟ್ಟದ ಕೇಂದ್ರಗಳಲ್ಲೂ ಬಹುತೇಕ ಹುದ್ದೆಗಳು ಭರ್ತಿಯಾಗದೇ ಖಾಲಿ ಇರುವುದರಿಂದ ಹೈನುಗಾರರು ತಮ್ಮ ಸಮಸ್ಯೆ, ಜಾನುವಾರುಗಳಿಗೆ ತುರ್ತು ಚಿಕಿತ್ಸಾ ಸಂದರ್ಭ, ಔಷಧಿ ನೀಡಲು ಸಕಾಲಕ್ಕೆ ಸಾಧ್ಯವಾಗದೇ ವ್ಯಾಪಕ ಸಂಕಷ್ಟ ಎದುರಿಸುತ್ತಿದ್ದು, ಗ್ರಾಮ ಸಭೆ, ತಾಲೂಕಿನ ಸಭೆಗಳಲ್ಲೂ ಇಲಾಖೆಯ ಸಿಬ್ಬಂದಿ ಕೊರತೆ ಸಮಸ್ಯೆ ಬಗೆಹರಿಸಲು ಆಗ್ರಹಿಸುತ್ತಿದ್ದಾರೆ. ಕೆಲವೆಡೆ ಶೂನ್ಯ ಸಿಬ್ಬಂದಿ ಕೇಂದ್ರದ ಕಡೆಗಳಲ್ಲಿ ಚಿಕಿತ್ಸಾ ಕೇಂದ್ರಗಳೇ ಅನಾಥವಾಗಿರುವುದು ತೀವ್ರತೆಯನ್ನು ತೆರೆದಿಡುತ್ತಿದೆ. ಗ್ರಾಮೀಣ ಭಾಗದಲ್ಲಿ ಹೈನುಗಾರರು ಹೈನುಗಾರಿಕೆಯಿಂದಲೂ ಹಿಂದೆ ಸರಿಯುತ್ತಿರುವ ಘಟನೆಗಳು ನಡೆಯುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ 499ರಲ್ಲಿ 377 ಹುದ್ದೆಗಳು ಖಾಲಿ ಇದೆ. ಖಾಲಿ ಹುದ್ದೆ ಭರ್ತಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಇರುವ ವೈದ್ಯರು, ಸಿಬ್ಬಂದಿಗಳನ್ನು ಹೊಂದಿಸಿಕೊಂಡು ಕರ್ತವ್ಯ ನಿರ್ವಹಿಸಲಾಗುತ್ತಿದೆ.

-ಡಾ.ಅರುಣ್‌ ಕುಮಾರ್‌ ಶೆಟ್ಟಿ, ಉಪ ನಿರ್ದೇಶಕರು, ಪಶುಪಾಲನಾ ಇಲಾಖೆ, ದ.ಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚೌಕಿ ರಂಗಶಾಲೆಯೂ ಆಗಿತ್ತು: ದಿವಾಣ ಶಿವಶಂಕರ ಭಟ್
ಉನ್ನತ ಸಾಧನೆ ಮೂಲಕ ಸಮಾಜಕ್ಕೆ ಮಾದರಿಯಾಗಿ: ಪ್ರೊ. ಇಸ್ಮಾಯಿಲ್‌