ಪ್ರಾಣಿಬಲಿ, ದಲಿತರಿಗೆ ಬಹಿಷ್ಕಾರ ಪ್ರಕರಣ: ದೇವಿಕೇರಾಗೆ ಅಧಿಕಾರಿಗಳ ತಂಡ ಭೇಟಿ, ಶಾಂತಿ ಸಭೆ

KannadaprabhaNewsNetwork | Published : Dec 17, 2023 1:45 AM

ಸಾರಾಂಶ

ಪ್ರಾಣಿಬಲಿ, ದಲಿತರಿಗೆ ಬಹಿಷ್ಕಾರ ಪ್ರಕರಣ: ದೇವಿಕೇರಾಗೆ ಅಧಿಕಾರಿಗಳ ತಂಡ ಭೇಟಿ, ಶಾಂತಿ ಸಭೆಸಂಚಲನ ಮೂಡಿಸಿದ ಕನ್ನಡಪ್ರಭದಲ್ಲಿ ಪ್ರಕಟಗೊಂಡ ಸುದ್ದಿ. ಎಲ್ಲವೂ ಸರಿಯಿದೆ ಎಂದು ಹೇಳುವಂತೆ ಗ್ರಾಮಸ್ಥರಿಗೆ ಮುಖಂಡರ ಒತ್ತಡ?

ಸಂಚಲನ ಮೂಡಿಸಿದ ಕನ್ನಡಪ್ರಭದಲ್ಲಿ ಪ್ರಕಟಗೊಂಡ ಸುದ್ದಿ । ಎಲ್ಲವೂ ಸರಿಯಿದೆ ಎಂದು ಹೇಳುವಂತೆ ಗ್ರಾಮಸ್ಥರಿಗೆ ಮುಖಂಡರ ಒತ್ತಡ?

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ಸುರಪುರ ತಾಲೂಕಿನ ದೇವಿಕೇರಾ ಗ್ರಾಮದಲ್ಲಿ ಡಿ.18 ರಿಂದ ಎರಡು ದಿನಗಳ ಕಾಲ ನಡೆಯಲಿರುವ ಗ್ರಾಮದೇವತೆ ಜಾತ್ರೆಯ ವೇಳೆ ಸಾವಿರಾರು ಮೂಕಪ್ರಾಣಿಗಳನ್ನು ದೇವರ ಹೆಸರಲ್ಲಿ ಬಲಿ ನೀಡುವ ಹಾಗೂ ಮಾಂಸ ಸೇವಿಸದಿದ್ದರೆ ದಲಿತರಿಗೆ ಬಹಿಷ್ಕಾರ ಆರೋಪಗಳಿಂದಾಗಿ ಅಧಿಕಾರಿಗಳು ಶನಿವಾರ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರೊಡನೆ ಶಾಂತಿಸಭೆ ನಡೆಸಿದರು.

ಶನಿವಾರ ಡಿ.16 ರಂದು ಕನ್ನಡಪ್ರಭದಲ್ಲಿ ಈ ಕುರಿತು ಪ್ರಕಟಗೊಂಡ ಸುದ್ದಿ ಸಂಚಲನ ಮೂಡಿಸಿತ್ತು. ಬೆಳ್ಳಂಬೆಳಗ್ಗೆಯೇ ಅಧಿಕಾರಿಗಳನ್ನು ಬಡಿದೆಚ್ಚರಿಸಿದ ಕನ್ನಡಪ್ರಭದ ವರದಿ, ಅಧಿಕಾರಿಗಳ ಗ್ರಾಮಕ್ಕೆ ತೆರಳಿ ಶಾಂತಿಸಭೆ ನಡೆಸಲು ಕಾರಣವಾಯಿತು. ಜಾತ್ರೆಯಲ್ಲಿ ಯಾವುದೇ ಇಂತಹ ಅಹಿತರಕರ ಘಟನೆ ನಡೆಯದಂತೆ ಹಾಗೂ ಕಾನೂನು ಪಾಲನೆ ಮಾಡುವಂತೆ ಅಧಿಕಾರಿಗಳು ಗ್ರಾಮಸ್ಥರಿಗೆ ತಿಳಿವಳಿಕೆ ಮೂಡಿಸಿದರು.

ದೇವಿಕೇರಾದಲ್ಲಿ ನಡೆಯಲಿರುವ ಜಾತ್ರೆಯಲ್ಲಿ ಪ್ರಾಣಿಬಲಿ ಹಾಗೂ ಅನಿಷ್ಟ ಪದ್ಧತಿ ತಡೆಯುವಂತೆ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಲ್ಲಿಕಾರ್ಜುನ್ ಕ್ರಾಂತಿ ಅವರು ಜಿಲ್ಲಾಧಿಕಾರಿ ಸೇರಿದಂತೆ ಎಸ್ಪಿ ಹಾಗೂ ಸಿಇಒ ಅವರಿಗೆ ಪತ್ರ ಮುಖೇನ ಮನವಿ ಸಲ್ಲಿಸಿದ್ದರು.

ದಬಾವ್‌ ಹಾಕಲಾಯ್ತೇ?:

ಈ ಮಧ್ಯೆ, ಗ್ರಾಮದಲ್ಲಿ ಇಂತಹದ್ದೇನೂ ನಡೆದೇ ಇಲ್ಲ, ಯಾವುದೇ ಡಂಗೂರ ಸಾರಿಲ್ಲ, ಎಲ್ಲವೂ ಸುಳ್ಳು ಎಂದು ಹೇಳುವಂತೆ ಊರ ಮುಖಂಡರು ತಾಕೀತು ಮಾಡಿದ್ದರು. ಅಧಿಕಾರಿಗಳು ಬಂದಾಗ ಎಲ್ಲವೂ ಸರಿಯಿದೆ ಎಂದು ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆಯಿತು ಎಂದು ಹೆಸರೇಳಲಿಚ್ಚಿಸದ ಗ್ರಾಮಸ್ಥರೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದರು.

ಇಷ್ಟೆಲ್ಲ ಆದರೂ ಸಹ, ಜಾತ್ರೆ ನಡೆಸಿಯೇ ತೀರಬೇಕೆಂದು ಕೆಲವರು ರಾಜಕೀಯ ಪ್ರಭಾವದ ವಶೀಲಿ ಹಾಕಲೆಂದು ಶನಿವಾರ ಸಂಜೆ ಸುರಪುರಕ್ಕೆ ತೆರಳಿದ್ದರು. ಕಾನೂನು ಕಾಪಾಡುವಲ್ಲಿ ಮುಂದಾಗಬೇಕಾದ ಕೆಲವು ಅಧಿಕಾರಿಗಳೇ ಜಾತ್ರೆಗೆ ಪರೋಕ್ಷ ಕುಮ್ಮಕ್ಕು ನೀಡುತ್ತಿದ್ದು, ಸದ್ದುಗದ್ದಲವಿಲ್ಲದೆ ಜಾತ್ರೆ ನಡೆಸಿದರೆ ಎಲ್ಲರಿಗೂ ಕ್ಷೇಮ ಎಂದು ತಿಳಿಸಿದ್ದಾರೆ ಎಂದೆನ್ನಲಾಗಿದೆ.

- - - -

16ವೈಡಿಆರ್‌9 : ದೇವಿಕೇರಾದಲ್ಲಿ ಶನಿವಾರ ಬೆಳಗ್ಗೆ ಅಧಿಕಾರಿಗಳು ಗ್ರಾಮಸ್ಥರೊಡನೆ ಸಭೆ ನಡೆಸಿದರು.

- - - -

Share this article