ಎಂ. ಪ್ರಹ್ಲಾದ್
ಕನಕಗಿರಿ: ಪಟ್ಟಣ ಸೇರಿ ಠಾಣಾ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಳ್ಳತನಕ್ಕೆ ಜನತೆ ಬೆಚ್ಚಿಬಿದ್ದಿದ್ದಾರೆ. ಕಳ್ಳತನ ನಿಯಂತ್ರಿಸಲು ಪೊಲೀಸರಿಂದ ಸಾಧ್ಯವಾಗಿಲ್ಲ. ಈ ನಡುವೆ ಇಲ್ಲಿನ ವ್ಯಾಪಾರಿಯೊಬ್ಬ ಅಂಗಡಿ ಕಳ್ಳತನವಾಗದಂತೆ ತಡೆಯಲು ಸೈರನ್ ಹೊಡೆಯುವ ಬೀಗ ಅಳವಡಿಸಿದ್ದಾರೆ.ಠಾಣಾ ವ್ಯಾಪ್ತಿಯ ಅರಳಹಳ್ಳಿ, ನವಲಿ, ಬೆನಕನಾಳ ಗ್ರಾಮದಲ್ಲಿ ಮನೆ ಹಾಗೂ ದೇವಸ್ಥಾನದ ಹುಂಡಿ ಕಳ್ಳತನವಾಗಿದೆ. ಪಟ್ಟಣದಲ್ಲಿ ಠಾಣೆಗೆ ಹೊಂದಿಕೊಂಡಿರುವ ಎಸ್‌ಬಿಐ ಸೇವಾ ಕೇಂದ್ರದಲ್ಲಿ ದೊಡ್ಡ ಮೊತ್ತದ ನಗದು, ಆಭರಣ ಕಳುವು ಮಾಡಲಾಗಿದೆ. ಅದಲ್ಲದೇ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕುರಿ, ಪಂಪ್‌ಸೆಟ್, ಬೆಳೆ ಕಳ್ಳತನ ಹೀಗೆ ನಿರಂತರ ನಡೆಯುತ್ತಲೇ ಇದೆ. ಕಳ್ಳತನ ಪ್ರಕರಣಗಳ ಪಟ್ಟಿ ಮಾಡಿದರೆ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ.
ಇತ್ತೀಚೆಗೆ ಕುರಿಗಳ್ಳತನ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದರಾದರೂ ಕಳ್ಳತನ ಪ್ರಕರಣಗಳು ಮಾತ್ರ ನಿಂತಿಲ್ಲ. ಫೆ. ೯ಕ್ಕೆ ಪಟ್ಟಣಕ್ಕೆ ಆಗಮಿಸಿದ್ದ ಸಚಿವ ಶಿವರಾಜ ತಂಗಡಗಿ ಅವರು ಸರಣಿ ಕಳ್ಳತನ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಈ ವಿಚಾರ ಪತ್ರಿಕಾಗೋಷ್ಠಿಯಲ್ಲಿಯೂ ಚರ್ಚೆಯಾಗಿತ್ತು. ಸಚಿವರು ಸ್ಥಳದಲ್ಲಿಯೇ ಇದ್ದ ಈ ಹಿಂದಿನ ಪೊಲೀಸ್ ಅಧಿಕಾರಿಯೊಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೆ, ಕಳ್ಳತನ ಪ್ರಕರಣಗಳು ಮಾತ್ರ ಮುಂದುವರಿದಿದೆ. ಈ ನಡುವೆ ನವಲಿ ರಸ್ತೆಯಲ್ಲಿ ಇತ್ತೀಚೆಗೆ ಸರಣಿಗಳ್ಳತನದಿಂದ ಬೆಚ್ಚಿ ಬಿದ್ದಿರುವ ವ್ಯಾಪಾರಿಯೊಬ್ಬ ತನ್ನ ಅಂಗಡಿಗೆ ಸೈರನ್ ಹೊಂದಿರುವ ಅಲಾರಾಮ್ ಬೀಗ ಅಳವಡಿಸಿದ್ದಾರೆ.ಏನಿದರ ವೈಶಿಷ್ಟ್ಯ?: ಇದು ಫೈಬರ್ ರೀತಿಯ ಚಿಕ್ಕ ಪೆಟ್ಟಿಗೆಯಾಗಿದ್ದು, ಇದನ್ನು ಹಾಕಿದಾಗ ಯಾರೇ ಮುಟ್ಟಿದರೂ ಸುಮಾರು ೧೦ ನಿಮಿಷಗಳ ಕಾಲ ಸೈರನ್ ಮಾಡುತ್ತದೆ. ಪೆಟ್ಟಿಗೆ ಒಡೆಯಲು ಮುಂದಾದರೆ, ಸ್ವಲ್ಪ ಅಲುಗಾಡಿಸಿದರೂ ಸೈರನ್ ಹೊಡೆಯುತ್ತಲೇ ಇರುತ್ತದೆ. ಅದರಿಂದ ಸುತ್ತಮುತ್ತಲಿನವರ ಗಮನ ಸೆಳೆಯಲು ಅನುಕೂಲವಾಗುತ್ತದೆ.
ನಿರ್ಲೂಟಿಯಲ್ಲಿ ಕುರಿಗಳ್ಳತನ: ಡಿವೈಎಸ್‌ಪಿ ಸಹಿತ ಸ್ಥಳೀಯ ಪಿಐಗೆ ಸಚಿವರು ಕಳ್ಳತನ ಪ್ರಕರಣ ತಡೆಯುವಂತೆ ಕ್ರಮ ವಹಿಸಲು ಸೂಚಿಸಿದರೂ ಸಹ ಕಳ್ಳತನ ಪ್ರಕರಣಗಳು ತಹಬದಿಗೆ ಬಂದಿಲ್ಲ. ನಿರ್ಲೂಟಿ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ಮನೆಯ ಮುಂದೆ ನಿಲ್ಲಿಸಿದ್ದ ಎರಡು ಕುರಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಅಲ್ಲದೇ ಈಚೆಗೆ ಕೆ. ಕಾಟಾಪುರದ ರೈತರ ಹೊಲ, ಗದ್ದೆಗಳಲ್ಲಿ ಬಳಸಲಾಗಿದ್ದ ಮೋಟಾರ್ ಕೇಬಲ್ ಕಳ್ಳತನವಾಗಿದ್ದು, ಕಳ್ಳರು ರೈತರನ್ನು ಕಾಡುತ್ತಿದ್ದಾರೆ.
ನನ್ನ ಅಂಗಡಿಯ ಅಕ್ಕಪಕ್ಕದಲ್ಲೇ ಅಂಗಡಿಗಳ ಸರಣಿಗಳ್ಳತನವಾಗಿವೆ. ಅದಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ಹೊಸ ಮಾದರಿಯ ಫೈಬರ್‌ನ ಕೀಲಿ ಅಳವಡಿಸಿದ್ದೇನೆ. ಇದು ಕಳ್ಳತನದಿಂದ ರಕ್ಷಣೆ ನೀಡಬಹುದು ಎಂದು ನಂಬಿದ್ದೇನೆ ಎಂದು ಕನಕಗಿರಿ ವ್ಯಾಪಾರಿ ಶರಣು ಕಲಕೇರಿ ಹೇಳಿದರು.