ಮಂಗಳೂರು: ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಾಲೇಜುಗಳಲ್ಲಿ ರ್‍ಯಾಗಿಂಗ್ ಪಿಡುಗು ಮಿತಿ ಮೀರುತ್ತಿದ್ದು, ಇದನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಆರೋಪಿಸಿದ್ದಾರೆ.
ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರ್‍ಯಾಗಿಂಗ್ ನಡೆಸದಂತೆ ನಿರ್ಬಂಧ ಇದ್ದು, ಕಟ್ಟುನಿಟ್ಟಿನ ಕಾನೂನು ಕ್ರಮಗಳು ಇವೆ. ಆದರೂ ರಾಜ್ಯದ ವಿವಿಧ ಕಾಲೇಜುಗಳಲ್ಲಿ ರ್‍ಯಾಗಿಂಗ್ ಬಗ್ಗೆ ಕೇಳಿಬರುತ್ತಿದೆ. ಇದನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದರು.ಕೇಂದ್ರ ಸರ್ಕಾರದ ನಿರ್ದೇಶನದಂತೆ ರ್‍ಯಾಗಿಂಗ್ ತಡೆಗೆ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಪ್ರತ್ಯೇಕ ಮಾಹಿತಿ ನೀಡುವ ವ್ಯವಸ್ಥೆ ಇದೆ. ಪೊಲೀಸರು, ಕೌನ್ಸೆಲರ್ ಹಾಗೂ ಕಾಲೇಜಿನ ಅಧಿಕಾರಿಗಳು ಕಾಲೇಜು ಆರಂಭದ ದಿನಗಳಲ್ಲೇ ಈ ಕುರಿತು ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಬೇಕು. ಪೊಲೀಸರು ವಿಶೇಷ ಗಸ್ತು ನಡೆಸುವ ಮೂಲಕ ಪ್ರಕರಣಗಳು ನಡೆಯದಂತೆ ನಿಗಾ ವಹಿಸಬೇಕು ಎಂದರು.
ಕುಸಿತ ತಡೆಗೆ ಶಾಶ್ವತ ಕ್ರಮ:ಎಡಪದವಿನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಮಳೆ ನೀರು ಸರಾಗ ಹರಿಯಲು ದಾರಿ ಇಲ್ಲದೆ ರಸ್ತೆ ಕುಸಿತದಂತಹ ಘಟನೆಗಳಿಗೆ ಕಾರಣವಾಗಿದೆ. ಸಂಗ್ರಹಗೊಂಡ ಮಳೆ ನೀರನ್ನು ಸರಾಗ ಹರಿಯಲು ವ್ಯವಸ್ಥೆ ಕಲ್ಪಿಸುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗಿದೆ ಎಂದರು.
ಕೆತ್ತಿಕಲ್‌ನಲ್ಲಿ ಪದೇ ಪದೇ ಗುಡ್ಡ ಕುಸಿತ ಉಂಟಾಗುತ್ತಿದೆ. ಇದರಿಂದಾಗಿ ಹೆದ್ದಾರಿಯ ಒಂದು ಬದಿ ಬಂದ್ ಆಗಿದ್ದು, ಏಕಮುಖ ಸಂಚಾರ ನಡೆಸಲಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರವಾಗಿ ಹೆದ್ದಾರಿಯನ್ನೇ ಬಲಭಾಗಕ್ಕೆ ತಿರುಗಿಸುವುದು ಉತ್ತಮ ಎಂಬ ಸಲಹೆ ಎಂಜಿನಿಯರ್‌ಗಳಿಂದ ವ್ಯಕ್ತವಾಗಿದೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಕೆಐಒಸಿಎಲ್ ವಿಲೀನ:
ಕುದುರೆಮುಖ ಕಬ್ಬಿಣ ಮತ್ತು ಅದಿರು ಕಾರ್ಖಾನೆ(ಕೆಐಒಸಿಎಲ್)ಯನ್ನು ಎನ್‌ಎಂಡಿಸಿ(ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್) ಜೊತೆ ವಿಲೀನಗೊಳಿಸುವ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸಲಾಗಿದೆ. ಕೆಲವೊಂದು ತಾಂತ್ರಿಕ ಕಾರಣದಿಂದ ಇದು ವಿಳಂಬವಾಗಿದೆ. ಕೆಐಒಸಿಎಲ್‌ಗೆ ರಾಜ್ಯದ ದೇವದಾರು ಪ್ರದೇಶವನ್ನು ಅದಿರು ನಿಕ್ಷೇಪ ಖರೀದಿಗೆ ಲೀಸ್ ಪಡೆದು ಹಣ ಪಾವತಿಸಿದ್ದರೂ ರಾಜ್ಯ ಸರ್ಕಾರ ಅದಿರು ಖರೀದಿಗೆ ಕ್ಯಾತೆ ತೆಗೆಯುತ್ತಿದೆ. ಇದರಿಂದಾಗಿ ಕೆಐಒಸಿಎಲ್‌ಗೆ ಪೂರ್ಣಪ್ರಮಾಣದಲ್ಲಿ ಕೆಲಸ ಇಲ್ಲದಂತಾಗುತ್ತದೆ. ಹೀಗಾಗಿ ಕೆಐಒಸಿಎಲ್‌ನ್ನು ಎನ್ಎಂಡಿಸಿ ಜೊತೆ ವಿಲೀನಗೊಳಿಸುವುದೇ ಪರಿಹಾರ ಎಂದ ತೀರ್ಮಾನಕ್ಕೆ ಬರಲಾಗಿದೆ ಎಂದರು.ದೇಶವಿರೋಧಿಗಳ ಬಗ್ಗೆ ಯಾಕೆ ಮೌನ?: ಜಾಲತಾಣಗಳಲ್ಲಿ ಟ್ರೋಲ್ ಅಂಟುರೋಗದ ಮೂಲ ಆರ್‌ಎಸ್ಎಸ್ ಎಂಬ ಕಾಂಗ್ರೆಸ್ ರಾಜ್ಯ ವಕ್ತಾರ ಎಂ.ಜಿ.ಹೆಗಡೆ ಟೀಕೆಗೆ ಪ್ರತಿಕ್ರಿಯಿಸಿದ ಶಾಸಕ ಡಾ.ಭರತ್ ಶೆಟ್ಟಿ, ಅಂತಹವರು ಆರ್‌ಎಸ್‌ಎಸ್, ಬಿಜೆಪಿ ಬಗ್ಗೆ ಟೀಕಿಸುವುದಕ್ಕೂ ಅಯೋಗ್ಯರು. ಕಾಂಗ್ರೆಸ್‌ನ ಈ ವ್ಯಕ್ತಿ ಹೈಕಮಾಂಡ್‌ನ್ನು ತೃಪ್ತಿಪಡಿಸಲು ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದಾರೆ ಎಂದೆನಿಸುತ್ತದೆ. ಆದರೆ ದೇಶವಿರೋಧಿ ಶಕ್ತಿಗಳ ಬಗ್ಗೆ ಅವರು ಯಾಕೆ ಮಾತನಾಡುವುದಿಲ್ಲ ಎಂದು ಶಾಸಕ ಡಾ.ಭರತ್ ಶೆಟ್ಟಿ ಪ್ರಶ್ನಿಸಿದರು.