ರೋಣ: ತಾಲೂಕಿನ ಮಾಳವಾಡ ಗ್ರಾಮದಲ್ಲಿ ರಾಶಿ ಮಾಡಲು ರೈತರು ಶೇಖರಣೆ ಮಾಡಿದ ಗೋವಿನಜೋಳ ತೆನೆಗಳ ಗುಂಪಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಫಸಲು ಹಾನಿಯಾಗಿದೆ.ಮಾಳವಾಡ ಗ್ರಾಮದ ರೈತ ಯಲ್ಲಪ್ಪ ಅಂಗಿ ಸೇರಿದಂತೆ ಎಂಟು ಜನ ರೈತರು ಅಂದಾಜು 45 ಟ್ರ್ಯಾಕ್ಟರ್‌ನಷ್ಟು ಬೆಳೆದಿದ್ದ ಮೆಕ್ಕೆಜೋಳದ ತೆನೆಗಳನ್ನು ಮುರಿದು ರಾಶಿ ಮಾಡಲು ಗ್ರಾಮದ ಬಯಲಿನಲ್ಲಿ ಶೇಖರಣೆ ಮಾಡಿದ್ದು, ಗೋವಿನ ಜೋಳದ ತೆನೆಗಳಿಗೆ ಬೆಂಕಿ ತಗುಲಿದ್ದು, ತಕ್ಷಣವೇ ಬೆಂಕಿ ನಂದಿಸಲು ಪ್ರಯತ್ನಿಸುವ ಜತೆಗೆ ರೋಣ ಅಗ್ನಿಶಾಮಕ ಠಾಣೆಗೆ ತಿಳಿಸಿದ್ದರು.
ಸ್ಥಳಕ್ಕೆ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಡೌಡಾಯಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಈ ವೇಳೆಗಾಗಲೆ ಬೆಂಕಿ ವ್ಯಾಪಕವಾಗಿ ಹರಡಿಕೊಂಡ ಕಾರಣ ಬಹುತೇಕ ಫಸಲು ಸುಟ್ಟು ಹೋಗಿದ್ದು, ಅಂದಾಜು ₹5 ಲಕ್ಷ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಬೆಂಕಿ ತಗುಲಿರುವ ಕುರಿತು ನಿಖರ ಮಾಹಿತಿ ತಿಳಿದು ಬಂದಿಲ್ಲ. ಈ ಬಾರಿ ಉತ್ತಮ ಮೆಕ್ಕೆಜೋಳದ ಫಸಲು ಬಂದರೂ ಬೆಲೆ ಕಸಿತದಿಂದ ಕಂಗಾಲಾಗಿದ್ದ ರೈತರು ಬೆಂಕಿ ಅವಘಡದಿಂದ ಆಘಾತಕ್ಕೆ ಒಳಗಾಗಿದ್ದು, ಯಲ್ಲಪ್ಪ ಅಂಗಿ ಸೇರಿದಂತೆ ಹಾನಿಗೊಳಗಾದ ರೈತರು ಸಾಲ ಮಾಡಿ ಮೆಕ್ಕೆಜೋಳ ಬೆಳೆದಿದ್ದು, ಬೆಲೆ ಕುಸಿತದ ಮಧ್ಯೆಯೂ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು ಎಂದು ಅವಲತ್ತುಕೊಂಡರು.ಇಂದಿನಿಂದ ಎನ್ಎಸ್ಎಸ್ ವಿಶೇಷ ಶಿಬಿರ
ಮುಂಡರಗಿ: ಇಲ್ಲಿಯ ಜ.ಅ.ವಿ. ಸಮಿತಿಯ ಜಗದ್ಗುರು ಅನ್ನದಾನೀಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಸ್ತುತ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ದತ್ತು ಗ್ರಾಮ ಬೆಣ್ಣಿಹಳ್ಳಿಯಲ್ಲಿ ಮಾ. 10ರಿಂದ 16ರವರೆಗೆ ನಡೆಯಲಿದೆ ಎಂದು ಪ್ರಾ. ಡಾ. ಎಂ.ವಿ. ಕುಲಕರ್ಣಿ ಮತ್ತು ಕಾರ್ಯಕ್ರಮಾಧಿಕಾರಿ ಅನ್ನದಾನಸ್ವಾಮಿ ಮತ್ತೂರುಮಠ ತಿಳಿಸಿದ್ದಾರೆ.ಮಾ. 10ರಂದು ಸಂಜೆ 6 ಗಂಟೆಗೆ ಶಿಬಿರದ ಉದ್ಘಾಟನೆ ಜರುಗಲಿದೆ. ಡಾ. ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶ್ರೀಮಠದ ಉತ್ತರಾಧಿಕಾರಿ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ ವಹಿಸುವರು. ಕಾಲೇಜು ಮೇಲ್ವಿಚಾರಣಾ ಸಮಿತಿ ಕಾರ್ಯಾಧ್ಯಕ್ಷ ಪ್ರೊ. ಸಿ.ಎಸ್. ಅರಸನಾಳ ಅಧ್ಯಕ್ಷತೆ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ಶಿಬಿರವನ್ನು ಉದ್ಘಾಟಿಸುವರು.ಮಾ. 11ರಂದು ಅಪರಾಧ ತಡೆಯುವಲ್ಲಿ ಯುವಕರ ಪಾತ್ರ ವಿಷಯದ ಉಪನ್ಯಾಸ, ಮಾ. 12ರಂದು ಬೆಳಗ್ಗೆ 8ಕ್ಕೆ ಮಾದಕ ವ್ಯಸನ ಮುಕ್ತ- ದುಶ್ಚಟಗಳ ನಿರ್ಮೂಲನಾ ಅಭಿಯಾನ ಜರುಗುವುದು. ಮಾ.13ರಂದು ಬೆಳಗ್ಗೆ 8ರಿಂದ 10ರ ವರೆಗೆ ಚಿಕ್ಕಮಕ್ಕಳ ತಜ್ಞ ಡಾ. ಗೋಣೇಶ ಮೇವುಂಡಿ ಅವರಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಉಚಿತ ಔಷಧಿ ವಿತರಣೆ ಕಾರ್ಯಕ್ರಮ ನಡೆಯಲಿದೆ. ನಂತರ ಮುಂಡರಗಿಯ ಎಸ್‌ಬಿಎಸ್ ಆಯುರ್ವೆದ ಮೆಡಿಕಲ್ ಕಾಲೇಜಿನ ಸಹಕಾರದೊಂದಿಗೆ ಸಾರ್ವಜನಿಕರ ಆರೋಗ್ಯ ತಪಾಷಣಾ ಶಿಬಿರ ಆಯೋಜಿಸಲಾಗಿದೆ. ಮಾ. 16ರಂದು ಬೆಳಗ್ಗೆ 10 ಗಂಟೆಗೆ ಶಿಬಿರದ ಸಮಾರೋಪ ಸಮಾರಂಭ ಜರುಗಲಿದೆ.