ಕೊಡಗು ಜಿಲ್ಲೆಯಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಸದ್ಯ ಇದುವರೆಗಿನ ಮಳೆ ಪ್ರಮಾಣ, ಹಾರಂಗಿ ಜಲಾಶಯ ನೀರಿನ ಮಟ್ಟ ಹಾಗೂ ಬೆಳೆ ಪರಿಸ್ಥಿತಿ ಮತ್ತಿತರ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಸಚಿವರಾದ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಸದ್ಯ ಇದುವರೆಗಿನ ಮಳೆ ಪ್ರಮಾಣ, ಹಾರಂಗಿ ಜಲಾಶಯ ನೀರಿನ ಮಟ್ಟ ಹಾಗೂ ಬೆಳೆ ಪರಿಸ್ಥಿತಿ ಮತ್ತಿತರ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಸಚಿವರಾದ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದ್ದಾರೆ.

ನಗರದ ಜಿ.ಪಂ.ಸಭಾಂಗಣದಲ್ಲಿ ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಬರ ಪರಿಸ್ಥಿತಿ ಕುರಿತು ಬುಧವಾರ ನಡೆದ ಪರಿಶೀಲನಾ ಸಭೆಯಲ್ಲಿ ಮಾಹಿತಿ ಪಡೆದು ಸಚಿವರು ಮಾತನಾಡಿದರು.

ಜಿಲ್ಲೆಯಲ್ಲಿ ಮಳೆಯಿಂದಾಗಿ ಸ್ಥಳೀಯ ಸಂಸ್ಥೆ, ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಯ ರಸ್ತೆಗಳು ಗುಂಡಿ ಬಿದ್ದಿದ್ದು, ಇವುಗಳನ್ನು ಮುಚ್ಚಲು ಅನುದಾನಕ್ಕೆ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಅಗತ್ಯ ನೆರವು ನೀಡಲಾಗುವುದು, ಸರ್ಕಾರದ ಆಶಯದಂತೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿರ್ದೇಶನದಂತೆ ಅತಿವೃಷ್ಟಿ ಮತ್ತು ಬರ ಪರಿಸ್ಥಿತಿ ಕುರಿತು ಜಿಲ್ಲೆಯ ಹಾರಂಗಿ ಜಲಾಶಯ ಹಾಗೂ ಕೃಷಿ ಮತ್ತು ತೋಟಗಾರಿಕ ಬೆಳೆಗಳ ವೀಕ್ಷಣೆ, ಗೋಶಾಲಾ ವೀಕ್ಷಣೆ ನಡೆಸಿ, ಸಭೆ ನಡೆಸಲಾಗಿದೆ ಎಂದು ಸಚಿವರು ಹೇಳಿದರು.

ಈ ಸಂದರ್ಭ ಮಾತನಾಡಿದ ವಿ.ಪಿ.ಶಶಿಧರ್, ಒಳಚರಂಡಿ ಮಂಡಳಿ ಎಂಜಿನಿಯರ್ ಮತ್ತು ಪುರಸಭೆ ಅಧಿಕಾರಿಗಳು ಹೊಂದಾಣಿಕೆಯಿಂದ ಕೆಲಸ ಮಾಡುತ್ತಿಲ್ಲ. ಇದರಿಂದ ಜನರಿಗೆ ಯಾವುದೇ ರೀತಿಯ ಪ್ರಯೋಜನ ಆಗುತ್ತಿಲ್ಲ ಎಂದು ಸಚಿವರ ಗಮನಕ್ಕೆ ತಂದರು.

ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಮಾಹಿತಿ ನೀಡಿ, ಜಿಲ್ಲೆಯಲ್ಲಿ ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಶೇ.37 ರಷ್ಟು ಮಳೆಯ ಕೊರತೆ ಇದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯ ಶಾಂತಳ್ಳಿ, ಕುಶಾಲನಗರ, ಹುದಿಕೇರಿ ಭಾಗದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಉಳಿದಂತೆ ಕೊರತೆ ಇದೆ ಎಂದರು.

ಜುಲೈ ತಿಂಗಳಲ್ಲಿ ವಾಡಿಕೆ ಮಳೆ 859 ಮಿ.ಮೀ ಆಗಿದ್ದು, ಇದರಲ್ಲಿ 599 ಮಿ.ಮೀ ಮಾತ್ರ ಈ ಬಾರಿ ಮಳೆಯಾಗಿದೆ ಎಂದು ವಿವರಿಸಿದರು.

ಈ ಬಾರಿ ಪೂರ್ವ ಮುಂಗಾರು ಸಂದರ್ಭದಲ್ಲಿ 13 ಮತ್ತು ಮುಂಗಾರಿನಲ್ಲಿ 31 ಒಟ್ಟು 44 ಮನೆ ಹಾನಿ ಪ್ರಕರಣಕ್ಕೆ ಎನ್‍ಡಿಆರ್‍ಎಫ್ ಮಾರ್ಗಸೂಚಿಯಂತೆ ಪರಿಹಾರ ವಿತರಿಸಲಾಗಿದೆ. ಮುಂಗಾರು ಸಂದರ್ಭದಲ್ಲಿ ಇಬ್ಬರು ಮೃತಪಟ್ಟಿದ್ದು, ಅವರಿಗೆ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್‌ , ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಶಶಿಧರ್, ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಲಿಂಗರಾಜು ದೊಡ್ಡಮನಿ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಪ್ರಭು, ಪಂಚಾಯತ್ ರಾಜ್ ಎಂಜಿನಿಯರ್ ನಾಯಕ್, ಸೆಸ್ಕ್ ಎಂಜಿನಿಯರ್ ರಾಮಚಂದ್ರ ಹಾಗೂ ಶಾಲಾ ಶಿಕ್ಷಣಾ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜು, ನಗರಾಭಿವೃದ್ಧಿ ಯೋಜನಾ ಇಲಾಖೆಯ ಯೋಜನಾ ನಿರ್ದೇಶಕರಾದ ಮಂಜುನಾಥ್ ರಾಮಣ್ಣ ಅವರು ತಮ್ಮ ಇಲಾಖೆಗೆ ಅಭಿವೃದ್ಧಿ ಕೆಲಸಗಳ ಸಂಬಂಧ ಮಾಹಿತಿ ನೀಡಿದರು.

ಒಳಚರಂಡಿ ಮಂಡಳಿಯ ಎಇಇ ಪ್ರಸನ್ನ ಅವರು, ಕುಶಾಲನಗರ ಒಳಚರಂಡಿ ಕಾಮಗಾರಿ ಸಂಬಂಧಿಸಿದಂತೆ ಮಾಹಿತಿ ನೀಡಿದರು.

ನಗರಸಭೆ ಅಧ್ಯಕ್ಷ ಪಿ.ಕಲಾವತಿ ಮಾತನಾಡಿ, ಮಡಿಕೇರಿಯಲ್ಲಿ ಒಳಚರಂಡಿ ಕಾಮಗಾರಿಯೂ ಅಪೂರ್ಣವಾಗಿದೆ ಎಂದು ಸಚಿವರ ಗಮನಕ್ಕೆ ತಂದರು. ಶಾಸಕ ಡಾ.ಮಂತರ್ ಗೌಡ ಮಾತನಾಡಿ ಪೂರಕ ಮಾಹಿತಿ ನೀಡಿದರು.

ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಸಚಿವರಾದ ಪಿ.ಎಂ.ನರೇಂದ್ರ ಸ್ವಾಮಿ ಅವರು, ಹಾರಂಗಿ ಬಳಿಯ ಹುಲಸೆ ಗ್ರಾಮದ ಬಳಿಯ ಜಮೀನಿಗೆ ತೆರಳಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗೆ ನಿಗದಿತ ಅವಧಿಯಲ್ಲಿ ಮಳೆಯಾಗದ ಹಿನ್ನೆಲೆ ಬೆಳೆ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.