ಸಂತೋಷ ದೈವಜ್ಞ
ತಾಲೂಕಿನ ಬಹುತೇಕ ಭಾಗ ಅರಣ್ಯದಿಂದ ಕೂಡಿದ್ದು, ಇಲ್ಲಿ ಜಿಂಕೆ, ಸಾರಂಗಗಳು, ಕರಡಿ, ಕಾಡುಹಂದಿ, ನರಿ ಸೇರಿದಂತೆ ಅಪಾರ ಪ್ರಮಾಣದಲ್ಲಿ ವನ್ಯಜೀವಿಗಳು ವಾಸಿಸುತ್ತವೆ. ಈ ಹಿಂದೆ ಕಾಡುಗಳ್ಳ ಬೇಟೆಗಾರರ ಕೈಗೆ ಸಿಕ್ಕು ಮಾತ್ರ ಬಲಿಯಾಗುತ್ತಿದ್ದ ಪ್ರಾಣಿಗಳೀಗ ನೀರಿನ ದಾಹ ತಣಿಸಿಕೊಳ್ಳಲು ನಾಡಿಗೆ ಬಂದು ತಾವೇ ಪ್ರಾಣ ಕಳೆದುಕೊಳ್ಳುತ್ತಿರುವುದು ವಿಪರ್ಯಾಸ.
ತಾಪಮಾನ ಹೆಚ್ಚಿದ್ದರಿಂದ ಅರಣ್ಯ ಪ್ರದೇಶದ ಕೆರೆ-ಕಟ್ಟೆಗಳು, ಹಳ್ಳ-ಕೊಳ್ಳಗಳು ನೀರಿಲ್ಲದೆ ಬರಡು ಗುಂಡಿಯಂತಾಗಿದೆ. ದಾಹ ತಣಿಸಿಕೊಳ್ಳಲು ಕಾಡು ಪ್ರಾಣಿಗಳೆಲ್ಲ ಕಾಡಿನಿಂದ ನಾಡಿನತ್ತ ಲಗ್ಗೆ ಇಟ್ಟು ಪ್ರಾಣ ಬಿಡುತ್ತಿವೆ. ಇನ್ನುಳಿದ ದಿನಗಳಲ್ಲಿ ಹಸಿರಿನಿಂದ ಕಂಗೊಳಿಸುವ ಕಾಡು ಈಗ ಬಣ ಬಣ ಎನ್ನುತ್ತಿವೆ. ಕಾಡುಪ್ರಾಣಿಗಳಿಗೆ ನೆರಳು ಇಲ್ಲದಂತಾಗಿದೆ. ಬಿಸಿಲಿನ ಕಾವಿನಿಂದ ಕಂಗೆಟ್ಟು ಹೋಗಿರುವ ಪ್ರಾಣಿಗಳು ನೀರು-ನೆರಳು ಇರುವ ಜಾಗ ಅರಸಿ ಹೋಗುತ್ತವೆ. ಕೆಲವೊಮ್ಮೆ ರಸ್ತೆ ದಾಟುವ ಧಾವಂತದಲ್ಲಿ ವಾಹನಗಳಿಗೆ ಸಿಲುಕಿ ಸಾಯುತ್ತಿವೆ. ಇನ್ನೊಂದೆಡೆ ನಾಡಿಗೆ ಬಂದ ಪ್ರಾಣಿಗಳನ್ನು ಬೀದಿನಾಯಿಗಳು ಬೆನ್ನಟ್ಟಿ ಕಚ್ಚಿ ಗಾಯಗೊಳಿಸುತ್ತವೆ. ಇದರಿಂದ ಜಿಂಕೆಗಳು ಹೃದಯಾಘಾತಗೊಂಡು ಪ್ರಾಣ ಬಿಡುತ್ತವೆ. ಪ್ರಸಕ್ತ ಸಾಲಿನಲ್ಲಿ ಇದುವರೆಗೂ ಸಾಕಷ್ಟು ಕಡೆ ಜಿಂಕೆ, ಸಾರಂಗಗಳು ಪ್ರಾಣ ಬಿಟ್ಟಿವೆ.ಆತಂಕ
ಮುಂಜಾಗ್ರತಾ ಕ್ರಮದ ಕೊರತೆ
ತೀವ್ರವಾದ ಬಿಸಿಲಿನಿಂದ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗೆ ಕುಡಿಯಲು ಕಿಂಚಿತ್ತೂ ನೀರಿಲ್ಲಂತಾಗಿರುವುದೇ ಪ್ರಾಣಿಗಳು ನಾಡಿನತ್ತ ಮುಖ ಮಾಡಲು ಕಾರಣವಾಗಿದೆ. ವನ್ಯಜೀವಿ ಸಂರಕ್ಷಣೆಗಾಗಿ ಸರ್ಕಾರಗಳು ಕೋಟ್ಯಂತರ ರುಪಾಯಿ ವ್ಯಯಿಸುತ್ತವೆ. ಅರಣ್ಯ ಇಲಾಖೆಯವರು ಎಚ್ಚೆತ್ತುಕೊಂಡು ಅರಣ್ಯ ಪ್ರದೇಶದಲ್ಲಿ ಅಗತ್ಯ ಬೋರ್‌ವೆಲ್ ಕೊರೆಸಿ ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ ಶೇಟ್ ಆಗ್ರಹಿಸಿದ್ದಾರೆ.