ಬರಹಗಾರರಿಂದ ಸದಭಿರುಚಿಯ ಕವನ, ಕಥೆಗಳು ಹೊರಹೊಮ್ಮಲಿ ಎಂದು ಸಹ್ಯಾದ್ರಿ ಸಂಚಯ ಟ್ರಸ್ಟ್ ನ ಅಧ್ಯಕ್ಷ ದಿನೇಶ ಹೊಳ್ಳ ಹೇಳಿದರು.
ಯಲ್ಲಾಪುರ: ಬರಹಗಾರರಿಂದ ಸದಭಿರುಚಿಯ ಕವನ, ಕಥೆಗಳು ಹೊರಹೊಮ್ಮಲಿ ಎಂದು ಸಹ್ಯಾದ್ರಿ ಸಂಚಯ ಟ್ರಸ್ಟ್ ನ ಅಧ್ಯಕ್ಷ ದಿನೇಶ ಹೊಳ್ಳ ಹೇಳಿದರು.
ಪ್ರಣವ ಪ್ರತಿಷ್ಠಾನ ಹಂಡ್ರಮನೆ, ಸಹ್ಯಾದ್ರಿ ಸಂಚಯ ಟ್ರಸ್ಟ್ ಮಂಗಳೂರು ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡ ಭಾವಗಳ ಬ್ರಹ್ಮಾಂಡ ಕವನ ಸಂಕಲನ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ನಮ್ಮ ಸಾಹಿತ್ಯ ರಚನೆಯಲ್ಲಿ ಪರಿವರ್ತನೆ ಕಂಡುಕೊಳ್ಳಬೇಕು. ಸಾಹಿತ್ಯದ ಓದಿನಿಂದ ಬದಲಾವಣೆ ತರುವಂತಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿ, ಸಮಾಜದಲ್ಲಿ ಪ್ರತಿ ವ್ಯಕ್ತಿಯಲ್ಲಿಯೂ ವಿಶೇಷತೆ ಇದ್ದೇ ಇರುತ್ತದೆ. ಉತ್ತಮ ಪ್ರೇರಣೆ ದೊರೆತರೆ ಕೆಲವರು ಸಾಧನೆ ಮಾಡುತ್ತಾರೆ. ಆ ಸಾಧನೆಗೆ ಪುಷ್ಠಿಯಾಗಿ ನಿಲ್ಲುವವರು ಬೇಕು ಎಂದು ಹೇಳಿದರು.
ಸಂಕಲ್ಪ ಸಂಸ್ಥೆಯ ಪ್ರಮೋದ ಹೆಗಡೆ ಮಾತನಾಡಿ, ಭಾವಗಳ ಬ್ರಹ್ಮಾಂಡದಿಂದ ನಮ್ಮನ್ನು ಪ್ರೀತಿಸುವ ಬದುಕನ್ನು ಕಟ್ಟಿಕೊಳ್ಳೋಣ ಎಂದರು.
ಪ್ರಾಚಾರ್ಯ ಡಾ. ಆರ್.ಡಿ. ಜನಾರ್ದನ ಮಾತನಾಡಿ, ನಮ್ಮ ಬದುಕು ಇತರರಿಗೆ ಪ್ರೇರಣೆ ನೀಡುವಂತಿರಬೇಕು. ಅಂತಹ ಸಾಹಿತ್ಯವನ್ನು ಕೊಡುವ ಪ್ರಯತ್ನ ಮಾಡಿದರೆ ಸಮಾಜ ಸ್ವೀಕರಿಸುತ್ತದೆ. ಪರಿವರ್ತನೆ ಕಂಡುಕೊಳ್ಳುತ್ತದೆ ಎಂದರು.
ವೇದಿಕೆಯಲ್ಲಿ ಕ.ಸಾ.ಪ. ಅಧ್ಯಕ್ಷ ವಿ. ಸುಬ್ರಹ್ಮಣ್ಯ ಭಟ್ಟ, ಸಮಗ್ರ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ನರಸಿಂಹನಾಯ್ಕ ಕ.ಸಾ.ಪ. ನಿಕಟಪೂರ್ವ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ, ಕೃತಿಕಾರ ಶ್ರೀಕಾಂತ ವೆಂಕಟೇಶ ನಾಯ್ಕ ಉಪಸ್ಥಿತರಿದ್ದರು.
ಪ್ರಣವ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ತಮ ಜೀವನಕ್ರಮ ನಮ್ಮನ್ನು ಮೇಲಕ್ಕೆತ್ತುತ್ತದೆ. ಒಳಗಿನ ಭಾವ ಹೊರಹೊಮ್ಮಿದರೆ ಉಳಿದವರಿಗೆ ಸಿಗುವ ಪ್ರೇರಣೆಯಿಂದ ಒಂದಷ್ಟು ಬದಲಾವಣೆ ಸಾಧ್ಯ ಎಂದು ಹೇಳಿದರು. ಆಯೇಷಾ ಶೇಖ್ ಪ್ರಾರ್ಥಿಸಿದರು. ಶಿಕ್ಷಕ ರಾಘವೇಂದ್ರ ಟಿ. ನಾಯ್ಕ್ ಸ್ವಾಗತಿಸಿದರು. ನಿವೃತ್ತ ಶಿಕ್ಷಕಿ ಯಮುನಾ ಪಿ. ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಸತೀಶ ಹೆಗಡೆ ಕುಂದರಗಿ ನಿರ್ವಹಿಸಿದರು. ನಟರಾಜ್ ಗೌಡರ ವಂದಿಸಿದರು. ನಂತರ ಕವಿಗೋಷ್ಠಿ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.