ಬೆಂಗಳೂರು : ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ನಗರಕ್ಕೆ ಜುಲೈ ತಿಂಗಳಲ್ಲೂ ಭಾರಿ ಮಳೆ ಕೊರತೆಯಾಗಿದ್ದು, ಸರಾಸರಿಗಿಂತ ಶೇ.83ರಷ್ಟು ಕಡಿಮೆ ಮಳೆಯಾಗಿದೆ. ಇದು ಕಳೆದ 108 ವರ್ಷಗಳಲ್ಲಿ ದಾಖಲಾಗಿರುವ ಅತಿ ಕಡಿಮೆ ಮಳೆ!
ಜುಲೈ ತಿಂಗಳಲ್ಲಿ ಕೇಂದ್ರ ಹವಾಮಾನ ಇಲಾಖೆಯ ನಗರ ಮಳೆ ಮಾಪನ ಕೇಂದ್ರದಲ್ಲಿ ಕೇವಲ 23 ಮಿ.ಮೀ ಮಳೆ ದಾಖಲಾಗಿದ್ದು, ಇದು 108 ವರ್ಷಗಳಲ್ಲಿ ಸುರಿದ ಅತ್ಯಂತ ಕಡಿಮೆ ಮಳೆಯಾಗಿದೆ. 1918ರ ಜುಲೈನಲ್ಲಿ ಕೇವಲ 18.5 ಮಿ.ಮೀ ಮಳೆಯಾಗಿತ್ತು. ಇನ್ನು ಎಚ್‌ಎಎಲ್ ಏರ್‌ಪೋರ್ಟ್‌ನಲ್ಲಿ 28 ಮಿ.ಮೀ, ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 20 ಮಿ.ಮೀ ಮಳೆಯಾಗಿದೆ ಎಂದು ಕೇಂದ್ರ ಹವಾಮಾನ ಇಲಾಖೆ ವರದಿಗಳು ಹೇಳಿವೆ.
ರಾಜ್ಯ ಹವಾಮಾನ ಇಲಾಖೆ ವರದಿ:
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ಶೇ.90ರಷ್ಟು ಮಳೆ ಕೊರತೆಯಾಗಿದೆ. ಬೆಂಗಳೂರು ಉತ್ತರ ತಾಲೂಕು ಶೇ.86ರಷ್ಟು ಕೊರತೆ, ಬೆಂಗಳೂರು ದಕ್ಷಿಣ ತಾಲೂಕು ಶೇ.91ರಷ್ಟು ಕೊರತೆ, ಬೆಂಗಳೂರು ಪೂರ್ವ ತಾಲೂಕು ಶೇ.83ರಷ್ಟು ಕೊರತೆ ಹಾಗೂ ಯಲಹಂಕ ತಾಲೂಕಿನಲ್ಲಿ ಸರಾಸರಿಗಿಂತ ಶೇ.82ರಷ್ಟು ಕಡಿಮೆ ಮಳೆಯಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಮೇಲ್ವಿಚಾರಣೆ ಕೇಂದ್ರದ ವರದಿ ತಿಳಿಸಿದೆ.
ಇನ್ನು ಜೂನ್ ಮತ್ತು ಜುಲೈ ತಿಂಗಳನ್ನು ಒಳಗೊಂಡಂತೆ ಮುಂಗಾರು ಅವಧಿಯಲ್ಲಿ ಬೆಂಗಳೂರು ನಗರಕ್ಕೆ ಶೇ.39ರಷ್ಟು ಮಳೆ ಕೊರತೆಯಾಗಿದೆ. ಆನೇಕಲ್‌ನಲ್ಲಿ ಸರಾಸರಿ 98.3 ಮಿ.ಮೀ ಮಳೆಯಾಗಬೇಕಿತ್ತು. ಆದರೆ, 9.9 ಮಿ.ಮೀ ಮಳೆಯಾಗಿದೆ. ಬೆಂಗಳೂರು ಉತ್ತರದಲ್ಲಿ ಸರಾಸರಿ 115.2 ಮಿ.ಮೀ ಬದಲು 16.7 ಮಿ.ಮೀ, ಬೆಂಗಳೂರು ದಕ್ಷಿಣದಲ್ಲಿ 89.3 ಮಿ.ಮೀ ಮಳೆಯಾಗಬೇಕಿದ್ದು, 8.2 ಮಿ.ಮೀ, ಪೂರ್ವದಲ್ಲಿ ಸರಾಸರಿ 99.8 ಮಿ.ಮೀ ಮಳೆಯಾಗಬೇಕಿದ್ದು, ಶೇ. 13.3 ಮಿ.ಮೀ ಮಾತ್ರ ಮಳೆಯಾಗಿದೆ. ಯಲಹಂಕದಲ್ಲಿ ಸರಾಸರಿ 75.5 ಮಿ.ಮೀ ಬದಲು 14 ಮಿ.ಮೀ ಮಳೆಯಾಗಿದೆ.
ರಾಜ್ಯದಲ್ಲಿ ದುರ್ಬಲ ಮುಂಗಾರಿನಿಂದ ಒಟ್ಟಾರೆ ಮಳೆ ಕೊರತೆ, ಹವಾಮಾನ ವೈಪರಿತ್ಯದ ಎಲ್ ನೀನೋ ಪರಿಣಾಮದಿಂದಾಗಿ ನಗರಕ್ಕೆ ಮಳೆಯಾಗುತ್ತಿಲ್ಲ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ಆಗಸ್ಟ್‌ನಲ್ಲೂ ಮಳೆ ಕೊರತೆ
ಆಗಸ್ಟ್ ತಿಂಗಳಲ್ಲೂ ನಗರಕ್ಕೆ ಉತ್ತಮ ಮಳೆಯಾಗುವ ಯಾವುದೇ ಸೂಚನೆಗಳು ಸದ್ಯಕ್ಕೆ ಕಾಣಿಸುತ್ತಿಲ್ಲ. ಮುಂದಿನ ಒಂದು ವಾರ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ಇಲ್ಲ. ಅಲ್ಲಲ್ಲಿ ಚದುರಿದಂತೆ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೊಳವೆಬಾವಿ ನೀರಿಗೆ ಬರ!
ಮಳೆ ಕೊರತೆಯಿಂದ ಅಂತರ್ಜಲ ಮರುಪೂರಣ ಆಗುವುದಿಲ್ಲ. ನಗರದ ಕೆರೆಗಳಿಗೆ ಮಳೆನೀರಿನ ಕೊರತೆ ಎದುರಾಗಿದೆ. ಈಗ ಇರುವ ನೀರು ಬೇಸಿಗೆಯಲ್ಲಿ ಇನ್ನಷ್ಟು ಕಡಿಮೆಯಾಗಬಹುದು. ಇದರಿಂದ ನಗರದ ಅನೇಕ ಕೊಳವೆಬಾವಿಗಳಲ್ಲಿ ನೀರು ಬತ್ತುವ ಆತಂಕ ಎದುರಾಗಿದೆ. ಮಳೆ ಕೊರತೆಯಿಂದ ಬೇಸಿಗೆಗೆ ಮೊದಲೇ ನಗರಕ್ಕೆ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಗಳು ಇದೆ.
