ಶಿವಮೊಗ್ಗ: ಜಿಲ್ಲೆಯ ಧಾರಾಕಾರ ಮಳೆಯ ಪರಿಣಾಮ ತುಂಗಾ ನದಿಯಲ್ಲಿ ನೀರಿನ ಹರಿವು ಗಣನೀಯವಾಗಿ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಶಿವಮೊಗ್ಗ ಸಮೀಪದ ತುಂಗಾ ಜಲಾಶಯಕ್ಕೆ ಒಳಹರಿವು ಏರಿಕೆಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದ 22 ಗೇಟ್‌ ತೆರೆದು ನೀರು ನದಿಗೆ ಹರಿಸಲಾಗುತ್ತಿದೆ.

ಜಲಾಶಯದ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಪ್ರಸ್ತುತ ಜಲಾಶಯಕ್ಕೆ 27,924 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 25,600 ಕ್ಯುಸೆಕ್ ನೀರನ್ನು ತುಂಗಾ ನದಿಗೆ ಹೊರಬಿಡಲಾಗುತ್ತಿದೆ. ಮಳೆ ಇದೇ ರೀತಿ ಮುಂದುವರಿದರೆ ಒಳಹರಿವು 50 ಸಾವಿರ ಕ್ಯುಸೆಕ್‌ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ.ನದಿ ಪಾತ್ರದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ಮೀನುಗಾರರು ಹಾಗೂ ಸಾರ್ವಜನಿಕರು ನದಿ ತೀರ ಮತ್ತು ನದಿ ಮಧ್ಯದಲ್ಲಿ ಓಡಾಟ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ. ಯಾವುದೇ ಅಪಾಯ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

------------------

ರಾಮಮಂಟಪ ಮುಳುಗಡೆ ಸನಿಹ?

ತೀರ್ಥಹಳ್ಳಿ: ಕಳೆದ ಎರಡು ದಿನಗಳಿಂದ ತಾಲೂಕಿನಾದ್ಯಂತ ಬಿರುಸಿನಿಂದ ಮಳೆಯಾಗುತ್ತಿದ್ದು ತುಂಗಾ, ಮಾಲತಿ ನದಿಗಳೂ ಸೇರಿದಂತೆ ಉಪನದಿಗಳೂ ಕೂಡಾ ತುಂಬಿ ಹರಿಯುತ್ತಿವೆ. ಇದೇ ರೀತಿ ಮಳೆ ಮುಂದುವರಿದಲ್ಲಿ ಪ್ರವಾಹ ಬರುವ ಸಾಧ್ಯತೆ ಇದೆ.


ಪಟ್ಟಣ ಸಮೀಪ ತುಂಬಿ ಹರಿಯುತ್ತಿರುವ ತುಂಗಾನದಿಯ ಮಧ್ಯದಲ್ಲಿರುವ ರಾಮಮಂಟಪ ಮುಳುಗುವುದಕ್ಕೆ ಸುಮಾರು ಒಂದೂವರೆ ಅಡಿ ಮಾತ್ರ ಬಾಕಿ ಇದೆ. ಮಳೆಯ ಬಿರುಸು ಹೆಚ್ಚಿದ್ದರೂ ಈ ಬಾರಿ ಗಾಳಿಯ ಹೊಡೆತ ಇಲ್ಲದಿರುವ ಕಾರಣ ಗಾಳಿ ಮಳೆಯಿಂದ ಹಾನಿ ಸಂಭವಿಸಿರುವ ಬಗ್ಗೆ ಈ ವರೆಗೆ ಯಾವುದೇ ವರದಿಯಾಗಿಲ್ಲ.

ಆಗುಂಬೆ ಮತ್ತು ಅಗ್ರಹಾರ ಹೋಬಳಿಯ ಅರಳಸುರುಳಿ ನೊಣಬೂರು ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದೆ. ಶುಕ್ರವಾರ ರಾತ್ರಿಯಿಂದಲೂ ಭಾರಿ ಮಳೆಯಾಗುತ್ತಿರುವ ಕಾರಣ ಮಾಲತಿ ನದಿಯಲ್ಲಿ ನೀರಿನ ಏರಿಕೆಯಾಗಿದ್ದು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಗುಡ್ಡೆಕೇರಿ ಶೃಂಗೇರಿ ಮಾರ್ಗದಲ್ಲಿ ಇರುವ ಸೇತುವೆ ನಾಬಳ ಸೇತುವೆ ಮೇಲೆ ನೀರು ನಿಂತಿದ್ದು ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.

------------

ಕಾರಿನ ಮೇಲೇರಿದ ಕುಟುಂಬ

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಮಾಲತಿ ಹೊಳೆ ಉಕ್ಕಿ ಹರಿಯುತ್ತಿದ್ದು, ಹೊಳೆಯಲ್ಲಿ ಕಾರು ಸಿಲುಕಿ ಹೊನ್ನಾವರ ಮೂಲದ ಕುಟುಂಬವೊಂದು ಪರದಾಡಿದ ಘಟನೆ ನಡೆದಿದೆ. ಕಾರಿಗೆ ಏಕಾಏಕಿ ನೀರು ನುಗ್ಗಿದ್ದರಿಂದ ಕಾರಿನ ಮೇಲೇರಿ ಕುಟುಂಬಸ್ಥರು ಸಹಾಯಕ್ಕಾಗಿ ಕೂಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಕಾರಿಗೆ ಹಗ್ಗ ಕಟ್ಟಿ ಸುರಕ್ಷಿತ ಸ್ಥಳಕ್ಕೆ ತಂದಿದ್ದಾರೆ.

ಭಾರೀ ಮಳೆಗೆ ತೀರ್ಥಹಳ್ಳಿಯಲ್ಲಿ ಮಾಲತಿ ಹೊಳೆ ಉಕ್ಕಿ ಹರಿಯುತ್ತಿದೆ. ಇದರಿಂದ ನಾಬಳ ಸೇತುವೆ ಬಂದ್ ಆಗಿದೆ. ಅದೇ ಮಾರ್ಗದಲ್ಲಿ ಹೊನ್ನಾವರ ಮೂಲದ ಕುಟುಂಬವೊಂದು ಶೃಂಗೇರಿಗೆ ಕಾರಿನಲ್ಲಿ ತೆರಳುತ್ತಿತ್ತು. ಈ ವೇಳೆ ಏಕಾಏಕಿ ಕಾರಿಗೆ ನೀರು ತುಂಬಿ, ಸೇತುವೆ ಮೇಲೆ ನಿಂತಿದೆ. ಇದನ್ನು ಗಮನಿಸಿದ ಸ್ಥಳೀಯರಾದ ಪ್ರವೀಣ್, ಮಂಜುನಾಥ್ ಹಾಗೂ ಇನ್ನಿತರರು ಕೂಡಲೇ ಕಾರಿಗೆ ಹಗ್ಗಕಟ್ಟಿ ಎಳೆದು ಸುರಕ್ಷಿತ ಸ್ಥಳಕ್ಕೆ ತಂದಿದ್ದಾರೆ.

ಕಾರಿನಲ್ಲಿದ್ದ ಬಾಲಕನೊಬ್ಬನನ್ನು ಸ್ಥಳೀಯರು ಹೊತ್ತು ತಂದಿದ್ದಾರೆ. ಸ್ಥಳೀಯರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

-------------------------

ಪೋಟೋ: 01ಟಿಟಿಎಚ್‌02

ತೀರ್ಥಹಳ್ಳಿ ಪಟ್ಟಣ ಸಮೀಪ ತುಂಗಾ ತುಂಬಿ ಹರಿಯುತ್ತಿರುವುದು.

--------------------------

ಪೋಟೋ: 01ಟಿಟಿಎಚ್‌03

ಆಗುಂಬೆ ಸಮೀಪದ ಮಾಲತಿ ಹೊಳೆಯಲ್ಲಿ ಸಿಲುಕಿಕೊಂಡಿದ್ದ ಹೊನ್ನಾವರ ಮೂಲದ ಕುಟುಂಬವನ್ನು ಸ್ಥಳೀಯರು ರಕ್ಷಿಸುತ್ತಿರುವುದು.