ಅಂತರ್ಜಲ ಮಟ್ಟ ಕುಸಿದಿದ್ದರಿಂದ ಕುಡಿಯುವ ನೀರಿಗೂ ಪರದಾಟ । ರಣ ಬಿಸಿಲಿಗೆ ನರಳುತ್ತಿರುವ ಪ್ರಾಣ-ಪಕ್ಷಿಗಳುಎಂ. ಪ್ರಹ್ಲಾದ್
ಕನ್ನಡಪ್ರಭ ವಾರ್ತೆ ಕನಕಗಿರಿತೋಟ, ನೀರಾವರಿ ಜಮೀನುಗಳಲ್ಲಿನ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಕುಸಿದು ಹೋಗಿ ರೈತರ ಜಾನುವಾರುಗಳಿಗೂ ಕುಡಿಯಲು ನೀರು ಸಿಗದಂತಾಗಿದ್ದು, ಅಡವಿ ಪ್ರಾಣಿಗಳು ನೀರು ಹಾಗೂ ಆಹಾರಕ್ಕಾಗಿ ಪರಿತಪಿಸುತ್ತಿವೆ.
ಮುಂಗಾರು-ಹಿಂಗಾರು ಹಂಗಾಮಿನ ಮಳೆ ಕೈ ಕೊಟ್ಟಿದ್ದರಿಂದ ಬೇಸಿಗೆ ಮುನ್ನವೇ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿರುವುದನ್ನು ಕಂಡಿದ್ದೇವೆ. ಈಗಂತೂ ಬೇಸಿಗೆ ಆರಂಭವಾಗಿದ್ದು, ಹೆಜ್ಜೆ-ಹೆಜ್ಜೆಗೂ ಮನುಷ್ಯನಿಗೆ ನೀರಿನ ಅಗತ್ಯತೆಯ ಕುರಿತು ಅರಿವಾಗುತ್ತಿದೆ. ಕುಡಿಯುವ ನೀರಿಗೆ ಮನುಷ್ಯನೂ ಸಹ ಬಿಸಿಲ ದಿನಗಳಲ್ಲಿ ಪರಿತಪಿಸುತ್ತಿರುವಾಗ ಅಡವಿಯಲ್ಲಿ ವಾಸಿಸುವ ಪಕ್ಷಿಗಳು, ವನ್ಯಜೀವಿಗಳು ನೀರು, ಆಹಾರ ಅರಸಿ ಪ್ರದೇಶದಿಂದ ಪ್ರದೇಶಕ್ಕೆ ವಲಸೆ ಹೋಗುತ್ತಿವೆ.ತೋಟ, ಹೊಲ, ದೇವಸ್ಥಾನ ಪ್ರದೇಶಗಳನ್ನು ಆಶ್ರಯಿಸಿರುವ ಮಂಗಗಳು ಕೂಡಾ ಪಟ್ಟಣದತ್ತ ಮುಖ ಮಾಡುತ್ತಿದ್ದು, ಕುಡಿಯುವ ನೀರಿನ ಬವಣೆ ತಾಳದೆ ಮನೆಯೊಳಗೆ ನುಗ್ಗಿ ನೀರಿನ ದಾಹ ತೀರಿಸಿಕೊಳ್ಳುತ್ತಿವೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ರಣ ಬಿಸಿಲನ್ನು ಲೆಕ್ಕಿಸದೆ ಅಲೆದಾಡುತ್ತಿವೆ.
ಪಟ್ಟಣದ ಜೂನಿಯರ್ ಕಾಲೇಜಿನ ಹಿಂಭಾಗದ ಹುಣಸೆ ತೋಪು, ಹೇಮರೆಡ್ಡಿ ಮಲ್ಲಮ್ಮ ವೃತ್ತದ ಪರಿಸರದಲ್ಲಿನ ಬಸರಿ ಗಿಡಗಳು ಹಾಗೂ ಹುಣಸೆ ಮರಗಳಲ್ಲಿನ ಹಣ್ಣನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ಮಂಗಗಳಿಗೆ ಈ ವರ್ಷ ಮಳೆಯಾಗದೆ ಇರುವುದರಿಂದ ಗಿಡಗಳಲ್ಲಿ ಹಣ್ಣು ಬೆಳೆದಿಲ್ಲವಾಗಿದ್ದು, ಆಹಾರಕ್ಕಾಗಿ ಪರದಾಡುತ್ತಿವೆ.ಹಸಿವು ನೀಗಿಸಿಕೊಳ್ಳಲು ಕೋತಿಗಳು ಕಣ್ಣೀರು ಸುರಿಸುತ್ತಿದ್ದು, ಬೆಳಗಿನಿಂದ ಸಂಜೆ ಕತ್ತಲಾಗುವವರೆಗೂ ಆಹಾರಕ್ಕಾಗಿ ಪಟ್ಟಣದ ಮನೆ-ಮನೆಗಳಿಗೆ ಹೋಗಿ ನುಗ್ಗಲಾರಂಭಿಸಿವೆ. ಬೀದಿ ನಾಯಿಗಳು, ಪಕ್ಷಿಗಳು ಮನೆಗೆ ಉಪಯೋಗಿಸುವ ಪಾತ್ರೆಗಳಲ್ಲಿ ಸಂಗ್ರಹಿಸಿಟ್ಟದ್ದ ನೀರನ್ನು ಕುಡಿದು ಬಾಯಾರಿಕೆ ಕಳೆದುಕೊಳ್ಳುತ್ತಿವೆ.
ಆಸರೆಯಾದ ಕೆರೆಗಳು:ಕನಕಗಿರಿ ಹೊರವಲಯದಲ್ಲಿನ ಲಕ್ಷ್ಮೀದೇವಿ ಹಾಗೂ ಕೆ. ಕಾಟಾಪೂರ ಕೆರೆಯಲ್ಲಿ ನೀರು ಸಂಗ್ರಹಿಸಿದ್ದು, ಪಶು, ಪಕ್ಷಿಗಳಿಗೆ ಅನುಕೂಲವಾಗಿದೆ. ವಿವಿಧ ಗ್ರಾಮಗಳಿಗೆ ಕುಡಿಯುವುದಕ್ಕಾಗಿ ಇವರೆಡು ಕೆರೆಗಳಿಗೆ ನೀರು ತುಂಬಿಸಲಾಗಿದ್ದು, ಚಿರತೆ, ಕರಡಿ, ನವಿಲು ಹಾಗೂ ನಾನಾ ತಳಿಯ ಪಕ್ಷಿಗಳು ಈ ಪ್ರದೇಶದಲ್ಲಿದ್ದು, ಜೀವ ಉಳಿಸಿಕೊಳ್ಳುತ್ತಿವೆ.
ಮಳೆಯಾಗದ ಪರಿಣಾಮ ಉಷ್ಣಾಂಶದ ಪ್ರಮಾಣ ಹೆಚ್ಚಾಗಿದ್ದು, ಈ ನಡುವೆ ಪ್ರಾಣಿ-ಪಕ್ಷಿಗಳು ರಣ ಬಿಸಿಲಿಗೆ ಬೆಂಡಾಗಿ ಹೋಗಿವೆ.