ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯ ಪ್ರಮುಖ ಬೆಳೆಗಳಲ್ಲೊಂದಾದ ಈರುಳ್ಳಿ ಬೆಳೆಗೆ ವೈಜ್ಞಾನಿಕ ಹಾಗೂ ತಾಂತ್ರಿಕತೆ ಅಳವಡಿಸಿಕೊಂಡಾಗ ಮಾತ್ರ ಹೆಚ್ಚಿನ ಇಳುವರಿ ಬೆಳೆಯಲು ಸಾಧ್ಯ ಎಂದು ತೋಟಗಾರಿಕಾ ವಿಶ್ವವಿದ್ಯಾನಿಲಯದ ಕುಲಪತಿ ಡಾ.ವಿಷ್ಣುವರ್ಧನ ಹೇಳಿದರು.

ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯದ ಈರುಳ್ಳಿ ಬೆಳೆ ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬೆಳೆಯಲಾಗುತ್ತಿರುವ ಬೆಳೆಗಳಲ್ಲಿ ಈರುಳ್ಳಿ ಕೂಡ ಪ್ರಮುಖವಾಗಿದ್ದು, ಈರುಳ್ಳಿ ಬೀಜ ತಳಿಗಳನ್ನು ಬದಲಾಯಿಸಿ ಕೃಷಿ ಮಾಡಿದಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದರು.ರೈತರಿಗೆ ಸಂಶೋಧನೆಗೊಳಗಾದ ಬೀಜ ದೊರಕದೇ ಇರುವುದರಿಂದ ಇಳುವರಿಯಲ್ಲಿ ಕುಂಠಿತವಾಗುವುದು. ಇದನ್ನು ತಡೆಗಟ್ಟಲು ಉತ್ತಮ ಗುಣಮಟ್ಟದ ಹಾಗೂ ಉತ್ತಮ ತಳಿಯ ಬೀಜಗಳನ್ನೇ ಬಳಸಿಕೊಳ್ಳಬೇಕು. ಹೊಲದಲ್ಲಿ ಸಾಕಷ್ಟು ಪೋಷಕಾಂಶಗಳನ್ನು ಹಾಕಿ ಸರಿಯಾಗಿ ನಿರ್ವಹಣೆ ಮಾಡಿದರೂ ಸಹ ನಿರೀಕ್ಷೆ ಮಾಡಿದಷ್ಟು ಬೆಳೆ ಬರಲು ಸಾಧ್ಯವಾಗದಿರುವುದಕ್ಕೆ ಕಳಪೆ ಬೀಜಗಳೆ ಕಾರಣ ಮತ್ತು ಅಂತ ಬೀಜಗಳಿಂದ ಹಲವಾರು ರೋಗಗಳನ್ನು ಕೂಡ ನಾವು ಕಾಣಬಹುದಾಗಿದೆ ಎಂದರು.ಜಿಲ್ಲೆಯಲ್ಲಿ ಅನೇಕ ರೈತರು ಉತ್ತಮ ಗುಣಮಟ್ಟದ ಬೀಜ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸಿದ್ದು, ಆ ಎಲ್ಲ ರೈತರಿಗೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎಂಬುವುದರ ಬಗ್ಗೆ ಮಾಹಿತಿ ಕೊಟ್ಟು ಬೀಜೋತ್ಪಾದನೆ ಮಾಡುವ ರೈತರಿಗೆ ಇನ್ನೂ ಹೆಚ್ಚಿನ ಗುಣಮಟ್ಟದ ಬೀಜ ತಯಾರಿಸಲು ಸಲಹೆ ಸೂಚನೆಗೆ ತೋಟಗಾರಿಕಾ ವಿಶ್ವವಿದ್ಯಾನಿಲಯ ಸದಾ ಸಿದ್ಧವಿದೆ ಎಂದು ತಿಳಿಸಿದರು.ಪ್ರತಿ ವರ್ಷ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಪ್ರತಿಯೊಂದು ಬೆಳೆಗಳ ಪ್ರಾತ್ಯಕ್ಷತೆ ಮಾಡಲಾಗುತ್ತಿದ್ದು, ಅದರಲ್ಲಿ ರೈತರಿಂದಲೂ ನಾವು ಕಲಿಯಬೇಕಾಗಿರುವುದು ಬಹಳ ಇರುವುದು. ಇದರಿಂದ ಮಾದರಿ ಕೃಷಿಯ ಉಪಯೋಗವನ್ನು ನಾವು ಪಡೆದುಕೊಳ್ಳಲು ಮತ್ತು ನಮ್ಮ ತೋಟಗಾರಿಕಾ ವಿಶ್ವವಿದ್ಯಾನಿಲಯದಿಂದ ನೀಡುವ ಸಲಹೆ ಸೂಚನೆ ಪಡೆದು ಉತ್ತಮವಾದ ಹಾಗೂ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ಹಕಾತಿ ಮಾತನಾಡಿ, ಕಳೆದ 3 ವರ್ಷಗಳಿಂದ ಕಳಪೆ ಬೀಜ, ಹವಾಮಾನ ಏರಿಳಿ ಅಥವಾ ದರದಲ್ಲಾಗಲಿ ರೈತರು ಒಂದಿಲ್ಲ ಒಂದು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಯಾವುದೇ ಬೆಳೆ ಬೆಳೆಯಲು ಬೀಜ ಗುಣಮಟ್ಟದ್ದು ಆಗಿರಬೇಕು. ಉತ್ತಮವಾಗಿರಬೇಕು ಮತ್ತು ಸೂಕ್ತ ಸಮಯದಲ್ಲಿ ಅವಶ್ಯ ಇರುವಷ್ಟು ಪೋಷಕಾಂಶಗಳನ್ನು ಕೊಡಬೇಕು. ಕಳೆದ ವರ್ಷ 1 ಲಕ್ಷ ಎಕರೆಗೂ ಅಧಿಕ ಭೂಮಿಯಲ್ಲಿ ಈರುಳ್ಳಿ ಬೆಳೆಯಲಾಗಿತ್ತು. ಆದರೆ, ಅಷ್ಟೊಂದು ಭೂಮಿಗೆ ಸಾಕಾಗುವಷ್ಟು ಬೀಜ. ನಮ್ಮ ಜಿಲ್ಲೆಯಲ್ಲಿ ದೊರಕುವುದಿಲ್ಲ ಎಂದರು. ಈ ಕ್ಷೇತ್ರೋತ್ಸವದಲ್ಲಿ ವಿಜಾಪುರ ಜಿಲ್ಲೆಯ ಇಂಡಿ, ಬಾಗಲಕೋಟ ಜಿಲ್ಲೆಯ ಬೆನ್ನೂರು, ಬೆನಕಟ್ಟಿ, ಹೊಸಕೋಟಿ, ಗಂದಗಲ್ಲ, ಎಳ್ಳಿಗುತ್ತಿ, ಭಗವತಿ, ಬಾವಲತ್ತಿ , ಕಲಾದಗಿ, ಉದಗಟ್ಟಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ತೋ ವಿ ವಿ ವಿಸ್ತರಣಾ ನಿರ್ದೇಶಕ ಡಾ.ವೆಂಕಟೇಶಲು, ಸಂಶೋಧನಾ ನಿರ್ದೇಶಕ ಡಾ.ಫಕ್ರುದ್ದೀನ್, ತೋಟಗಾರಿಕಾ ಮಹಾವಿದ್ಯಾಲಯದ ಡಾ.ಶಾಂತಪ್ಪ ತಿರುಕಣ್ಣವರ್, ವಿಶೇಷ ಅಧಿಕಾರಿ ಡಾ.ರವೀಂದ್ರ ಜಾವಡಗಿ ಸಹಪ್ರಾಧ್ಯಾಪಕ ಪಲ್ಲವಿ ಎಚ್.ಎಂ, ಸಹಾಯಕ ಪ್ರಾಧ್ಯಾಪಕ ಹಾದಿಮನಿ, ಸಹಾಯಕ ಪ್ರಾಧ್ಯಾಪಕ ವಾಸಿಂ ಎಂ.ಎಂ, ಸಹಾಯಕ ಪ್ರಾಧ್ಯಾಪಕ ಡಾ.ರಮೇಶ್ ಸೇರಿದಂತೆ ಇತರರು ಇದ್ದರು.ಇತ್ತೀಚಿನ ವರ್ಷಗಳಲ್ಲಿ ಕೇವಲ ರಾಸಾಯನಿಕ ಗೊಬ್ಬರಗಳನ್ನೇ ಬಳೆಸಿಕೊಂಡು ಮತ್ತು ಸಾವಯವ ಗೊಬ್ಬರಗಳನ್ನು ಬಳಸದೆ ಇರುವುದರಿಂದ ಇಳುವರಿ ಕುಂಠಿತಗೊಳ್ಳುತ್ತದೆ ಮತ್ತು ಭೂಮಿಯೂ ಹಾಳಾಗುತ್ತದೆ. ಕಾರಣ ರೈತರು ರಾಸಾಯನಿಕ ಗೊಬ್ಬರಗಳ ಕಡೆ ಹೆಚ್ಚು ಗಮನ ನೀಡದೆ ಸಾವಯುವ ಕೃಷಿಯತ್ತ ಮುಖ ಮಾಡಬೇಕು.

-ಡಾ.ವಿಷ್ಣುವರ್ಧನ, ತೋಟಗಾರಿಕಾ ವಿಶ್ವವಿದ್ಯಾನಿಲಯದ ಕುಲಪತಿ.

ತೋಟಗಾರಿಕಾ ವಿಶ್ವವಿದ್ಯಾನಿಲಯ ಭೀಮ ಬ್ರಾಂಡಿನ ಬೀಜವನ್ನು ತಯಾರಿಸುತ್ತಿದ್ದು ಮುಂಬರುವ ದಿನಗಳಲ್ಲಿ ಆ ಬೀಜ ತಯಾರಿಕೆ ನಿರ್ವಹಣೆಯನ್ನು ರೈತರ ಜಮೀನಿನಲ್ಲಿ ಹಾಗೂ ಎಲ್ಲ ರೈತರಿಗೂ ಎಟುಕುವ ನಿಟ್ಟಿನಲ್ಲಿ ಆ ಬೀಜಗಳನ್ನು ತಯಾರಿಸಿ ತೋ ವಿ ವಿ ಕುಲಪತಿಗಳು ವಿತರಿಸಬೇಕು.-ರವೀಂದ್ರ ಹಕಾತಿ, ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು.


ಬಿಕೆಟಿ1

ತೋಟಗಾರಿಕಾ ವಿಶ್ವವಿದ್ಯಾನಿಲಯದ ಕುಲಪತಿ ಡಾ.ವಿಷ್ಣುವರ್ಧನ ಅವರು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯದ ಈರುಳ್ಳಿ ಬೆಳೆ ಕ್ಷೇತ್ರೋತ್ಸವ ಉದ್ಘಾಟಿಸಿದರು.