-ಕಾನೂನು ಕ್ರಮ ಕೈಗೊಳ್ಳುವಂತೆ ಅಧ್ಯಕ್ಷ ರಂಗಣ್ಣ ಕಾಟ್ನೇಕ್ ಒತ್ತಾಯ
ಕನ್ನಡಪ್ರಭ ವಾರ್ತೆ ದೇವದುರ್ಗ
ತಾಲೂಕಿನ ಅಂಜಳ ಗ್ರಾಮದ ಸ.ಪ್ರಾ.ಶಾಲೆಯಲ್ಲಿ ಎಸ್‌ಡಿಎಂಸಿಯನ್ನು ಮುಖ್ಯಶಿಕ್ಷಕರು ನಿರ್ಲಕ್ಷಿಸುತ್ತಿದ್ದು, ತಮಗೆ ಮನ ಬಂದಂತೆ ಆಡಳಿತ ನಡೆಸುತ್ತಿದ್ದಾರೆ. ಧ್ವಜಾರೋಹಣಕ್ಕೂ ಆಹ್ವಾನ ನೀಡಿಲ್ಲ ಎಂದು ಎಸ್‌ಡಿಎಂಸಿ ಅಧ್ಯಕ್ಷ ರಂಗಣ್ಣ ಕಾಟ್ನೇಕ್ ದೂರಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅವರ, ಸರಕಾರ ಶಿಕ್ಷಣ ಇಲಾಖೆ ಮೂಲಕ ಶಾಲೆಯ ಎಲ್ಲಾ ತರಹದ ನಿರ್ವಹಣೆ ಕುರಿತು ಎಸ್‌ಡಿಎಂಸಿ ಗಮನಕ್ಕೆ ಕಡ್ಡಾಯ ತರಬೇಕೆಂಬ ನಿಯಮ ಜಾರಿಗೊಳಿಸಿದೆ. ಆದರೆ ಆ.15ರ ಸ್ವಾತಂತ್ರ್ಯ ದಿನಾಚರಣೆದಂದು ಧ್ವಜಾರೋಹಣಕ್ಕೂ ಕೂಡ ಎಸ್‌ಡಿಎಂಸಿ ಅಧ್ಯಕ್ಷರನ್ನು ಆಹ್ವಾನಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಲೆಯಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆ ಇತ್ತು. ಖಾಸಗಿ ವಿದ್ಯುತ್ ಪರಿವರ್ತಕ (ಟಿಸಿ) ಮೂಲಕ ಶಾಲೆಗೆ ವಿದ್ಯುತ್ ಪೂರೈಕೆ ಒದಗಿಸಿ ನೀರು ಸರಬರಾಜನ್ನು ಎಸ್‌ಡಿಎಂಸಿಯೇ ಮಾಡಿದೆ. ಗ್ರಾಮದಿಂದ ಶಾಲೆಗೆ ಸಂಪರ್ಕ ರಸ್ತೆ ಸಮಸ್ಯೆ ಇದ್ದರೂ ರಸ್ತೆ ನಿರ್ಮಾಣಕ್ಕೆ ಪ್ರಯತ್ನ ಮಾಡಲಾಗುತ್ತಿದೆ. ಮುಖ್ಯಶಿಕ್ಷಕರ ನಡೆ ಎಸ್‌ಡಿಎಂಸಿ ಆಡಳಿತ ಮಂಡಳಿಗೆ ಮುಜುಗರ ತಂದಿದೆ. ಶಿಕ್ಷಣ ಇಲಾಖೆ ಮೇಲಧಿಕಾರಿಗಳು ಕೂಡಲೇ ಸರಕಾರ ನಿಯಮಗಳನ್ನು ಉಲ್ಲಂಘಿಸಿರುವ ಮುಖ್ಯಶಿಕ್ಷಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಚಿತ್ರ: ರಂಗಣ್ಣ ಕಾಟ್ನೇಕ್