ಹುಬ್ಬಳ್ಳಿ:
ಹುಬ್ಬಳ್ಳಿ ಕಿಮ್ಸ್ ಶವಾಗಾರದಿಂದ ಅಂಜಲಿ ಮೃತದೇಹವನ್ನು ಅವರ ಕುಟುಂಬದರಿಗೆ ಹಸ್ತಾಂತರಿಸುತ್ತಿದ್ದಂತೆ ಕೊಲೆ ಪ್ರಕರಣ ಖಂಡಿಸಿ ಇತ್ತ, ನಗರದ ಚೆನ್ನಮ್ಮ ವೃತ್ತದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಚೆನ್ನಮ್ಮ ಸರ್ಕಲ್‌ನಲ್ಲಿ ರಸ್ತೆ ತಡೆದು, ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ನಂತರ ಶವ ಹೊತ್ತ ಆ್ಯಂಬುಲೆನ್ಸ್ ಚೆನ್ನಮ್ಮ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಅಲ್ಲಿಯೇ ಶವ ಇಟ್ಟು ಅಂಜಲಿ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.
ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕು. ಇಲ್ಲವೇ ತಮಗೆ ಹಸ್ತಾಂತರಿಸಿ ನಾವೇ ಶಿಕ್ಷೆ ನೀಡುತ್ತೇವೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ನೇಹಾ ಹಿರೇಮಠ ತಂದೆ ನಿರಂಜನಯ್ಯ ಹಿರೇಮಠ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ, ಗೃಹ ಸಚಿವರು ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ವಿವಿಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟು ಹಿಡಿದ ಕುಟುಂಬಸ್ಥರು:ವೀರಾಪುರ ಓಣಿಯ ನಿವಾಸಕ್ಕೆ ಅಂಜಲಿಯ ಮೃತದೇಹ ಕೊಂಡೊಯ್ದ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ, ತಮಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ ನಂತರವೇ ಅಂತ್ಯಕ್ರಿಯೆ ನಡೆಸುವುದಾಗಿ ಕೆಲ ಗಂಟೆಗಳ ಕಾಲ ರಸ್ತೆಯ ಮೇಲೆ ಶವವಿಟ್ಟು ಪ್ರತಿಭಟನೆ ಮುಂದುವರಿಸಿದರು.
ಡಿಸಿಪಿಗಳಾದ ರಾಜೀವ್ ಎಂ. ಮತ್ತು ರವೀಶ್ ಸಿ.ಆರ್. ಸೇರಿದಂತೆ ಎಲ್ಲ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ಕೊಲೆ ಬೆದರಿಕೆ ಹಾಕಿದ್ದ ಆರೋಪಿ?‘ಆರೋಪಿ ವಿಶ್ವನಾಥ ಅಲಿಯಾಸ್ ಗಿರೀಶ್ ಸಾವಂತ ಅಂಜಲಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದನು. ಅಲ್ಲದೇ ತನ್ನ ಜತೆಗೆ ಮೈಸೂರಿಗೆ ಬರಲಿಲ್ಲವೆಂದರೆ ನೇಹಾ ಹಿರೇಮಠ ಮಾದರಿಯಲ್ಲೇ ಕೊಲೆ ಮಾಡುವುದಾಗಿ ಬೆದರಿಕೆ ಸಹ ಹಾಕಿದ್ದನು. ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದಾಗ ಇವೆಲ್ಲ ಮೂಢನಂಬಿಕೆ ಎಂದು ಹೇಳಿ ನಮ್ಮನ್ನು ಸಾಗ ಹಾಕಿದ್ದರು. ಈಗ ಅಂಜಲಿಯ ಸಾವಾಗಿದೆ. ಇದಕ್ಕೆ ಯಾರು ಹೊಣೆ? ಆರೋಪಿಯನ್ನು ಕೂಡಲೇ ಎನ್‌ಕೌಂಟರ್ ಮಾಡಬೇಕು ಎಂದು ಮೃತ ಅಂಜಲಿ ಕುಟುಂಬಸ್ಥರು ಮಾಧ್ಯಮದ ಎದುರು ತಮ್ಮ ಅಳಲು ತೋಡಿಕೊಂಡರು.