ಜೀವಹಾನಿ ತಡೆಗೆ ತುರ್ತು ಸ್ಪಂದನಾ ತಂಡ

KannadaprabhaNewsNetwork |  
Published : May 16, 2024, 12:46 AM IST
ಜಿಲ್ಲಾಧಿಕಾರಿ ಭೇಟಿ | Kannada Prabha

ಸಾರಾಂಶ

ಜಿಲ್ಲಾದ್ಯಂತ ಉತ್ತಮ ಮಳೆಯಾಗಿದೆ. ಮುಂದಿನ ವಾರದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ. ಅಲ್ಲದೇ ಮುಂಗಾರು ಮಳೆಯು ವಾಡಿಕೆಗಿಂತ ಹೆಚ್ಚಾಗಲಿದೆ.

ಹುಬ್ಬಳ್ಳಿ:

ಕಳೆದ ವಾರದಿಂದ ಸುರಿದ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಭೇಟಿ ನೀಡಿ ಪರಿಶೀಲನೆ ನೀಡಿದರು. ಈ ವೇಳೆ ರಾಜಕಾಲುವೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಸಮಸ್ಯೆ ಇತ್ಯರ್ಥಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಮಳೆಯಿಂದಾಗಿ ಜೀವ ಹಾನಿ ಸೇರಿದಂತೆ ಹೆಚ್ಚಿನ ತೊಂದರೆಯಾಗದಂತೆ ನೋಡಿಕೊಳ್ಳಲು ತುರ್ತು ಸ್ಪಂದನಾ ತಂಡ ರಚಿಸಲಾಗುವುದು ಎಂದು ತಿಳಿಸಿದರು.

ಮಳೆಯಿಂದ ಹಾನಿಗೀಡಾದ ಇಲ್ಲಿನ ಮೇದಾರ ಓಣಿ, ತುಳಜಾ ಭವಾನಿ ವೃತ್ತ, ಕಮರಿಪೇಟೆ ಪೊಲೀಸ್ ಠಾಣೆ, ಹಳೆ ಹುಬ್ಬಳ್ಳಿ ಸೇತುವೆ ಹಾಗೂ ಗಬ್ಬೂರು ಸರ್ವೀಸ್ ರೋಡ್ ಕೆಳಹಂತದ ಸೇತುವೆಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ವೀಕ್ಷಿಸಿದರು.

ಈ ವೇಳೆ ಮಾತನಾಡಿದ ಅವರು, ನಗರದಲ್ಲಿರುವ ರಾಜಕಾಲುವೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು, ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು. ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಅಲ್ಫಾವಧಿ ಹಾಗೂ ದೀರ್ಘಾವಧಿ ಪರಿಹಾರ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲಾದ್ಯಂತ ಉತ್ತಮ ಮಳೆಯಾಗಿದೆ. ಮುಂದಿನ ವಾರದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ. ಅಲ್ಲದೇ ಮುಂಗಾರು ಮಳೆಯು ವಾಡಿಕೆಗಿಂತ ಹೆಚ್ಚಾಗಲಿದೆ. ಈಗಾಗಲೇ ಪೂರ್ವ ಮುಂಗಾರು ಮಳೆ ಸಿದ್ಧತಾ ಹಾಗೂ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ನಗರ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾದರೆ ಸಮಸ್ಯೆ ಉಲ್ಬಣವಾಗುತ್ತಿವೆ. ಅವುಗಳನ್ನು ತುರ್ತಾಗಿ ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ರಾಜಕಾಲುವೆ ಸ್ವಚ್ಛತೆಗೆ ಆದ್ಯತೆ ನೀಡಿ:

ನಗರ ಪ್ರದೇಶದಲ್ಲಿರುವ ಚರಂಡಿ, ಒಳ ಚರಂಡಿ ಮತ್ತು ರಾಜಕಾಲುವೆಯನ್ನು ಸ್ವಚ್ಛಗೊಳಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಯಾವುದೇ ರೀತಿಯಲ್ಲಿ ಹೂಳು ತುಂಬಿಕೊಳ್ಳದಂತೆ ಕ್ರಮ ವಹಿಸಬೇಕು. ಕೆಲವೆಡೆ ಮ್ಯಾನ್ ಹೋಲ್‌ ತೆರೆದುಕೊಂಡಿರುವುದು ಗಮನಕ್ಕೆ ಬಂದಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಮ್ಯಾನ್ ಹೋಲ್‌ ಮುಚ್ಚುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು. ಪ್ರತಿವಾರ್ಡ್ ಹಂತದಲ್ಲಿ ಸ್ವಚ್ಛತೆ ಬಗ್ಗೆ ಪ್ರಚಾರ ಮಾಡಬೇಕಾಗಿದೆ ಎಂದರು.

ತುರ್ತು ಸ್ಪಂದನಾ ತಂಡ:

ಮಳೆಯಿಂದ ಯಾವುದೇ ಜೀವಹಾನಿ ಆಗಬಾರದು ಎಂಬುದು ನಮ್ಮ ಉದ್ಧೇಶವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ನಡೆಸಲಾಗುವುದು. ತುರ್ತು ಸ್ಪಂದನಾ ತಂಡ ರಚಿಸಲಾಗುವುದು. ತಂಡವು ಮುಂದಿನ ದಿನಗಳಲ್ಲಿ ಕಾರ್ಯನಿರ್ವಹಿಸಲಿದೆ ಎಂದರು.

ವಿದ್ಯುತ್ ತಂತಿ, ಮರಗಳ ತೆರವು:

ರಸ್ತೆಯ ಬದಿಗಳಲ್ಲಿರುವ ಅಪಾಯಕಾರಿ ಮರ ಹಾಗೂ ಮರದ ಕೊಂಬೆಗಳನ್ನು ಅರಣ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ತೆರವುಗೊಳಿಸಲಾಗುತ್ತದೆ. ಹೆಸ್ಕಾಂ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಬೀಳುವಂತಹ ವಿದ್ಯುತ್ ಕಂಬಗಳನ್ನು ತೆರವು ಮಾಡಲಾಗುವುದು ಎಂದರು.

ವಿವಿಧ ರಸ್ತೆ ಬದಿಯ ಅಂಗಡಿ, ಹೊಟೇಲ್‌ಗಳಲ್ಲಿ ತಯಾರಿಸುವ ಗೋಬಿ ಮಂಚೂರಿ ಹಾಗೂ ಇತರ ಖಾದ್ಯಗಳಿಗೆ ಬಣ್ಣ ಹಾಕದಂತೆ ಅಂಗಡಿಗಳ ಮಾಲೀಕರಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.

ಹುಬ್ಬಳ್ಳಿ ಧಾರವಾಡ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಹುಬ್ಬಳ್ಳಿ ಶಹರ ತಹಸೀಲ್ದಾರ್‌ ಕಲಗೌಡ ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!