ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆಯಲ್ಲಿ ಡೆಂಘೀ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡೆಂಘೀ ಹಾಗೂ ಇತರೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ನಡೆದ ಜಿಲ್ಲಾ ಸರ್ವೇಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೂರ್ವ ಮುಂಗಾರು ಸಂದರ್ಭದಲ್ಲಿ ಸೊಳ್ಳೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಸೊಳ್ಳೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಜೊತೆಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಹೇಳಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸತೀಶ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಜನವರಿಯಿಂದ 42 ಡೆಂಘೀ ಪ್ರಕರಣಗಳು ವರದಿಯಾಗಿದ್ದು, ಡೆಂಘೀ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಜನವರಿಯಿಂದ ನಾಯಿ ಕಡಿತದ 3,144, ಹಾವು ಕಡಿತದ 89 ಮಂದಿ, ಬೇಧಿ (ಡಯೇರಿಯಾ) ಪ್ರಕರಣಗಳು 1,486, ಕಾಲರಾ 2 ಪ್ರಕರಣ, ಮಲೇರಿಯಾ 2 ಪ್ರಕರಣಗಳು ವರದಿಯಾಗಿದ್ದು, ಎಲ್ಲರೂ ಸಕಾಲದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ಮಾಹಿತಿ ನೀಡಿದರು.ಡೆಂಘೀ ಜ್ವರವು ವೈರಸ್‌ನಿಂದ ಉಂಟಾಗುವ ಕಾಯಿಲೆಯಾಗಿದ್ದು, ಈಡಿಸ್ ಈಜಿಫ್ಟಿ ಸೊಳ್ಳೆ ಕಚ್ಚುವಿಕೆಯಿಂದ ಹರಡುತ್ತದೆ. ಈಡಿಸ್ ಸೊಳ್ಳೆಯು ಸ್ವಚ್ಛ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುತ್ತವೆ. ಅವು ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ತೀವ್ರ ಜ್ವರ ಮತ್ತು ತಲೆನೋವು, ಕಣ್ಣುಗಳ ಹಿಂಭಾಗ, ಮಾಂಸ ಖಂಡ/ ಕೀಲುಗಳಲ್ಲಿ ವಿಪರೀತ ನೋವು ಡೆಂಘೀ ಜ್ವರದ ಲಕ್ಷಣವಾಗಿದೆ ಎಂದು ಡಾ.ಸತೀಶ್ ಕುಮಾರ್ ಮಾಹಿತಿ ನೀಡಿದರು.
ತೀವ್ರ ಸ್ಥಿತಿಯ ಹಂತದಲ್ಲಿ ಬಾಯಿ, ಮೂಗು, ವಸಡುಗಳಲ್ಲಿ ರಕ್ತಸ್ರಾವ, ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತು ಕಂಡು ಬರುತ್ತದೆ ಎಂದು ತಿಳಿಸಿದರು.ಆಶಾ ಕಾರ್ಯಕರ್ತರು ಪ್ರತೀ 15 ದಿನಗಳಿಗೊಮ್ಮೆ ತಮ್ಮ ವ್ಯಾಪ್ತಿಯ ಮನೆ ಮನೆಗೆ ಭೇಟಿ ನೀಡಿ ಈಡಿಸ್ ಸೊಳ್ಳೆ ಲಾರ್ವಾ ಸೋರ್ಸ್ ರಿಡಕ್ಷನ್ ಕೈಗೊಳ್ಳುತ್ತಿದ್ದಾರೆ ಎಂದು ವಿವರಿಸಿದರು.
ನಗರ, ಪಟ್ಟಣ ವ್ಯಾಪ್ತಿಯಲ್ಲಿ ಪ್ರತೀ ತಿಂಗಳ ಮೊದಲ ಮತ್ತು ಮೂರನೇ ವಾರ ಆಯಾಯ ತಾಲೂಕುಗಳ ಎಲ್ಲಾ ಆರೋಗ್ಯ ಸಹಾಯಕರನ್ನು ನಿಯೋಜಿಸಿಕೊಂಡು ಮನೆಗಳಲ್ಲಿ ಈಡಿಸ್ ಸೊಳ್ಳೆ ಲಾರ್ವಾ ಸೋರ್ಸ್ ರಿಡಕ್ಷನ್ ಕೈಗೊಳ್ಳುತ್ತಿದ್ದಾರೆ ಎಂದು ಡಾ.ಸತೀಶ್ ಕುಮಾರ್ ವಿವರಿಸಿದರು.ಖಾಸಗಿ ಆಸ್ಪತ್ರೆ, ಲ್ಯಾಬ್ ಗಳಿಂದಲೂ ವರದಿ ಸಂಗ್ರಹಿಸಿ ಜ್ವರ ಪ್ರಕರಣ ಪತ್ತೆ ಮಾಡಲಾಗುತ್ತಿದೆ. ಸೆಂಟಿನೆಲ್ ಪ್ರಯೋಗಾಲಯದಲ್ಲಿ ಎಲೈಜಾ ವಿಧಾನದಲ್ಲಿ ಖಚಿತಪಡಿಸಲಾಗುತ್ತಿದೆ. ರ‍್ಯಾಪಿಡ್ ವಿಧಾನದಲ್ಲಿ ಪಾಸಿಟಿವ್ ಬಂದರೆ ಅದು ಶಂಕಿತ ಡೆಂಘೀ ಮಾತ್ರವಾಗಿದ್ದು, ಆ ಗ್ರಾಮದಲ್ಲಿ ಪುನಃ ಸರ್ವೆ ಮಾಡಿ ಸೆಂಟಿನೆಲ್ ಲ್ಯಾಬ್‌ನಲ್ಲಿ ಖಚಿತಪಡಿಸಿಕೊಳ್ಳಲಾಗುತ್ತಿದೆ. ಶಂಕಿತ/ ಖಚಿತ ಪ್ರಕರಣಗಳು ವರದಿಯಾದ ಎಲ್ಲಾ ಗ್ರಾಮಗಳಲ್ಲಿ ಲಾರ್ವಲ್ ಸರ್ವೆ ಮತ್ತು ಜ್ವರ ಸಮೀಕ್ಷೆ ನಡೆಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ನುಡಿದರು.
ಮಾರ್ಗಸೂಚಿ:ಡೆಂಘೀ ಜ್ವರ ಎಲೈಜಾ ವಿಧಾನದಲ್ಲಿ ಪಾಸಿಟಿವ್ ಎಂದು ವರದಿಯಾದಾಗ ಮಾತ್ರ ಅದು ಖಚಿತ ಡೆಂಘೀ ರ‍್ಯಾಪಿಡ್ ಕಿಟ್ ವಿಧಾನದಲ್ಲಿ ಪಾಸಿಟಿವ್ ಎಂದು ಕಂಡುಬಂದರೆ ಅದು ಶಂಕಿತ ಮಾತ್ರ). ಎಲೈಜಾ ವಿಧಾನದ ಪರೀಕ್ಷೆ ಡಿಎಚ್‌ಒ ಕಚೇರಿಯ ಸೆಂಟಿನೆಲ್ ಲ್ಯಾಬ್‌ನಲ್ಲಿ ಮಾತ್ರ ಇದೆ. ಖಚಿತಪಡಿಸಿಕೊಳ್ಳಲು ಸ್ಯಾಂಪಲ್‌ಗಳನ್ನು ಅಲ್ಲಿಗೇ ಕಳಿಸಬೇಕು. ಪ್ಲೇಟ್‌ಲೆಟ್ ಕಡಿಮೆ ಇದ್ದು ರ‍್ಯಾಪಿಡ್ ಕಾರ್ಡ್ ವಿಧಾನದಲ್ಲಿ ಪಾಸಿಟಿವ್ ಎಂದು ವರದಿಯಾಗಿದ್ದರೂ ಎಲೈಜಾ ವಿಧಾನದಲ್ಲಿ ಪರೀಕ್ಷೆಯಾಗಿ ಪಾಸಿಟಿವ್ ಎಂದು ವರದಿಯಾಗಿಲ್ಲದಿದ್ದರೆ ಅದನ್ನು ಶಂಕಿತ ಡೆಂಘೀ ಎಂದಷ್ಟೇ ನಮೂದಿಸಲಾಗುವುದು ಎಂದರು.ಜಿ.ಪಂ. ಸಿಇಒ ವರ್ಣಿತ್ ನೇಗಿ ಮಾತನಾಡಿ, ಜಿಲ್ಲೆಯ ಎಲ್ಲೆಡೆ ಡೆಂಘೀ ನಿಯಂತ್ರಣಕ್ಕೆ ಕ್ರಮ ವಹಿಸಬೇಕು. ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸುವಂತೆ ನಿರ್ದೇಶನ ನೀಡಿದರು.
ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಸಮಗ್ರ ರೋಗಗಳ ಕಣ್ಗಾವಲು ಘಟಕದ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಬಿ.ಎಲ್.ಶ್ರೀನಿವಾಸ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾ ದೇವಿ, ವಿವಿಧ ಇಲಾಖೆ ಅಧಿಕಾರಿಗಳು ಹಲವು ಮಾಹಿತಿ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.