ಕಾರವಾರ: ಮುಂಬಯಿಯ ಅಟಲ್ ಸೇತು ಬಗ್ಗೆ ಚಿತ್ರನಟಿ ರಶ್ಮಿಕಾ ಮಂದಣ್ಣ ಪ್ರಶಂಸೆಯ ನುಡಿಗಳನ್ನಾಡಿದ್ದಕ್ಕೆ ಕಾಂಗ್ರೆಸ್‌ನ ಅಂಜಲಿ ನಿಂಬಾಳ್ಕರ್ ಕಣ್ಣು ಕೆಂಪಗಾಗಿದ್ದನ್ನು ನೋಡಿದರೆ ಅಂಜಲಿ ನಿಂಬಾಳ್ಕರ್ ಅಭಿವೃದ್ಧಿಯ ವಿರೋಧಿ ಎನ್ನುವುದು ಸಾಬೀತಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ತಿರುಗೇಟು ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಶ್ಮಿಕಾ ಮಂದಣ್ಣ ಭಾರತದ ಅಭಿವೃದ್ಧಿಯನ್ನು ಕೊಂಡಾಡಿದ್ದಾರೆ. ಅಟಲ್ ಸೇತುವಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಅಭಿವೃದ್ಧಿಗೆ ಮತ ನೀಡುವಂತೆ ಕೋರಿದ್ದಾರೆ. ಇದರಲ್ಲಿ ಯಾವ ತಪ್ಪಿದೆ? ಸ್ವಾತಂತ್ರ್ಯಾನಂತರ ದೇಶವನ್ನು ಅಧೋಗತಿಗೆ ತಳ್ಳಿದ ಕಾಂಗ್ರೆಸ್ ಬಗ್ಗೆ ಅಂಜಲಿಗೆ ಮಮಕಾರ ಇದ್ದರೆ ತಪ್ಪಲ್ಲ. ಆದರೆ ಅಭಿವೃದ್ಧಿಯನ್ನು ವಿರೋಧಿಸುವ ಮನಸ್ಥಿತಿ ದೇಶಕ್ಕೆ ತುಂಬಾ ಅಪಾಯಕಾರಿ. ಇಂಥ ಹೊಣೆಗೇಡಿಗಳೇ ದೇಶದ ಪ್ರಗತಿಗೆ ಅಡ್ಡಿಯಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.ಅಂಜಲಿ ನಿಂಬಾಳ್ಕರ್ ನಾಲಿಗೆಯನ್ನು ಹರಿಬಿಡುವುದು ಇದೇ ಮೊದಲಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೂ ಚುನಾವಣೆ ಸಂದರ್ಭದಲ್ಲಿ ಅಪಹಾಸ್ಯ ಮಾಡಿದ್ದರು. ಅವರನ್ನು ಅಣಕಿಸಿದ್ದಾರೆ. ಇದರಿಂದ ಅಂಜಲಿ ಅವರ ವ್ಯಕ್ತಿತ್ವದ ಅನಾವರಣವಾಯಿತೇ ಹೊರತೂ ಮೋದಿ ಅವರ ಯೋಗ್ಯತೆ ಏನೂ ಕಡಿಮೆಯಾಗದು ಎಂದಿದ್ದಾರೆ.
ರಶ್ಮಿಕಾ ಮಂದಣ್ಣ ಇರಲಿ ಯಾರೇ ಇರಲಿ, ಅಭಿವೃದ್ಧಿಪರವಾಗಿ ಇರುವವರನ್ನು ಸಹಿಸಲು ಸಾಧ್ಯವಿಲ್ಲದ ನಿಮ್ಮಿಂದ ಜನತೆ ಏನನ್ನು ನಿರೀಕ್ಷಿಸಬಹುದು? ನೀವು ಶಾಸಕರಾಗಿದ್ದಾಗ ಖಾನಾಪುರ ಜನತೆಗೆ ಕೊಟ್ಟ ಕೊಡುಗೆ ಏನು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ತಾವು ಏನನ್ನೂ ಮಾಡದೆ, ಬೇರೆಯವರು ಮಾಡಿದ ಅಭಿವೃದ್ಧಿಯನ್ನೂ ಸಹಿಸದ, ಅಭಿವೃದ್ಧಿಯ ಬಗ್ಗೆ ಶ್ಲಾಘಿಸಿದ್ದನ್ನೂ ಅರಗಿಸಿಕೊಳ್ಳಲಾಗದ ನಿಮ್ಮ ಬಗ್ಗೆ ಅಯ್ಯೋ ಎನಿಸದೆ ಇರದು. ಅಭಿವೃದ್ಧಿಯ ವಿರೋಧಿಗಳು ರಾಜಕೀಯಕ್ಕೇ ಕಳಂಕ ಇದ್ದ ಹಾಗೆ ಎಂದು ರೂಪಾಲಿ ನಾಯ್ಕ ಕಿಡಿಕಾರಿದ್ದಾರೆ..ಅಂಜಲಿ ನಿಂಬಾಳ್ಕರ್ ಅವರೇ, ಖಾನಾಪುರಕ್ಕೆ ಬಂದರೆ ನೀವು ಶಾಸಕರಾಗಿದ್ದ ಸಂದರ್ಭದಲ್ಲಿ ಮಾಡಿದ ಅಭಿವೃದ್ಧಿ ಏನಿದೆ? ಹೊಗಳುವಂಥದ್ದನ್ನು ಏನು ಮಾಡಿದ್ದೀರಿ? ನೀವು ಏನನ್ನೂ ಮಾಡದೆ ಬೇರೆಯವರು ಅಭಿವೃದ್ಧಿ ಮಾಡಿದ್ದನ್ನೂ ಸಹಿಸದ ನಿಮ್ಮಂಥವರಿಂದಲೇ ಇಷ್ಟು ವರ್ಷಗಳಿಂದ ಈ ದೇಶ ಹಿಂದುಳಿಯುವಂತಾಯಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 10 ವರ್ಷಗಳಲ್ಲಿ ದೇಶಾದ್ಯಂತ ಅಭಿವೃದ್ಧಿಯ ಪರ್ವವನ್ನೇ ಕೈಗೊಂಡಿದೆ. ಇದಕ್ಕಾಗಿಯೇ ಎನ್‌ಡಿಎಯನ್ನು ಜನತೆ ಭಾರಿ ಸಂಖ್ಯೆಯಲ್ಲಿ ಬೆಂಬಲಿಸುತ್ತಿದ್ದಾರೆ. ನಿಮ್ಮಂತಹ ಅಭಿವೃದ್ಧಿ ವಿರೋಧಿಗಳಿಂದಾಗಿಯೇ ಕಾಂಗ್ರೆಸ್ ಈ ದೇಶದಲ್ಲಿ ಯಾವ ಸ್ಥಿತಿಯನ್ನು ತಲುಪಿದೆ ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ ಅಂಜಲಿ ನಿಂಬಾಳ್ಕರ ವಿರುದ್ಧ ಹರಿಹಾಯ್ದಿದ್ದಾರೆ.