ಕೊಪ್ಪಳ:
ಅಂಜನಾದ್ರಿ ಬೆಟ್ಟದಲ್ಲಿ ಮೊದಲನೇ ಹಂತದಲ್ಲಿ ಮಂಜೂರಾಗಿರುವ ಹಾಗೂ ಎರಡನೇ ಹಂತದಲ್ಲಿ ಅನುಮೋದನೆಯಾಗಿರುವ ಕಾಮಗಾರಿ ಅನುಷ್ಠಾನಗೊಳಿಸಲು 93.15 ಎಕರೆ ಭೂಸ್ವಾಧೀನಪಡಿಸಿಕೊಳ್ಳಲು ಮರು ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಹಮ್ಮಿಕೊಂಡಿದ್ದ ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳ ಬಳಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆಟ್ಟದ ಮುಂದೆ ಥೀಮ್ ಆಧಾರಿತ ಮೆಟ್ಟಿಲುಗಳ ನಿರ್ಮಾಣ ಮತ್ತು ಬೆಟ್ಟದ ಹಿಂದುಗಡೆ ಥೀಮ್ ಆಧಾರಿತ ಮೆಟ್ಟಿಲುಗಳ ನಿರ್ಮಾಣ ಕಾಮಗಾರಿ, ಪ್ರದಕ್ಷಣಾ ಪಥ ಹಾಗೂ ರೋಪವೇ ಸೇರಿ ಕಾಮಗಾರಿ ಅನುಷ್ಠಾನಗೊಳಿಸಲು ಅರಣ್ಯ ಪ್ರದೇಶದ ಜಮೀನಿಗೆ ಸಂಬಂಧಿಸಿದಂತೆ ಅವಶ್ಯವಿರುವ 7 ಎಕರೆ ಅರಣ್ಯ ಜಮೀನಿನ ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆಯಲು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.ಆಂಜನೇಯಸ್ವಾಮಿ ದೇವಸ್ಥಾನ ಸಮಗ್ರ ಅಭಿವೃದ್ಧಿಗಾಗಿ ₹ 200 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೊಳ್ಳುತ್ತಿರುವ ಮೊದಲ ಹಾಗೂ 2ನೇ ಹಂತದ ಕಾಮಗಾರಿ ಹಾಗೂ ರೋಪ್ ವೇ ಸೇರಿದಂತೆ ಹೆರಿಟೇಜ್ ಇಂಪ್ಯಾಕ್ಟ್ ಅಸೆಸ್ಮೆಂಟ್ ಸ್ಟಡಿ ಅಂತಿಮ ವರದಿ ತಯಾರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಹಳೆ ಎಸಿ ಕಚೇರಿ ಕಟ್ಟಡದಲ್ಲಿ ವಸ್ತು ಸಂಗ್ರಾಹಾಲಯ ಸ್ಥಾಪಿಸಲು ಹಾಗೂ ಕೊಪ್ಪಳ ಕೋಟೆಯ ಸಮಗ್ರ ಅಭಿವೃದ್ಧಿ ಕುರಿತು ಡಿಪಿಆರ್ ತಯಾರಿಸಬೇಕು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಒಳಪಟ್ಟಿರುವ ಅಶೋಕನ ಶಿಲಾಶಾಸನ (ಗವಿಮಠ ಪರಿಸರ) ಮತ್ತು ಅಶೋಕನ ಪಾಲ್ಕಿಗುಂಡು ಶಿಲಾಶಾಸನ, ಮಳೆಮಲ್ಲೇಶ್ವರ ದೇವಸ್ಥಾನದ ಬೆಟ್ಟದ ಮೇಲಿನ ಪ್ರಾಚೀನದಿನ್ನೆ, ಹಿರೇಬೆಣಕಲ್ ಗ್ರಾಮದ ಮೋರೆರ ಬೆಟ್ಟ ಹಾಗೂ ಇಟಗಿ ಮಹಾದೇವ ದೇವಾಲಯದ ಸ್ಮಾರಕಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾಮಗಾರಿಗೆ ಅಂದಾಜು ಪಟ್ಟಿ ಸಲ್ಲಿಸಬೇಕು. ಕೊಪ್ಪಳದ ಹುಲಿಕೆರೆ ಅಭಿವೃದ್ಧಿಪಡಿಸುವ ವಿಸ್ಕೃತ ಯೋಜನಾ ವರದಿ ಸಿದ್ಧಪಡಿಸಿ ಸಲ್ಲಿಸಬೇಕು ಎಂದರು.ಸ್ವದೇಶ್ ದರ್ಶನ್ 2.0 ಯೋಜನೆಯ ಟ್ರಾವೆಲರ್ ನೂಕ್ ರಾಯಲ್ ಕಾಮಗಾರಿ ಕೈಗೊಳ್ಳಲು ಆನೆಗುಂದಿಯ ಸರ್ವೇ ನಂ. 17 ರಲ್ಲಿ 35 ಗುಂಟೆ ಜಮೀನನ್ನು ತರಬೇತಿ ಕೇಂದ್ರ ಹಾಗೂ ವಸತಿ ಉದ್ದೇಶಕ್ಕಾಗಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹೆಸರಿನಲ್ಲಿ ಕಾಯ್ದಿರಿಸಿದ್ದು ಈ ಜಮೀನನ್ನು ಪ್ರವಾಸೋದ್ಯಮ ಇಲಾಖೆ ಹೆಸರಿಗೆ ಹಸ್ತಾಂತರಿಸಬೇಕು. ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ವ್ಯಾಪ್ತಿಯಲ್ಲಿನ 17 ಹಾಗೂ ಕನಕಗಿರಿ ವ್ಯಾಪ್ತಿಯಲ್ಲಿನ 3 ಸೇರಿ ಒಟ್ಟು 20 ಸ್ಮಾರಕ ಗುರುತಿಸಿದ್ದು ರಾಜ್ಯ ಸಂರಕ್ಷಿತ ಸ್ಮಾರಕಗಳೆಂದು ಘೋಷಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಪಂ ಸಿಇಒ ವರ್ಣಿತ್ ನೇಗಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.