ಸೋಮರಡ್ಡಿ ಅಳವಂಡಿ
ಉಪನೋಂದಣಿ ಇಲಾಖೆಯಲ್ಲಿಯೇ ಬಾಲ್ಯವಿವಾಹ (ಬಾಲಕ ಅಪ್ರಾಪ) ನೋಂದಣಿ ಮಾಡಿಸಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಯುವಕನೇ ಅಪ್ರಾಪ್ತನಾಗಿದ್ದಾನೆ. ಹೀಗಾಗಿ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ನೋಂದಣಿ ಇಲಾಖೆ ಅಧಿಕಾರಿಗಳಿಗೆ ಪತ್ರ ಮುಖೇನ ತಿಳಿಸಿದೆ.
ಆಗಿದ್ದೇನು?:ಗಂಗಾವತಿ ತಾಲೂಕಿನ ಉಪ ನೋಂದಣಿ ಇಲಾಖೆಯಲ್ಲಿ 2024 ಸೆ.17ರಂದು ಯುವಕ-ಯುವತಿ ಕಾನೂನು ಪ್ರಕಾರ ವಿವಾಹವಾಗಿದ್ದಾರೆಂದು ಅಧಿಕಾರಿಗಳೇ ಶರಾ ಬರೆದಿದ್ದಾರೆ. ಆದರೆ, ಮದುವೆಯಾದ ಬಾಲಕನೇ ಅಪ್ರಾಪ್ತನಾಗಿದ್ದಾನೆ. ನಿಯಮಾನುಸಾರ ವಿವಾಹವಾಗಲು ಬಾಲಕನಿಗೆ 21 ವರ್ಷ ಆಗಿರಬೇಕೆಂದು ಕಾನೂನು ಹೇಳುತ್ತದೆ. ಆದರೆ, ಗಂಗಾವತಿ ನಗರದ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಯುವಕನಿಗೆ 20 ವರ್ಷ 6 ತಿಂಗಳು ಆಗಿದೆ. ಬಾಲ್ಯವಿವಾಹ ತಡೆಯಬೇಕಾದ ಅಧಿಕಾರಿಗಳು ಇವರಿಬ್ಬರ ಮದುವೆಗೆ ಕಾನೂನಾತ್ಮಕ ಅನುಮೋದನೆ ನೀಡಿದ್ದಾರೆ.
ನೋಂದಣಿ ಇಲಾಖೆಯಿಂದಲೇ ಬಾಲಕ-ಬಾಲಕಿ ಮದುವೆಗೆ ಶರಾ ಬರೆದಿರುವ ಕುರಿತು ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ಖಚಿತ ಮಾಹಿತಿ ಬಂದಿದೆ. ಇದರ ಆಧಾರದಲ್ಲಿಯೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಘಟನೆಯ ವಿವರಣೆ ನೀಡುವಂತೆ ನೋಂದಣಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದೆ. ಸರ್ಕಾರಿ ಇಲಾಖೆಯಲ್ಲಿಯೇ ಅಧಿಕಾರಿಗಳು ದಾಖಲೆಯನ್ನು ಸರಿಯಾಗಿ ನೋಡದೆ ಅದೇಗೆ ಬಾಲ್ಯವಿವಾಹ ಮಾಡಿಸಿದ್ದಾರೆಂದು ಪ್ರಶ್ನಿಸಿದೆ. ಹೀಗೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳು ವಿರುದ್ಧ ಕ್ರಮವಹಿಸುವಂತೆ ತಾಕೀತು ಮಾಡಿದೆ.
ರಾಜ್ಯ ಮಕ್ಕಳ ರಕ್ಷಣಾ ಆಯೋಗ ಪತ್ರ ಬರೆಯುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಜಿಲ್ಲಾ ನೋಂದಣಾಧಿಕಾರಿಗಳು ಗಂಗಾವತಿ ನೋಂದಣಿ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ ವರದಿ ನೀಡುವಂತೆ ಸೂಚಿಸಿದ್ದಾರೆ.
ಯುವಕ-ಯುವತಿ ಮದುವೆ ಮಾಡಿಸಿರುವ ದಾಖಲೆಗಳನ್ನು ಗಂಗಾವತಿ ಉಪನೋಂದಣಿ ಇಲಾಖೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತಡಕಾಡುತ್ತಿದೆ. ಇದರಿಂದ ನೋಂದಣಿ ಇಲಾಖೆ ಅಧಿಕಾರಿಗಳಿಗೆ ಸಂಕಷ್ಟ ಎದುರಾಗಿದೆ. ಬಾಲ್ಯ ವಿವಾಹಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧವೂ ಪ್ರತ್ಯೇಕ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲು ಮುಂದಾಗಿದೆ.
ಶೇಖರಗೌಡ ರಾಮತ್ನಾಳ ಸದಸ್ಯರು ರಾಜ್ಯ ಮಕ್ಕಳ ರಕ್ಷಣಾ ಆಯೋಗ