ಅಂಜನಾದ್ರಿ ಬೆಟ್ಟ: ಮಧ್ಯಂತರ ಆದೇಶ ಪಾಲನೆಗೆ ಸುಪ್ರಿಂ ಕೋರ್ಟ್ ನಿರ್ದೇಶನ

KannadaprabhaNewsNetwork |  
Published : May 28, 2025, 12:31 AM IST
45465 | Kannada Prabha

ಸಾರಾಂಶ

ಅರ್ಚಕ ವಿದ್ಯಾದಾಸ ಬಾಬಾ, ಆಂಜನೇಯನ ಪೂಜೆಗೆ ನನಗೆ ಅವಕಾಶವಿದ್ದರೂ ವಿಪರೀತ ಕಿರಿಕಿರಿ ಮಾಡಲಾಗುತ್ತಿದೆ. ನಾನು ತಂಗುವ ರೂಮ್‌ಗೆ ವಿದ್ಯುತ್‌ ಸಂಪರ್ಕ ಕಡಿತ ಮಾಡುವುದು ಸೇರಿದಂತೆ ಮೊದಲಾದ ಸಮಸ್ಯೆ ಮಾಡುತ್ತಿದ್ದಾರೆ. 2023 ಫೆ. 14ರಂದು ಪೂಜೆಗೆ ನನಗೆ ಅವಕಾಶ ನೀಡಿದರೂ ಕೊಪ್ಪಳ ಜಿಲ್ಲಾಡಳಿತ ಆದೇಶ ಪಾಲಿಸುತ್ತಿಲ್ಲವೆಂದು ಸುಪ್ರೀಂಕೋರ್ಟ್‌ಗೆ ಹೋಗಿದ್ದಕ್ಕೆ ನನಗೆ ಇದೀಗ ಪ್ರಾಥಮಿಕ ಜಯ ದೊರೆತಿದೆ.

ಕೊಪ್ಪಳ/ಗಂಗಾವತಿ:

ಅಂಜನಾದ್ರಿ ಬೆಟ್ಟದಲ್ಲಿ ಆಂಜನೇಯನ ಪೂಜೆಗೆ ಅರ್ಚಕ ವಿದ್ಯಾದಾಸ ಬಾಬಾ ಅವರಿಗೆ ಅವಕಾಶ ನೀಡಿ ಈಗಾಗಲೇ ನೀಡಿರುವ ಮಧ್ಯಂತ್ಯರ ತೀರ್ಪಿನ ಆದೇಶ ಪಾಲಿಸುವಂತೆ ಸುಪ್ರೀಂಕೋರ್ಟ್ ಮಂಗಳವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಈ ಕುರಿತು ಮಾತನಾಡಿದ ಅರ್ಚಕ ವಿದ್ಯಾದಾಸ ಬಾಬಾ, ಆಂಜನೇಯನ ಪೂಜೆಗೆ ನನಗೆ ಅವಕಾಶವಿದ್ದರೂ ವಿಪರೀತ ಕಿರಿಕಿರಿ ಮಾಡಲಾಗುತ್ತಿದೆ. ನಾನು ತಂಗುವ ರೂಮ್‌ಗೆ ವಿದ್ಯುತ್‌ ಸಂಪರ್ಕ ಕಡಿತ ಮಾಡುವುದು ಸೇರಿದಂತೆ ಮೊದಲಾದ ಸಮಸ್ಯೆ ಮಾಡುತ್ತಿದ್ದಾರೆ. 2023 ಫೆ. 14ರಂದು ಪೂಜೆಗೆ ನನಗೆ ಅವಕಾಶ ನೀಡಿದರೂ ಕೊಪ್ಪಳ ಜಿಲ್ಲಾಡಳಿತ ಆದೇಶ ಪಾಲಿಸುತ್ತಿಲ್ಲವೆಂದು ಸುಪ್ರೀಂಕೋರ್ಟ್‌ಗೆ ಹೋಗಿದ್ದಕ್ಕೆ ನನಗೆ ಇದೀಗ ಪ್ರಾಥಮಿಕ ಜಯ ದೊರೆತಿದೆ. ಆದರೆ, ಆದೇಶ ಪ್ರತಿ ಇನ್ನೂ ನನ್ನ ಕೈ ಸೇರಿಲ್ಲ. ಆದೇಶ ಪ್ರತಿ ಕೈ ಸೇರಿದ ಮೇಲೆ ಇನ್ನಷ್ಟು ಸ್ಪಷ್ಟವಾಗುತ್ತದೆ ಎಂದರು.

ಕೇವಲ ಇದೊಂದೇ ಕೇಸ್ ಅಲ್ಲ, ಇದಲ್ಲದೆಯೂ ಅನೇಕ ಕೇಸ್‌ಗಳನ್ನು ಕೊಪ್ಪಳ ಜಿಲ್ಲಾಡಳಿತ ವಿರುದ್ಧ ಹಾಕಿದ್ದೇನೆ. ಅಂಜನಾದ್ರಿಯಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ, ದೇವರ ಹಣದ ದುರ್ಬಳಕೆ ಬಗ್ಗೆಯೂ ಕೇಸ್ ಹಾಕಿದ್ದು, ಅವುಗಳು ಇನ್ನೂ ಬಾಕಿ ಇವೆ. ಈಗ ಆಗಿರುವ ಆದೇಶದಿಂದ ನನಗೆ ಯಾವ ಸಂತೋಷವೂ ಆಗಿಲ್ಲ. ಎಲ್ಲ ಪ್ರಕರಣಗಳು ಇತ್ಯರ್ಥವಾಗಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಅಂದಾಗಲೇ ನನಗೆ ಖುಷಿಯಾಗುತ್ತದೆ. ಅಲ್ಲಿಯವರೆಗೂ ನಾನು ಹೋರಾಟ ಮುಂದುವರಿಸುತ್ತೇನೆ ಎಂದರು.

ಅಂಜನಾದ್ರಿಯಲ್ಲಿ ಅಭಿವೃದ್ಧಿಪಡಿಸಲು ದಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಸಿದ್ಧರಿದ್ದಾರೆ. ಆದರೂ ಸಹ ಅವಕಾಶ ನೀಡುತ್ತಿಲ್ಲ. ಕಾಮಗಾರಿಗೂ ಮೊದಲೇ ಕಮಿಷನ್ ಕೇಳುತ್ತಾರೆ ಎಂದು ಆರೋಪಿಸಿದ್ದಾರೆ.ಸುಪ್ರೀಂ ಕೋರ್ಟ್‌ ಆದೇಶವಾಗಿದೆಯೆಂದು ಹೇಳಲಾಗುತ್ತದೆಯಾದರೂ ನಮಗಿನ್ನು ಆದೇಶ ಪ್ರತಿ ಲಭ್ಯವಾಗಿಲ್ಲ. ಆದೇಶ ಪ್ರತಿ ಬಂದ ಮೇಲೆ ಪರಿಶೀಲಿಸುತ್ತೇವೆ ಎಂದು ಕೊಪ್ಪಳ ಉಪವಿಭಾಗಧಿಕಾರಿ ಮಹೇಶ ಮಾಲಗಿತ್ತಿ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ