ಬಜೆಟ್‌ನಲ್ಲಿ ಗಂಗಾವತಿಯ ಅಂಜನಾದ್ರಿಗೆ 100 ಕೋಟಿ ರುಪಾಯಿ ಅಭಿವೃದ್ಧಿ ಭಾಗ್ಯ

KannadaprabhaNewsNetwork | Published : Feb 17, 2024 1:15 AM

ಸಾರಾಂಶ

ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಹುಲಿಗಿಯ ಹುಲಿಗೆಮ್ಮದೇವಿ ದೇವಸ್ಥಾನದ ಅಭಿವೃದ್ಧಿಗೆ ಹುಲಿಗೆಮ್ಮದೇವಿ ಅಭಿವೃದ್ಧಿ ಪ್ರಾಧಿಕಾರ ಘೋಷಣೆಯಾಗಿದೆ.

ಕೊಪ್ಪಳ: ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಯ ಅಂಜನಾದ್ರಿಗೆ ₹100 ಕೋಟಿ ಅಭಿವೃದ್ಧಿ ಭಾಗ್ಯ, ಹುಲಿಗೆಮ್ಮ ದೇವಸ್ಥಾನಕ್ಕೆ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ಸೌಭಾಗ್ಯ, ಸಮಾನಾಂತರ ಜಲಾಶಯಕ್ಕೆ ಆದ್ಯತೆ, ಯಲಬುರ್ಗಾ ಕ್ಷೇತ್ರದಲ್ಲಿ 38 ಕೆರೆ ನಿರ್ಮಿಸಲು ₹970 ಕೋಟಿ, ಆರೋಗ್ಯ ಕ್ಷೇತ್ರಕ್ಕೆ ಭರಪೂರ ಅನುದಾನ... ಇವು ಬಜೆಟಿನ ಕೊಡುಗೆಗಳಾಗಿವೆ.

ಹುಲಿಗೆಮ್ಮನಿಗೆ ಪ್ರಾಧಿಕಾರ:

ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಹುಲಿಗಿಯ ಹುಲಿಗೆಮ್ಮದೇವಿ ದೇವಸ್ಥಾನದ ಅಭಿವೃದ್ಧಿಗೆ ಹುಲಿಗೆಮ್ಮದೇವಿ ಅಭಿವೃದ್ಧಿ ಪ್ರಾಧಿಕಾರ ಘೋಷಣೆಯಾಗಿದೆ. ಲಕ್ಷಾಂತರ ಭಕ್ತರು ಆಗಮಿಸುವ ಹುಲಿಗೆಮ್ಮ ದೇವಸ್ಥಾನವನ್ನು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಮಾಡಲು ಆಗುತ್ತಿಲ್ಲ. ಹೀಗಾಗಿ ಪ್ರತ್ಯೇಕ ಪ್ರಾಧಿಕಾರ ಮಾಡಬೇಕು ಎನ್ನುವ ಬೇಡಿಕೆ ಇತ್ತು. ಸದ್ಯ ಅದು ಬಜೆಟ್‌ನಲ್ಲಿ ಈಡೇರಿದೆ. ಇದರಿಂದ ಹುಲಿಗೆಮ್ಮದೇವಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿ, ಅಭಿವೃದ್ಧಿಗೆ ಸಹಕಾರಿ ಆಗಲಿದೆ.

ಅಂಜನಾದ್ರಿಗೆ ₹100 ಕೋಟಿ:

ರಾಜ್ಯ ಬಜೆಟ್‌ನಲ್ಲಿ ಅಂಜನಾದ್ರಿ ಅಭಿವೃದ್ಧಿಗೆ ₹100 ಕೋಟಿ ಭಾಗ್ಯ ಒದಗಿ ಬಂದಿದೆ. ಅಂಜನಾದ್ರಿಯಲ್ಲಿ ಇನ್ನು ಹಲವಾರು ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ನಿತ್ಯ ಸಾವಿರಾರು ಜನರು ಅಂಜನಾದ್ರಿಗೆ ಭೇಟಿ ನೀಡುತ್ತಿದ್ದು, ಪ್ರವಾಸೋದ್ಯಮ ಅಭಿವೃದ್ಧಿಯಿಂದ ಅಂಜನಾದ್ರಿಯಲ್ಲಿ ಅಭಿವೃದ್ಧಿ ಕಾರ್ಯಗಳು ಕೈಗೂಡಲಿವೆ.

ನವಲಿ ಸಮಾನಾಂತರ ಜಲಾಶಯ:

ನವಲಿ ಸಮಾನಾಂತರ ಜಲಾಶಯ ಅನುಷ್ಠಾನ ಸಂಬಂಧ ತೆಲಂಗಾಣ, ಆಂಧ್ರ ಪ್ರದೇಶದ ಜತೆ ಸಮಾಲೋಚನೆ ಪ್ರಕ್ರಿಯೆಯಲ್ಲಿದ್ದು, ಯೋಜನೆ ಚಾಲನೆಗೆ ಆದ್ಯತೆ ದೊರೆಯಲಿದೆ. ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಸಂಗ್ರಹದಿಂದ ಉಂಟಾದ ನೀರು ಸಂಗ್ರಹಣೆ ಸಾಮರ್ಥ್ಯದ ಕೊರತೆ ನಿವಾರಿಸಲು ಜಲಾಶಯ ವ್ಯಾಪ್ತಿಯಲ್ಲಿನ ರೈತರ ಬಹುದಿನದ ಬೇಡಿಕೆಯಾದ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣ ಯೋಜನೆಗೆ ₹15,600 ಕೋಟಿ ಮೊತ್ತದ ಯೋಜನಾ ವರದಿ ಸಿದ್ಧವಾಗಿದೆ. ಯೋಜನೆಯ ಅನುಷ್ಠಾನ ಸಂಬಂಧ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳೊಂದಿಗೆ ಸಮಾಲೋಚನೆ ಪ್ರಕ್ರಿಯೆ ಚಾಲನೆಗೊಳಿಸಿದ್ದು, ಯೋಜನೆ ಕಾರ್ಯಗತಗೊಳಿಸಲು ಆದ್ಯತೆ ನೀಡುವುದಾಗಿ ಬಜೆಟಿನಲ್ಲಿ ಘೋಷಿಸಿದ್ದಾರೆ.

ಆರೋಗ್ಯ ಸೇವೆಗೆ ಆದ್ಯತೆ:

ಕೊಪ್ಪಳದ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗೆ ಅವಶ್ಯವಿರುವ ವೈದ್ಯಕೀಯ ಉಪಕರಣ ಮತ್ತು ಪೀಠೋಪಕರಣಗಳ ಖರೀದಿಗಾಗಿ ₹50 ಕೋಟಿ ಒದಗಿಸಿದ್ದಾರೆ. ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿರುವ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಿ ಪ್ರಾಣ ಉಳಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಆಧುನಿಕ ಕ್ರಿಟಿಕಲ್ ಕೇರ್ ಸ್ಥಾಪನೆ ಘೋಷಣೆಯಾಗಿದೆ.

ಕಲ್ಯಾಣ ಕರ್ನಾಟಕದಲ್ಲಿ ಹ್ಯಾಮೋಪೊಲಿಯಾ, ಥಲಾಸ್ಸೆಮಿಯಾ ರೋಗಿಗಳಿಗೆ ಸೂಕ್ತ ಚಿಕಿತ್ಸಾ ಸೌಲಭ್ಯಗಳ ಕೊರತೆಯಿರುವುದರಿಂದ ಕಲಬುರಗಿ ಮತ್ತು ಐಸಿಟಿಟಿ ಕೇಂದ್ರಗಳ ಬಲವರ್ಧನೆಗೆ ₹7 ಕೋಟಿ ಒದಗಿಸಿದ್ದಾರೆ.ಜಿಲ್ಲಾಸ್ಪತ್ರೆಯಲ್ಲಿ ಸಂಯೋಜಿತ, ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆಯಾಗಲಿದೆ. ಇದರಿಂದ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಪ್ರಯೋಗಾಲಯ ಸೇವೆ ನೀಡಲಾಗುತ್ತದೆ.ಶೈಕ್ಷಣೀಕ ಅಭಿವೃದ್ಧಿಗೆ ಘೋಷಣೆ:ಕೆಕೆಆರ್‌ಡಿಬಿಯಿಂದ ವಿವಿ ಘಟಕ ಕಾಲೇಜನ್ನು ಅವಶ್ಯವಿರುವ ಜಿಲ್ಲಾಕೇಂದ್ರ ಇಲ್ಲವೇ ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸಲು ಘೋಷಿಸಲಾಗಿದೆ. ತಳಕಲ್ ನಲ್ಲಿ ಜಿಟಿಟಿಸಿ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಆದ್ಯತೆ ನೀಡಲಾಗಿದೆ. ಜಿಟಿಟಿಸಿ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕಲಬುರಗಿ, ಕೊಪ್ಪಳದ ತಳಕಲ್ ಮತ್ತು ಮೈಸೂರಿನ ವರುಣಾದಲ್ಲಿ ₹350 ಕೋಟಿ ವೆಚ್ಚದಲ್ಲಿ ಸ್ಥಾಪನೆಗೆ ಆದ್ಯತೆ ನೀಡಲಾಗಿದೆ. ಮೊದಲನೇ ಹಂತದ ಯೋಜನೆಯನ್ನು ಮೂರು ವರ್ಷಗಳ ಅವಧಿಯಲ್ಲಿ ₹120 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.38 ಕೆರೆ ನಿರ್ಮಾಣ ಯೋಜನೆಗೆ ₹970 ಕೋಟಿ:ಯಲಬುರ್ಗಾ ಕ್ಷೇತ್ರದಲ್ಲಿ 2000 ಎಕರೆ ಪ್ರದೇಶದಲ್ಲಿ 38 ಬೃಹತ್ ನೂತನ ಕೆರೆ ನಿರ್ಮಾಣಕ್ಕೆ ಬಜೆಟಿನಲ್ಲಿ ಸಿಎಂ ಸಿದ್ದರಾಮಯ್ಯ ₹970 ಕೋಟಿ ಅನುದಾನ ಘೋಷಿಸಿದ್ದಾರೆ.ಕುಡಿಯುವ ನೀರು, ಅಂತರ್ಜಲ ಅಭಿವೃದ್ಧಿಗಾಗಿ ಕೆರೆ ತುಂಬಿಸುವ ಯೋಜನೆ ಇದಾಗಿದೆ. ಸದ್ಯ ಪ್ರಸಕ್ತ ವರ್ಷ ಈ ಯೋಜನೆ ಅನುಷ್ಠಾನಕ್ಕೆ ಬಜೆಟಿನಲ್ಲಿ ಅನುದಾನ ಸಿಕ್ಕಿದೆ.ಕಳೆದ ವರ್ಷ ಶಾಸಕ ಬಸವರಾಜ ರಾಯರಡ್ಡಿ ಕ್ಷೇತ್ರದಲ್ಲಿ ಕೆರೆ ನಿರ್ಮಿಸುವ ಪ್ರಸ್ತಾವನೆ ಸಲ್ಲಿಸಿದ್ದರು. ಹೊಸ ಕೆರೆಗಳನ್ನು ನಿರ್ಮಿಸುವ ಮೂಲಕ ಯಲಬುರ್ಗಾ ಕ್ಷೇತ್ರದ ಜನತೆಗೆ ಕುಡಿಯುವ ನೀರು ಮತ್ತು ರೈತರ ಹೊಲಗಳಿಗೆ ನೀರಾವರಿ ಕಲ್ಪಿಸಬೇಕು ಎಂಬ ಮನವಿಗೆ ರಾಜ್ಯ ಸರ್ಕಾರ ಭರಪೂರ ಅನುದಾನ ನೀಡಿದೆ.ಬ್ರಿಡ್ಜ್‌ ಕಂ ಬ್ಯಾರೇಜ್ ನಿರ್ಮಾಣ:ಯಲಬುರ್ಗಾ, ಕುಕನೂರು ತಾಲೂಕಿನಲ್ಲಿ ಬ್ರಿಡ್ಜ್‌ ಕಂ ಬ್ಯಾರೇಜ್ ನಿರ್ಮಾಣ, ಕೆರೆ ತುಂಬಿಸುವ ಯೋಜನೆಗೆ ಅನುದಾನ ಘೋಷಣೆಯಾಗಿದೆ. ವಿವಿಧ ಜಿಲ್ಲೆಗಳ ನಾನಾ ತಾಲೂಕಿನಲ್ಲಿ ಹಾಗೂ ಯಲಬುರ್ಗಾ ಕ್ಷೇತ್ರದಲ್ಲಿ ಬ್ರಿಡ್ಜ್‌ ಕಂ ಬ್ಯಾರೇಜ್ ನಿರ್ಮಾಣಕ್ಕೆ ಸುಮಾರು ₹850 ಕೋಟಿ ಅನುದಾನ ಒದಗಿಸಲಾಗಿದೆ.ಎಪಿಎಂಸಿಯಲ್ಲಿ ಕೋಲ್ಡ್ ಸ್ಟೋರೆಜ್:ಯಲಬುರ್ಗಾ ಎಪಿಎಂಸಿಯಲ್ಲಿ ₹10 ಕೋಟಿ ವೆಚ್ಚದಲ್ಲಿ ಕೋಲ್ಡ್ ಸ್ಟೋರೆಜ್ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ.

Share this article