ಅಯೋಧ್ಯೆ ಮಾದರಿಯಲ್ಲಿ ಅಂಜನಾದ್ರಿ ಅಭಿವೃದ್ಧಿ ಮಾಡುತ್ತೇವೆ- ಸಂಸದ ಸಂಗಣ್ಣ ಕರಡಿ

KannadaprabhaNewsNetwork |  
Published : Dec 31, 2023, 01:31 AM IST
30ಕೆಪಿಎಲ್6:ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಾಳಕೇರಿ ಹಾಗೂ ಬೋದೂರು ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಸಂಸದ ಸಂಗಣ್ಣ ಕರಡಿ ಮಾತನಾಡಿದರು.  | Kannada Prabha

ಸಾರಾಂಶ

ಅಯೋಧ್ಯೆಯಲ್ಲಿ ನಮ್ಮ ಸರ್ಕಾರವು ರೈಲ್ವೆ, ವಿಮಾನ ನಿಲ್ದಾಣ, ಹೆದ್ದಾರಿ ನಿರ್ಮಾಣ ಸೇರಿ ಸಾವಿರಾರು ಕೋಟಿ ರುಪಾಯಿ ಅನುದಾನ ಮೀಸಲಿಟ್ಟು ಅಭಿವೃದ್ಧಿ ಮಾಡಲಾಗುತ್ತಿದೆ. ಅದೇ ಮಾದರಿಯಲ್ಲಿ ಅಂಜನಾದ್ರಿ ಸಮಗ್ರ ಅಭಿವೃದ್ಧಿ ಮಾಡಲಾಗುವುದು.

ಕೊಪ್ಪಳ: ರಾಮಜನ್ಮ ಭೂಮಿ ಅಯೋಧ್ಯೆಯ ಸಮಗ್ರ ಅಭಿವೃದ್ಧಿಯಂತೆ, ಕೇಂದ್ರದಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರುತ್ತಿದ್ದಂತೆ ಹನುಮ ಜನ್ಮಭೂಮಿ ಅಂಜನಾದ್ರಿ ಆದ್ಯತೆಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಜಿಲ್ಲೆಯ ಯಲಬುರ್ಗಾ ತಾಲೂಕಿನ ತಾಳಕೇರಿ, ಬೋದೂರು ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕ್ಷೇತ್ರದ ಜನತೆ ಆಶೀರ್ವಾದದಿಂದ ಎರಡು ಬಾರಿ ಸಂಸದನಾಗಿ ಆಯ್ಕೆಯಾಗಿದ್ದೇನೆ. ಬಿಜೆಪಿ ಅವಧಿಯಲ್ಲಿ ಸರ್ಕಾರದಿಂದ ₹120 ಕೋಟಿ, ಕೆಕೆಆರ್‌ಡಿಬಿಯಿಂದ ₹40 ಕೋಟಿ ಬಿಡುಗಡೆ ಮಾಡಿಸಲಾಯಿತು. ಆದರೆ, ಕಾಂಗ್ರೆಸ್ ಸರ್ಕಾರ ಅನುದಾನ ನೀಡದೇ ಮೂಗಿನ ಮೇಲೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಜನರ ಆಶೀರ್ವಾದದಿಂದ ಮತ್ತೊಮ್ಮೆ ಗೆಲುವು ಸಾಧಿಸಿದ ತಕ್ಷಣವೇ ಆದ್ಯತೆಯಾಗಿ ಕೇಂದ್ರದಿಂದ ಸಾವಿರಾರು ಕೋಟಿ ರುಪಾಯಿ ಅನುದಾನ ತಂದು ಅಭಿವೃದ್ಧಿ ಪಡಿಸಲಾಗುವುದು ಎಂದರು.

ಅಯೋಧ್ಯೆಯಲ್ಲಿ ನಮ್ಮ ಸರ್ಕಾರವು ರೈಲ್ವೆ, ವಿಮಾನ ನಿಲ್ದಾಣ, ಹೆದ್ದಾರಿ ನಿರ್ಮಾಣ ಸೇರಿ ಸಾವಿರಾರು ಕೋಟಿ ರುಪಾಯಿ ಅನುದಾನ ಮೀಸಲಿಟ್ಟು ಅಭಿವೃದ್ಧಿ ಮಾಡಲಾಗುತ್ತಿದೆ. ಅದೇ ಮಾದರಿಯಲ್ಲಿ ಅಂಜನಾದ್ರಿ ಸಮಗ್ರ ಅಭಿವೃದ್ಧಿ ಮಾಡಲಾಗುವುದು. ರೋಪ್ ವೇ, ಹೆದ್ದಾರಿ ನಿರ್ಮಾಣ, ಕೇಬಲ್ ಕಾರ್ ಅಳವಡಿಕೆ, ಯಾತ್ರಿ ನಿವಾಸ ಸೇರಿ ಸಾವಿರಾರು ಕೋಟಿ ರುಪಾಯಿ ಅನುದಾನ ತಂದು ಅಭಿವೃದ್ಧಿ ಪಡಿಸುತ್ತೇನೆ ಎಂದು ಭರವಸೆ ನೀಡಿದರು.ಆರು ದಶಕದಿಂದ ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ರೈಲ್ವೆ ಯೋಜನೆಗಳೇ ಅನುಷ್ಟಾನ ಆಗಿರಲಿಲ್ಲ. ಮೋದಿ ಸರ್ಕಾರ ಬಂದ 9 ವರ್ಷದಲ್ಲಿ ಲೋಕಸಭೆ ವ್ಯಾಪ್ತಿಯ 7 ತಾಲೂಕುಗಳಿಗೆ ರೈಲ್ವೆ ಹಳಿ ಹಾಕಲಾಗಿದೆ. ಕೆಲ ತಾಲೂಕುಗಳಿಂದ ಕಾರ್ಯಾಚರಣೆ ಮಾಡಲಾಗುತ್ತಿದೆ. ಇನ್ನು ಕೆಲ ತಾಲೂಕುಗಳಿಗೆ ಎರಡು ತಿಂಗಳಲ್ಲಿ ಕಾರ್ಯಾರಂಭ ಆಗಲಿವೆ ಎಂದರು.ಗಿಣಿಗೇರಾ- ಮೆಹಬೂಬ್ ನಗರ ಸಂಪರ್ಕಿಸುವ ರೈಲ್ವೆ ಯೋಜನೆ ಕಾಂಗ್ರೆಸ್ ಸರ್ಕಾರ ಅನುದಾನ ನೀಡಿರಲಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ಹೊಸ ಯೋಜನೆ ಬದಲಿಗೆ ಹಳೆ ಯೋಜನೆಗಳಿಗೆ ಅನುದಾನ ಇಟ್ಟು ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು. ಯೋಜನೆ ಪ್ರಸ್ತಾಪಿಸುವುದು ಮುಖ್ಯವಲ್ಲ. ಆ ಯೋಜನೆ ಪೂರ್ಣಗೊಳಿಸಬೇಕು. ಈ ಬದ್ಧತೆಯಿಂದ ಯೋಜನೆ ಪೂರ್ಣಗೊಳಿಸುವ ಕೆಲಸ ಮಾಡುತ್ತಿದ್ದೇವೆ. ವಿಶ್ವದಲ್ಲೇ ವೇಗವಾಗಿ ರೈಲ್ವೆ ಕಾಮಗಾರಿ ಅಭಿವೃದ್ಧಿ ಹೊಂದುತ್ತಿರುವ ದೇಶ ನಮ್ಮದಾಗಿದೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ದೂರದೃಷ್ಟಿಯೇ ಕಾರಣ ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ಶಿವಶಂಕರರಾವ್ ದೇಸಾಯಿ, ಬಿಜೆಪಿ ಮುಖಂಡರಾದ ಅರವಿಂದಗೌಡ ಪಾಟೀಲ್, ಅಯ್ಯನಗೌಡ ಕೆಂಚಮ್ಮನವರ್, ಗ್ರಾಪಂ ಅಧ್ಯಕ್ಷೆ ಹನುಮವ್ವ ದೊಡ್ಡಪ್ಪ, ಉಪಾಧ್ಯಕ್ಷೆ ಹನುಮವ್ವ ವಿರುಪಣ್ಣ ಅರಳಹಳ್ಳಿ, ಮುಖಂಡರಾದ ಶರಣಪ್ಪ ಶಂಕ್ರಪ್ಪ ಇದ್ದರು.ಶ್ರೀರಾಮ ಜನ್ಮಭೂಮಿ ಅಯೋಧ್ಯೆ-ಹನುಮ ಜನ್ಮಭೂಮಿ ಅಂಜನಾದ್ರಿಗೆ ರೈಲ್ವೆ ಸಂಪರ್ಕ ಹಾಗೂ ಗಂಗಾವತಿ ರೈಲು ನಿಲ್ದಾಣದಿಂದ ಅಂಜನಾದ್ರಿವರೆಗೆ ಕೇಬಲ್ ಕಾರ್ ನಿರ್ಮಿಸಲಾಗುವುದು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣವೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ