ಬಾಗೂರು: ಹೋಬಳಿಯ ಕಾಮನಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಮ ಪೂಜ್ಯ ಡಾ. ವೀರೇಂದ್ರ ಹೆಗಡೆಯವರು 1.50 ಲಕ್ಷ ರು. ಅನುದಾನವನ್ನು ನೀಡಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ತಿಳಿಸಿದರು. ಸಹಾಯಧನದ ಡಿಡಿಯನ್ನು ದೇವಾಲಯ ಸಮಿತಿ ಸದಸ್ಯರಿಗೆ ಹಸ್ತಾಂತರಿಸಿ ಅವರು ಮಾತನಾಡಿ, ಪರಮಪೂಜ್ಯ ಡಾ. ವೀರೇಂದ್ರ ಹೆಗಡೆಯವರು ಸಮಾಜಮುಖಿ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದ್ದು, ಡೈರಿ ಕಟ್ಟಡ, ಶಾಲೆಗಳಲ್ಲಿ ಶೌಚಾಲಯ, ಆಟದ ಮೈದಾನ ನಿರ್ಮಾಣ, ದೇವಾಲಯಗಳ ಜೀರ್ಣೋದ್ಧಾರ ಸೇರಿದಂತೆ ಅನೇಕ ಜನಸ್ನೇಹಿ ಕೆಲಸಗಳಿಗೆ ಹೆಚ್ಚಿನ ಸಹಾಯ, ಸಹಕಾರ ನೀಡುತ್ತಾ ಬಂದಿದ್ದಾರೆ. ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಜೀರ್ಣೋದ್ಧಾರಕ್ಕೆ ಅನುದಾನ ನೀಡುವಂತೆ ಪೂಜ್ಯರಲ್ಲಿ ವಿನಂತಿಸಿದ ಹಿನ್ನೆಲೆಯಲ್ಲಿ ಸುಮಾರು 1.50 ಲಕ್ಷ ರು. ಹಣವನ್ನು ನೀಡಿದ್ದಾರೆ ಎಂದರು. ಶ್ರವಣ ಬೆಳಗೊಳ ಯೋಜನಾಧಿಕಾರಿ ಸದಾಶಿವ್ ಕುಲಾಲ್, ದೇವಾಲಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಧರ್ಮೇಗೌಡ, ಗೌರವಾಧ್ಯಕ್ಷ ಶಿವಲಿಂಗೇಗೌಡ, ಗುಡಿಗೌಡ್ರು ಶಂಭೇಗೌಡ್ರು, ಬಾಗೂರು ವಲಯ ಮೇಲ್ವಿಚಾರಕ ಹನುಮಯ್ಯ ಕೆ., ಸೇವಾ ಪ್ರತಿನಿಧಿಗಳಾದ ನಂಜುಂಡಿ, ಶುಭ, ಗ್ರಾಮದ ಸ್ವ ಸಹಾಯ ಸಂಘಗಳ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.