ಮುಂಡರಗಿ: ಅಯೋಧ್ಯೆಯಲ್ಲಿ ಜ. 22ರಂದು ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ರಾಮ ಮಂದಿರ ಉದ್ಘಾಟನೆ ಅಂಗವಾಗಿ ರಾಷ್ಟ್ರವ್ಯಾಪಿ ದೇಗುಲ ಸ್ವಚ್ಛತಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಪಟ್ಟಣದ ಹೆಸರೂರು ರಸ್ತೆ ಆಶ್ರಯ ಕಾಲನಿಯ ಆಂಜನೇಯ ದೇವಸ್ಥಾನ ಹಾಗೂ ದೇವಸ್ಥಾನದ ಸುತ್ತಮುತ್ತ ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಹಾವೇರಿ ಲೋಕಸಭಾ ಮತಕ್ಷೇತ್ರದ ಸೇವಾಕಾಂಕ್ಷಿ ಕರಬಸಪ್ಪ ಹಂಚಿನಾಳ ನೇತೃತ್ವದಲ್ಲಿ ಸ್ವಚ್ಛಗೊಳಿಸಲಾಯಿತು. ಕರಬಸಪ್ಪ ಹಂಚಿನಾಳ ಹಾಗೂ ಎಲ್ಲ ಕಾರ್ಯಕರ್ತರು ದೇವಸ್ಥಾನದ ಸುತ್ತಮುತ್ತಲಿನ ಎಲ್ಲ ಕಸವನ್ನು ತೆಗೆದು ಸ್ವಚ್ಛಗೊಳಿಸಿ, ಅಲ್ಲಿನ ಗಿಡಗಳಿಗೆ ನೀರು ನಿಲ್ಲುವಂತೆ ವ್ಯವಸ್ಥೆ ಮಾಡಿ ನಂತರ ಶ್ರೀ ಆಂಜನೇಯ ದೇವಸ್ಥಾನದ ಕಸಗುಡಿಸಿ, ನೀರಿನಿಂದ ತೊಳೆದು ಸ್ವಚ್ಛಗೊಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಕರಬಸಪ್ಪ ಹಂಚಿನಾಳ, ನಾವು ಇದೀಗ ಇಲ್ಲಿನ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿದ್ದು, ನಾಳೆಯಿಂದ ಪಟ್ಟಣದ ವಿವಿದೆಡೆಗಳಲ್ಲಿ ನಮ್ಮ ಪಕ್ಷದ ಪ್ರಮುಖರು, ಕಾರ್ಯಕರ್ತರು ಈ ಸ್ವಚ್ಛತಾಕಾರ್ಯವನ್ನು ಜ. 21ರ ವರೆಗೂ ನೆರವೇರಿಸಲಿದ್ದಾರೆ. ಜ. 22ರಂದು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಎಲ್ಲರೂ ಮನೆಗಳಲ್ಲಿ ರಾಮಜ್ಯೋತಿ ಬೆಳಗುವ ಮೂಲಕ ಶ್ರೀ ರಾಮನನ್ನು ಸ್ವಾಗತಿಸಿಕೊಳ್ಳಬೇಕು ಎಂದರು.ದೇವಪ್ಪ ಇಟಗಿ ಮಾತನಾಡಿ, ರಾಮಲಲ್ಲಾ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಸೇವಾ ಕಾರ್ಯ ಮಾಡುವ ಮೂಲಕ ಶ್ರೀ ರಾಮನಿಗೆ ನಮ್ಮ ಕೈಲಾದ ಸೇವೆ ಸಲ್ಲಿಸೋಣ ಎಂದರು. ಪುರಸಭೆ ಸದಸ್ಯ ನಾಗೇಶ ಹುಬ್ಬಳ್ಳಿ, ಪವನ್ ಮೇಟಿ, ಕಾರ್ಯಕರ್ತರಾದ ಎಸ್.ವಿ. ಪಾಟೀಲ, ರಜನೀಕಾಂತ ದೇಸಾಯಿ, ಪರಶುರಾಮ ಕರಡಿಕೊಳ್ಳ, ಶ್ರೀನಿವಾಸ ಕಟ್ಟೀಮನಿ, ಶಂಭುಲಿಂಗನಗೌಡ ಹಕ್ಕಂಡಿ, ಸುಭಾಸ ಗುಡಿಮನಿ, ಶಿದ್ದಲಿಂಗಪ್ಪ ದೇಸಾಯಿ, ಸೋಮಶೇಖರ ಹಕ್ಕಂಡಿ, ಸೋಮಣ್ಣ ಹಂಚಿನಾಳ, ಶಿವಾನಂದ ಕಮತರ, ಬಸಣ್ಣ ಬಣಗಾರ, ಮಹೇಶ ಜಂತ್ರಿ, ಜಗದೀಶ ಹಕ್ಕಂಡಿ, ವೀರೇಶ ಸಜ್ಜನರ, ಕೈಲಾಸ ಹಿರೇಮಠ, ಮೋಹನ್ ದೇಸಾಯಿ, ಕರಿಯಪ್ಪ ಸೀಮಣ್ಣವರ, ಈರಣ್ಣ ಕುಕನೂರು, ಕಾಶೀಂಸಾಬ್ ಕಲ್ಮಣಿ, ಸಂತೋಷ ಹಂಚಿನಾಳ ಉಪಸ್ಥಿತರಿದ್ದರು.