ದೊಡ್ಡಬಳ್ಳಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ, ಏಕವಚನ ಪ್ರಯೋಗ ಮತ್ತು ಅವಹೇಳನಕಾರಿ ಹೇಳಿಕೆ ನೀಡಿರುವ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆ ಖಂಡಿಸಿ, ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ಸಂಸದ ಅನಂತ ಕುಮಾರ್ ಹೆಗಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಏಕವಚನ ಬಳಸಿ ಗೊಂದಲ ಸೃಷ್ಟಿಸಲು ಯತ್ನಿಸಿದ್ದಾರೆ. ಕೋಮು ಗಲಭೆ ಸೃಷ್ಟಿಸಿ ಬೆಂಕಿ ಹಚ್ಚುವ ಪ್ರಯತ್ನ ನಡೆದಿದೆ. ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆಯನ್ನು ಸಮರ್ಥಿಸುತ್ತಿರುವ ಬಿಜೆಪಿಯವರ ಸಂಸ್ಕೃತಿ ಏನೆಂಬುದನ್ನು ತೋರಿಸುತ್ತದೆ ಎಂದು ಆಕ್ಷೇಪಿಸಿದರು.
4 ವರ್ಷಗಳಿಂದ ಇಲ್ಲದವರು ಚುನಾವಣೆ ಸಮೀಪ ಬರುತ್ತಿದ್ದಂತೆ ಈಗ ಮುಖ್ಯಮಂತ್ರಿಗಳ ವಿರುದ್ಧ ಏಕವಚನದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ರಾಮಮಂದಿರ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿಯವರು, ಇದಕ್ಕೆ ಪ್ರಚೋದನೆ ನೀಡುವ ಹೆಗಡೆ ಸಿದ್ದರಾಮಯ್ಯ ವಿರುದ್ಧ ಏಕವಚನ ಪ್ರಯೋಗ ಮಾಡಿರುವುದು ಅಕ್ಷಮ್ಯ. ಕೋಮು ಗಲಭೆಗೆ ಪ್ರಚೋದಿಸುವ ಇಂತಹ ಹೇಳಿಕೆ ನೀಡಿರುವ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ ಮಾತನಾಡಿ, ಪ್ರಬುದ್ಧ ಮನೋಸ್ಥಿತಿಯ ರಾಜಕಾರಣಿ ಎಂದೇ ಗುರುತಿಸಿಕೊಳ್ಳುವ ಸಿದ್ದರಾಮಯ್ಯ ಅವರು ನಾಡಿನ ಸಾಕ್ಷಿ ಪ್ರಜ್ಞೆಯ ಸಂಕೇತ. ಅಂತಹವರ ಬಗ್ಗೆ ಮಾತನಾಡುವಾಗ ಸೂಕ್ಷ್ಮತೆಯ ಅರಿವು ಇರಬೇಕು. ಬಹುವರ್ಗಗಳ ಪ್ರತಿನಿಧಿಯನ್ನು ಏಕವಚನದಲ್ಲಿ ನಿಂದಿಸಿರುವ ಹೆಗಡೆ ನಡೆ ಅಕ್ಷಮ್ಯ ಎಂದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಸದಸ್ಯ ಬಿ.ಜಿ.ಹೇಮಂತರಾಜು, ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಬೈರೇಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ.ಜಗನಾಥ್, ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಿ ವೆಂಕಟೇಶ್, ನಗರಸಭೆ ಸದಸ್ಯರಾದ ಡಿ.ಎಂ.ಆನಂದ್, ನಾಗರಾಜ್, ನಾಗವೇಣಿ, ಕಾಂಗ್ರೆಸ್ ಎಸ್ಸಿ ಘಟಕದ ನಗರ ಅಧ್ಯಕ್ಷ ಮುನಿರಾಜು, ನಗರ ಕಾರ್ಯದರ್ಶಿ ಆಂಜಿನಮೂರ್ತಿ, ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ ಬಷೀರ್. ಎಸ್.ಟಿ ನಗರ ಅಧ್ಯಕ್ಷ ಭೀಮಣ್ಣ, ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಕಾಂತರಾಜು, ಮುಖಂಡರಾದ ಕೆ.ಎಂ.ಕೃಷ್ಣಮೂರ್ತಿ, ಜನಾರ್ದನ್, ರಾಜೇಶ್ ಜವಾಜಿ, ಜಗದೀಶ ರೆಡ್ಡಿ ಎಂ ಮುನಿರಾಜು, ಮಾರಪ್ಪ ವಿನೋದ್, ರಾಮಕೃಷ್ಣ ಮಡಿವಾಳ ಮಮತ ಕವಿತ ಗೋಪಾಲಕೃಷ್ಣ ಮತ್ತಿತರರು ಭಾಗವಹಿಸಿದ್ದರು.
18ಕೆಡಿಬಿಪಿ4-ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಸಂಸದ ಅನಂತ್‌ಕುಮಾರ್ ಹೆಗಡೆ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.