ಅಂಜುಮನ್‌ ಸಂಸ್ಥೆ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ

KannadaprabhaNewsNetwork | Published : Apr 14, 2025 1:19 AM

ಸಾರಾಂಶ

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಬಿಜೆಪಿ ಅವಧಿಯಲ್ಲಿ ಸಮಾಜಕ್ಕೆ ಯಾವ ಕಾರ್ಯಗಳಾಗಿಲ್ಲ

ಧಾರವಾಡ: ಮುಸ್ಲಿಂ ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ ಅಂಜುಮನ್ ಇಸ್ಲಾಂ ಸಂಸ್ಥೆಯಿಂದ ಇನ್ನೂ ಉತ್ತಮ ಕಾರ್ಯಗಳು ನಡೆಯಬೇಕು. ಅದಕ್ಕಾಗಿ ಬೇಕಾಗುವ ಅನುದಾನವನ್ನು ಸರ್ಕಾರದಿಂದ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ವಕ್ಫ್‌ ಸಚಿವ ಜಮೀರ ಅಹಮದ್‌ ಖಾನ್‌ ಹೇಳಿದರು.

ಇಲ್ಲಿಯ ಅಂಜುಮನ್‌ ಸಂಸ್ಥೆ ಆವರಣದಲ್ಲಿ ಪಿಯು ಕಾಲೇಜಿನ ನೂತನ ಕಟ್ಟಡ ಸ್ಥಾಪನೆಗೆ ಅಡಿಗಲ್ಲು ಹಾಗೂ ಸಂಸ್ಥೆಯ ಮಹಾದ್ವಾರವನ್ನು ಭಾನುವಾರ ಸಂಜೆ ಉದ್ಘಾಟಿಸಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಬಿಜೆಪಿ ಅವಧಿಯಲ್ಲಿ ಸಮಾಜಕ್ಕೆ ಯಾವ ಕಾರ್ಯಗಳಾಗಿಲ್ಲ. ಕಾಂಗ್ರೆಸ್ ಅಲ್ಪಸಂಖ್ಯಾತರ ಪರವಾಗಿ ಬಹಳಷ್ಟು ಕೆಲಸ ಮಾಡುತ್ತಿದೆ. ಅಲ್ಪಸಂಖ್ಯಾತರ ಇಲಾಖೆಯಿಂದ ಸಿಗುವ ಅನುದಾನ ಸದ್ಬಳಕೆ ಮಾಡಿಕೊಳ್ಳಲು ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಅವರಿಗೆ ಸೂಚನೆ ನೀಡಿದರು.

ನಾನು ಸಚಿವನಾದ ಮೇಲೆ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಟಿ ಕೋಟಿ ಅನುದಾನ ಒದಗಿಸಿದ್ದಾರೆ. ವಿದ್ಯಾರ್ಥಿಗಳ ಕಲ್ಯಾಣಕ್ಕೆ, ಕಾರ್ಮಿಕರ ಕಲ್ಯಾಣಕ್ಕೆ ಬಹಳಷ್ಟು ಅನುದಾನ ಒದಗಿಸಿದ್ದಾರೆ. ಉತ್ತಮ ಶಿಕ್ಷಣ ನೀಡಲು ಪ್ರಯತ್ನ ಮಾಡಿದ್ದೇವೆ ಎಂದರು.

ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಇಲ್ಲದೇ ಇದ್ದರೆ, ನಾನು ಸಚಿವ ಆಗುತ್ತಿರಲಿಲ್ಲ, ಮುಸಲ್ಮಾನರು ಭಾರತದಲ್ಲಿ ಗೌರವದಿಂದ ಇರಲು ಆಗುತ್ತಿರಲಿಲ್ಲ ಎಂದರು.

ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹಮ್ಮದ, ಶಾಸಕ ಅಬ್ಬಯ್ಯ ಪ್ರಸಾದ, ಹೆಸ್ಕಾಂ ಅಧ್ಯಕ್ಷ ಅಜಮ್‌ಪೀರ್‌ ಖಾದ್ರಿ, ಅಂಜುಮನ್‌ ಇಸ್ಲಾಂ ಅಧ್ಯಕ್ಷ ಇಸ್ಮಾಯಿಲ್‌ ತಮಟಗಾರ, ಮಾಜಿ ಸಂಸದ ಐ.ಜಿ. ಸನದಿ, ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ, ಹುಡಾ ಅಧ್ಯಕ್ಷ ಶಾಕೀರ ಸನದಿ ಸೇರಿದಂತೆ ಸ್ಥಳೀಯ ಮುಖಂಡರು ಇದ್ದರು.

ತಮಟಗಾರ ಎಮ್ಮೆಲ್ಸಿಯಾಗಲಿ: ಇಸ್ಮಾಯಿಲ್ ತಮಾಟಗಾರ ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಲು ಇದೇ ಸಮಾರಂಭದ ವೇದಿಕೆಯಲ್ಲಿ ತಮಾಟಗಾರ ಅಭಿಮಾನಿಗಳು ಸಚಿವ ಜಮೀರ ಅಹಮದ್‌ ಖಾನ್‌ ಎದುರು ಬೇಡಿಕೆ ಇಟ್ಟ ಪ್ರಸಂಗ ನಡೆಯಿತು. ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಅವರನ್ನು ಒಂದು ಬಾರಿಯಾದರೂ ಎಂಎಲ್‌ಸಿ ಮಾಡಿ ಎಂದು ಘೋಷಣೆಗಳನ್ನು ಕೂಗಲಾಯಿತು. ಆಗ, ತಮಟಗಾರ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ನಾನು ಹಾಗೂ ಸಲೀಂ ಅಹ್ಮದ್ ಇಬ್ಬರೂ ಅವರನ್ನು ಎಂಎಲ್‌ಸಿ ಮಾಡಲು ತೀವ್ರ ಪ್ರಯತ್ನ ಪಟ್ಟಿದ್ದೇವೆ. ಆದರೆ, ಟಿಕೆಟ್ ಕೊಡುವವರು ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ. ಎಲ್ಲದಕ್ಕೂ ಅಲ್ಲಾಹನ ಆಶೀರ್ವಾದ ಬೇಕು. ನಾವು ಎಷ್ಟೇ ಪ್ರಯತ್ನ ಪಟ್ಟರೂ ಟಿಕೆಟ್ ಕೊಡುವವರು, ಎಂಎಲ್‌ಸಿ ಮಾಡುವವರು ಮೇಲೆ ಕುಳತಿದ್ದಾರೆ. ನಿಮ್ಮಿಂದಲೂ ಅವರನ್ನು ಎಂಎಲ್‌ಸಿ ಮಾಡುವ ಧೈರ್ಯ ಇದೆ ಎಂದು ಜಮೀರ್‌ ಹೇಳಿದರು.

Share this article