ಸಂಭ್ರಮದ ಅಂಕಲಗಿ ಅಡವಿ ಸಿದ್ಧೇಶ್ವರ ರಥೋತ್ಸವ

KannadaprabhaNewsNetwork | Published : Mar 3, 2025 1:46 AM

ಸಾರಾಂಶ

. ಮಠದಿಂದ ಆರಂಭವಾದ ರಥೋತ್ಸವ ಗ್ರಾಮದ ರಥಬೀದಿಯಲ್ಲಿ ಸಂಚರಿಸಿ ಮಠಕ್ಕೆ ಮರಳಿ ಬಂದು ಸಂಪನ್ನಗೊಂಡಿತು. ತರಹೇವಾರಿ ಪುಷ್ಪ ಮಾಲೆಗಳಿಂದ ಕಂಗೊಳಿಸಿದ ತೇರು ನೋಡುಗರ ಕಣ್ಮನ ಸೆಳೆಯಿತು.

ಕಲಘಟಗಿ: ಹರಹರ ಮಹಾದೇವ! ಅಂಕಲಗಿ ಅಡವಿ ಸಿದ್ಧೇಶ್ವರ ಮಹಾರಾಜ ಕೀ ಜೈ! ಜಯಘೋಷಗಳ ಮಧ್ಯೆ ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮದ ಅಂಕಲಗಿ ಅಡವಿ ಸಿದ್ದೇಶ್ವರ ಜಾತ್ರೆ ವಿಜೃಂಭಣೆಯಿಂದ ನೆರವೇರಿತು.

ಗ್ರಾಮ ಸೇರಿದಂತೆ ಬೇರೆ ಬೇರೆ ಪ್ರದೇಶದಿಂದ ಆಗಮಿಸಿದ್ದ ಭಕ್ತರು ತೇರಿಗೆ ಉತ್ತತ್ತಿ, ಬಾಳೆಹಣ್ಣು ಎಸೆದು ಪುನೀತರಾದರು. ಮಠದಿಂದ ಆರಂಭವಾದ ರಥೋತ್ಸವ ಗ್ರಾಮದ ರಥಬೀದಿಯಲ್ಲಿ ಸಂಚರಿಸಿ ಮಠಕ್ಕೆ ಮರಳಿ ಬಂದು ಸಂಪನ್ನಗೊಂಡಿತು. ತರಹೇವಾರಿ ಪುಷ್ಪ ಮಾಲೆಗಳಿಂದ ಕಂಗೊಳಿಸಿದ ತೇರು ನೋಡುಗರ ಕಣ್ಮನ ಸೆಳೆಯಿತು.

ಬೆಳಗ್ಗೆಯಿಂದಲೆ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ನಡೆದವು. ಭಕ್ತರು ವಿಶೇಷಪೂಜೆ ಸಲ್ಲಿಸಿ ಭಕ್ತಿ ಮೆರದರು. ಕರ್ತೃ ಗದ್ದುಗೆಗೆ ಮಾಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಅಲಂಕಾರ ಮಹಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ನೆರವೇರಿದವು. ಗ್ರಾಮದ ಐದು ಮಠಗಳ ಪೂಜ್ಯರು ಪೂಜಾ ವಿಧಾನಗಳನ್ನು‌ ನೆರವೇರಿಸಿದರು.

ಬೊಮ್ಮನಹಳ್ಳಿ ವಿರಕ್ತಮಠದ ಶಿವಯೋಗೇಶ್ವರ ಸ್ವಾಮೀಜಿ, ಕುಮಾರಪಟ್ಟಣಂ ಪುಣ್ಯಕೋಟಿ ಮಠದ ಜಗದೀಶ್ವರ ಸ್ವಾಮೀಜಿ, ಹಾಸನ‌ ಜಿಲ್ಲೆ ಚೆಂಗಡಿಹಳ್ಳಿ ವಿರಕ್ತಮಠದ ಬಸವಮಹಾಂತ ಸ್ವಾಮೀಜಿ, ಅರಳಿಕಟ್ಟಿ ತೊಂಟದಾರ್ಯ ವಿರಕ್ತಮಠದ ಶಿವಮೂರ್ತಿ ಸ್ವಾಮೀಜಿ, ಅಡವಿ ಸಿದ್ಧೇಶ್ವರ ಮಠದ ಉತ್ತರಾಧಿಕಾರಿ ಇಂದುಧರ ದೇವರು, ಬಸವರಾಜ ದೇವರು, ಅನ್ನದಾನೇಶ್ವರ ದೇವರು ಸಾನ್ನಿಧ್ಯ ವಹಿಸಿದ್ದರು.

ಗ್ರಾಮದ ವೆಂಕಟೇಶ್ವರ, ಗ್ರಾಮದೇವಿ, ಅಂಕಲಗಿ ಅಡವಿ ಸಿದ್ದೇಶ್ವರ, ಗುರುಬಸವೇಶ್ವರ ಯುವಕ ,

ಶ್ರೀ ಸಿದ್ಧಾರೂಢ ಸಂಘದ ಯುವಕರ ಡೊಳ್ಳು, ಭಜನೆ, ಜಾಂಜ್, ಕರಡಿ ಮಜಲು ಮಹಾ ರಥೋತ್ಸವದ ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಹುಲಿ ವೇಷಧಾರಿ ಡೊಳ್ಳು ಕುಣಿತ ಮತ್ತಷ್ಟು ಕಳೆಗಟ್ಟುವಂತೆ ಮಾಡಿತು.

ಜಾತ್ರಾ ಮಹೋತ್ಸವ ಅಂಗವಾಗಿ ಅನ್ನ ಸಂತರ್ಪಣೆ ನಡೆಯಿತು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವವನ್ನು ಕಣಕಣ್ತುಂಬಿಕೊಂಡರು.

Share this article